ಅ.26ರಂದು ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ; ಅದ್ಧೂರಿ ಆಚರಣೆಗೆ ನಿರ್ಧಾರ

ಮಣಿಕಂಠ ಜನತಾ ರಾಯಭಾರಿ
3 Min Read

ಚಾಮರಾಜನಗರ, ಅ.9: ಇದೇ ತಿಂಗಳ 26ರಂದು ಶ್ರೀ ಮಹರ್ಷಿ ವಾಲ್ಮೀಕಿ ಅವರ ಜಯಂತಿ ಕಾರ್ಯಕ್ರಮವನ್ನು ನಗರದಲ್ಲಿ ಅದ್ದೂರಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ತೀರ್ಮಾನಿಸಲಾಯಿತು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಸಂಬಂಧ ಜಿಲ್ಲಾಧಿಕಾರಿ ಶ್ರೀರೂಪ ಅವರ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಯಿತು.

ಆರಂಭದಲ್ಲಿ ಜಿಲ್ಲಾಧಿಕಾರಿ ಶ್ರೀರೂಪ ಅವರು ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಬಗ್ಗೆ ಸಭೆಯಲ್ಲಿ ಹಾಜರಿದ್ದ ಪರಿಶಿಷ್ಟ ವರ್ಗದ, ಇತರೆ ಜನಾಂಗದ ಹಾಗೂ ವಿವಿಧ ಸಂಘ ಸಂಸ್ಥೆಗಳ ಮುಖಂಡರ ಸಲಹೆ, ಅಭಿಪ್ರಾಯ ಅನಿಸಿಕೆಗಳನ್ನು ಆಲಿಸಿದರು.

ಮಹರ್ಷಿ ವಾಲ್ಮೀಕಿಯವರು ರಾಮಾಯಣ ದರ್ಶನಂ ಮಹಾಗ್ರಂಥ ರಚನೆ ಮೂಲಕ ಸಮಾಜದ ಎಲ್ಲಾ ವರ್ಗಗಳಿಗೂ ಉತ್ತಮ ಸಂದೇಶ ನೀಡಿದ್ದು, ಜಯಂತಿಯನ್ನು ಜಿಲ್ಲೆಯಾದ್ಯಂತ ಹಬ್ಬದ ಮಾದರಿಯಲ್ಲಿ ಆಚರಿಸಬೇಕು. ಎಲ್ಲಾ ತಾಲೂಕುಗಳಲ್ಲಿ ಹಾಗೂ ಶಾಲಾ-ಕಾಲೇಜುಗಳಲ್ಲಿಯೂ ಜಯಂತಿ ಆಚರಣೆಯಾಗಬೇಕು. ಮೆರವಣಿಗೆಯನ್ನು ಹೆಚ್ಚಿನ ಸಾಂಸ್ಕøತಿಕ ಕಲಾತಂಡಗಳೊಡನೆ ವ್ಯವಸ್ಥಿತವಾಗಿ ಆಯೋಜಿಸಬೇಕು. ಸಮಾಜದ ಸಾಧಕರು ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಬೇಕು. ಮುಖ್ಯ ಭಾಷಣಕಾರರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಬೇಕು ಎಂಬುದು ಸೇರಿದಂತೆ ಇನ್ನಿತರೆ ಸಲಹೆಗಳನ್ನು ಮುಖಂಡರು ಸಲಹೆ ಮಾಡಿದರು.

ಅಲ್ಲದೆ ಜಿಲ್ಲಾಡಳಿತ ಭವನದ ಅವರಣದಲ್ಲಿ ಮಹರ್ಷಿ ವಾಲ್ಮೀಕಿಯವರ ಪ್ರತಿಮೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ವಾಲ್ಮೀಕಿಯವರ ಪ್ರತಿಮೆಯನ್ನು ನಿರ್ಮಾಣ ಮಾಡಿ ಮುಂದಿನ ವರ್ಷದ ಜಯಂತಿ ಕಾರ್ಯಕ್ರಮದ ಸಂದರ್ಭದಲ್ಲಿ ಉದ್ಘಾಟಿಸಲಾಗುವುದೆಂದು ಭರವಸೆ ನೀಡಿದ್ದರೂ ಪ್ರತಿಮೆ ಇನ್ನೂ ನಿರ್ಮಾಣದ ಹಂತದಲ್ಲಿಯೇ ಇದೆ. ಇದು ವಿಳಂಬ ಧೋರಣೆಯಾಗಿದೆ ಎಂದು ಮುಖಂಡರು ಸಭೆಯಲ್ಲಿ ಬೇಸರ ವ್ಯಕ್ತಪಡಿಸಿದರು. ಈ ಸಂಬಂಧ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಶ್ರೀರೂಪ ಅವರು ಪ್ರತಿಮೆ ನಿರ್ಮಾಣದಲ್ಲಿನ ತಾಂತ್ರಿಕ ಸಮಸ್ಯೆ ಪರಿಹರಿಸಿ ಶೀಘ್ರವಾಗಿ ಕ್ರಮ ವಹಿಸಲಾಗುವುದೆಂದು ತಿಳಿಸಿದರು.

