ಅರಣ್ಯ ಕಾಪಾಡಲು ರೈತರು ಕೈಜೋಡಿಸಬೇಕು – ಸಿಸಿಎಫ್ ಮಾಲತಿ ಪ್ರಿಯಾ ಕರೆ

ಮಣಿಕಂಠ ಜನತಾ ರಾಯಭಾರಿ
2 Min Read

ಹನೂರು: ತಾಲೂಕಿನ ಕಾವೇರಿ ವನ್ಯಜೀವಿ ವಿಭಾಗದ ಗೋಪಿನಾಥಂ ವಲಯದ ಎರಕೆಯಂನಲ್ಲಿ ವೀರಪ್ಪನ್ ಗುಂಡಿಗೆ ಬಲಿಯಾದ ಅರಣ್ಯ ರಕ್ಷಕ ದಿ. ಶ್ರೀನಿವಾಸ್ ಅವರ ಸ್ಮಾರಕ ಬಳಿ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆಯನ್ನು ಆಚರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಚಾಮರಾಜನಗರ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಾಲತಿ ಪ್ರಿಯಾ ಅವರು ಮಾತನಾಡಿ, ಭೌಗೋಳಿಕ ಪ್ರದೇಶಕ್ಕಿಂತ ಅರಣ್ಯ ಪ್ರದೇಶವೇ ಹೆಚ್ಚಿರುವ ಜಿಲ್ಲೆ ಚಾಮರಾಜನಗರ. ಜಿಲ್ಲೆಯ ಶೇ. 51 ರಷ್ಟು ಪ್ರದೇಶ ಅರಣ್ಯವೇ ಇದೆ. ಹಾಗಾಗಿ ಇಲ್ಲಿ ಅರಣ್ಯ ಇಲಾಖೆಯ ಪಾತ್ರ ತುಂಬಾ ಮುಖ್ಯವಾಗುತ್ತದೆ. ವಾಚರ್ ನಿಂದ ಹಿಡಿದು, ಫಾರೆಸ್ಟ್ ಗಾರ್ಡ್, ಆರ್‌ಎಫ್‌ಒ, ಎಸಿಎಫ್, ಡಿಸಿಎಫ್, ಎಪಿಸಿಸಿಎಫ್ ವರೆಗೆ ಪ್ರತಿಯೊಬ್ಬ ಅಧಿಕಾರಿ, ಸಿಬ್ಬಂದಿ ತಮ್ಮ ಕರ್ತವ್ಯ ಮತ್ತು ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ.

ನಮ್ಮ ಸಿಬ್ಬಂದಿಯ ಕಠಿಣ ಪರಿಶ್ರಮ ಮತ್ತು ಸಮರ್ಪಣಾ ಭಾವದಿಂದಲೇ ಇಂದು ಕರ್ನಾಟಕ ಆನೆಗಳ ಸಂಖ್ಯೆಯಲ್ಲಿ ದೇಶದಲ್ಲೇ ಮೊದಲ ಸ್ಥಾನ, ಹುಲಿಗಳ ಸಂಖ್ಯೆಯಲ್ಲಿ ಎರಡನೇ ಸ್ಥಾನ ಮತ್ತು ಚಿರತೆಗಳ ಸಂಖ್ಯೆಯಲ್ಲಿ ಮೂರನೇ ಸ್ಥಾನದಲ್ಲಿದೆ. ಇದು ನಮಗೆ ಹೆಮ್ಮೆಯ ವಿಷಯ. ಇಲ್ಲಿರುವ ಎಲ್ಲಾ ಅರಣ್ಯ ಅಧಿಕಾರಿ, ಸಿಬ್ಬಂದಿಗೆ ನಾನು ಹೃದಯಪೂರ್ವಕವಾಗಿ ವಂದನೆ ಸಲ್ಲಿಸುತ್ತೇನೆ, ಅವರ ಸೇವೆಗೆ ನನ್ನ ಶಿರಸಾಷ್ಟಾಂಗ ನಮನ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿಸ್ವಜಿತ್ ಮಿಶ್ರಾ ಅವರು ಭಾಗವಹಿಸಿ ಹುತಾತ್ಮರ ತ್ಯಾಗ ಬಲಿದಾನ ಸ್ಮರಿಸಿದರು. ಹುತಾತ್ಮರ ಸ್ಮಾರಕಕ್ಕೆ ಪೂಜಾ ವಿಧಿ, ಕವಾಯತ್ತು, ಪುಷ್ಪಗುಚ್ಛ ಸಮರ್ಪಣೆ, ರಾಷ್ಟ್ರಗೀತೆ ಮತ್ತು ಮೌನಾಚರಣೆ ಮೂಲಕ ಗೌರವ ನಮನ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ನಿವೃತ್ತ ಡಿಸಿಎಫ್ ವಾಸುದೇವ್, ಮಲೆಮಹದೇಶ್ವರ ವನ್ಯಜೀವಿ ವಿಭಾಗದ ಪ್ರಭಾರ ಎಸಿಎಫ್ ವಿರಾಜ್ ಹೊಸೂರು, ಮ.ಬೆಟ್ಟ ಪೊಲೀಸ್ ಠಾಣೆಯ ಜಯರಾಂ, ವಲಯ ಅರಣ್ಯಾಧಿಕಾರಿಗಳಾದ ಗುರುಮೂರ್ತಿ, ಪುಟ್ಟರಾಜು , ಜಿತೇಂದ್ರ ರಮೇಶ್ ರಾಜಶೇಖರ್ ಮೂರ್ತಿ ಸೇರಿದಂತೆ ಅನೇಕ ಸಿಬ್ಬಂದಿಗಳು ಗೋಪಿನಾಥಮ್ ಗ್ರಾಮದ ಸಾರ್ವಜನಿಕರು ಇನ್ನಿತರರು ಹಾಜರಿದ್ದರು.

ಅರಣ್ಯವನ್ನು ಕಾಪಾಡುವುದು ಕೇವಲ ಅರಣ್ಯ ಇಲಾಖೆಯಿಂದ ಮಾತ್ರ ಸಾಧ್ಯವಿಲ್ಲ. ನಮ್ಮ ಸಿಬ್ಬಂದಿ ಜೊತೆಗೆ ರೈತ ಬಾಂಧವರು ಮತ್ತು ಸಾರ್ವಜನಿಕರು ಕೈಜೋಡಿಸಬೇಕು. ಎಲ್ಲರೂ ಸೇರಿ ಅರಣ್ಯ ಕಾಪಾಡುವ ಕೆಲಸ ಮಾಡೋಣ.

|ಮಾಲತಿ ಪ್ರಿಯಾ ಚಾಮರಾಜನಗರ ಜಿಲ್ಲೆ ಸಿಸಿಎಫ್

Share this Article
Leave a comment