ಬಳಿಕ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಕುರಿತು ಮಾತನಾಡಿದ ಜಿಲ್ಲಾಧಿಕಾರಿ ಶ್ರೀರೂಪ ಅವರು ಅಕ್ಟೋಬರ್ 26ರಂದು ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಹಾಗೂ ಶಿಷ್ಟಾಚಾರ ಪ್ರಕಾರವೇ ಆಚರಿಸಲಾಗುವುದು. ಅಂದು ಬೆಳಿಗ್ಗೆ ನಗರದ ಪ್ರವಾಸಿ ಮಂದಿರದಿಂದ ಬೆಳ್ಳಿರಥದಲ್ಲಿ ಅಲಂಕೃತ ವಾಲ್ಮೀಕಿಯವರ ಭಾವಚಿತ್ರ ಮೆರವಣಿಗೆ ವಿವಿಧ ಸಾಂಸ್ಕøತಿಕ ಕಲಾತಂಡಗಳೊಂದಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿ ಮಾರಿಗುಡಿ ಮುಂಭಾಗ ತಲುಪಲಿದೆ. ಅಲ್ಲಿಯೇ ವೇದಿಕೆ ಕಾರ್ಯಕ್ರಮ ನಡೆಯಲಿದೆ ಎಂದರು.

ಜಯಂತಿ ಕಾರ್ಯಕ್ರಮದ ವ್ಯವಸ್ಥಿತ ನಿರ್ವಹಣೆಗಾಗಿ ಜಿಲ್ಲಾಮಟ್ಟದ ವಿವಿಧ ಅಧಿಕಾರಿಗಳನ್ನೊಳಗೊಂಡ ಸಮಿತಿ ರಚಿಸಲಾಗಿದ್ದು, ಸಮಿತಿಯಲ್ಲಿರುವ ಅಧಿಕಾರಿಗಳು ಕಾರ್ಯಕ್ರಮ ಆಯೋಜನೆಯಲ್ಲಿ ಯಾವುದೇ ಲೋಪಗಳಿಗೆ ಅವಕಾಶವಾಗದಂತೆ ನೋಡಿಕೊಳ್ಳಬೇಕು. ಮೆರವಣಿಗೆ ಹೊರಡುವ ನಗರದ ರಸ್ತೆಗಳನ್ನು ತಳಿರು-ತೋರಣಗಳಿಂದ ಅಲಂಕರಿಸಬೇಕು. ಸ್ವಚ್ಚತೆ ಸೇರಿದಂತೆ ಅಗತ್ಯ ಸಿದ್ದತಾ ಕಾರ್ಯಗಳನ್ನು ಪೂರ್ಣಗೊಳಿಸಬೇಕು. ವೇದಿಕೆ ಕಾರ್ಯಕ್ರಮ ಸ್ಥಳದಲ್ಲಿಯೂ ಕುಡಿಯುವ ನೀರು, ಸ್ವಚ್ಚತೆ ಸೇರಿದಂತೆ ಅವಶ್ಯ ಸಿದ್ದತೆಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೈಗೊಳ್ಳುವಂತೆ ಜಿಲ್ಲಾಧಿಕಾರಿಯವರು ಸೂಚಿಸಿದರು.

ವಾಲ್ಮೀಕಿಯವರ ಜೀವನ-ಸಾಧನೆ ಕುರಿತು ಬೆಳಕು ಚೆಲ್ಲುವ ಉತ್ತಮ ಭಾಷಣಕಾರರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುವುದು. ಜಯಂತಿ ದಿನದಂದು ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಎಲ್ಲಾ ತಾಲೂಕುಮಟ್ಟದ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಒಟ್ಟಾರೆ ಮಹರ್ಷಿ ವಾಲ್ಮೀಕಿಯವರ ಜಯಂತಿ ಕಾರ್ಯಕ್ರಮವನ್ನು ನಗರದಲ್ಲಿ ಅದ್ದೂರಿ, ಅರ್ಥಪೂರ್ಣ ಹಾಗೂ ಸುಸೂತ್ರವಾಗಿ ಆಚರಿಸಲು ಎಲ್ಲಾ ಮುಖಂಡರು, ಸಂಘಸಂಸ್ಥೆಗಳು, ಕನ್ನಡಪರ ಸಂಘಟನೆಗಳು ಸಹಕಾರ ನೀಡುವಂತೆ ಜಿಲ್ಲಾಧಿಕಾರಿ ಶ್ರೀರೂಪ ಅವರು ಸಭೆಯಲ್ಲಿ ಕೋರಿದರು.

ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷರಾದ ಎಚ್.ವಿ. ಚಂದ್ರು, ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಿಯದರ್ಶಿನಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್. ಶಶಿಧರ್, ಡಿ.ವೈ.ಎಸ್.ಪಿ ಸ್ನೇಹರಾಜ್, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಎಚ್.ಎಸ್. ಬಿಂದ್ಯಾ, ಜಿಲ್ಲಾಮಟ್ಟದ ಅಧಿಕಾರಿಗಳು, ಮುಖಂಡರಾದ ಎಂ. ರಾಮಚಂದ್ರ, ಶ್ರೀನಿವಾಸನಾಯಕ, ಕೃಷ್ಣನಾಯಕ, ಚಾ.ಸಿ. ಸೋಮನಾಯಕ, ಬದನಗುಪ್ಪೆ ನಾರಾಯಣ, ಬದನಗುಪ್ಪೆ ಶಿವರಾಮು, ಚಂಗುಮಣಿ, ಜಿ. ಬಂಗಾರು, ಅಮಚವಾಡಿ ಮಹೇಂದ್ರ, ಕುಮಾರ್, ನಟರಾಜು, ಶಿವು ವಿರಾಟ್, ಬಿಸಿಲವಾಡಿ ನಾರಾಯಣನಾಯಕ, ಬಸವಾಪುರ ರಮೇಶ, ಸಮಾಜದ ಇನ್ನಿತರ ಮುಖಂಡರು ಸಭೆಯಲ್ಲಿ ಉಪಸ್ಥಿತರಿದ್ದರು.

Share this Article
Leave a comment