ಈ ದೃಷ್ಟಿಯಿಂದ ಎ.ಆರ್.ಕೃಷ್ಣಮೂರ್ತಿ ಅವರಿಗೆ ಸಚಿವ ಸ್ಥಾನ ಕೊಡಬೇಕು

ಮಣಿಕಂಠ ಜನತಾ ರಾಯಭಾರಿ
2 Min Read

ಕೊಳ್ಳೇಗಾಲ: ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂಬ ಚರ್ಚೆ ಜೋರಾಗಿದೆ.

ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಶಾಸಕ ಶಾಸಕರಾದ ಎ. ಯಆರ್.ಕೃಷ್ಣಮೂರ್ತಿ ಅವರಿಗೆ ಸಚಿವ ಸ್ಥಾನ ನೀಡುವಂತೆ ಹಲವಾರು ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಸಂಘ-ಸಂಸ್ಥೆಗಳ ಮುಖಂಡರು ಒತ್ತಾಯಿಸುತ್ತಲೇ ಇರುವುದು ಕಂಡು ಬರುತ್ತಿದೆ. ಅದರಂತೆ ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿಯ ತಾಲ್ಲೂಕು ಅಧ್ಯಕ್ಷರಾದ ರಾಜೇಂದ್ರ ಅವರು ನೇತೃತ್ವದಲ್ಲಿ ಕೊಳ್ಳೇಗಾಲ ತಾಲ್ಲೂಕು ಕಾಂಗ್ರೆಸ್ ಮುಖಂಡರುಗಳು ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ.

ಪಟ್ಟಣದ ಲೋಕೋಪಯೋಗಿ ಇಲಾಖೆ ಅತೀ ಗಣ್ಯರ ಅತಿಥಿ ಗೃಹದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲ್ಲೂಕು ಅಧ್ಯಕ್ಷ ರಾಜೇಂದ್ರ ಮಾತನಾಡಿ, ಕೊಳ್ಳೇಗಾಲ ಕ್ಷೇತ್ರ ಹಾಗೂ ಜಿಲ್ಲೆಯ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಮುಂದಿನ ದಿನಗಳಲ್ಲಿ ನಡೆಯಲಿರುವ ಸಚಿವ ಸಂಪುಟ ವಿಸ್ತರಣೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಶಾಸಕ ಎ.ಆರ್.ಕೃಷ್ಣಮೂರ್ತಿ ಅವರಿಗೆ ಸಚಿವ ಸ್ಥಾನವನ್ನು ಕಲ್ಪಿಸಬೇಕು ಎಂದರು.

ಶಾಸಕ ಎ.ಆರ್.ಕೃಷ್ಣಮೂರ್ತಿ ಅವರು ಜಾತ್ಯತೀತ ಮನೋಭಾವದ ಶಾಸಕರಾಗಿದ್ದು, ಅವರು ಎಲ್ಲಾ ಜಾತಿ ಸಮುದಾಯಗಳನ್ನು ಕೂಡ ವಿಶ್ವಾಸಕ್ಕೆ ತೆಗೆದುಕೊಂಡು ಎಲ್ಲರಿಗೂ ಕೆಲಸ ಮಾಡಿಕೊಡುತ್ತಾರೆ. ಎಲ್ಲಾ ಸಮುದಾಯದ ಬೀದಿಗಳಲ್ಲಿಯೂ ಆಗಬೇಕಾದ ಅಭಿವೃದ್ಧಿ ಕಾರ್ಯಗಳನ್ನು ಶ್ರಮವಹಿಸಿ ಮಾಡಿಕೊಡುತ್ತಿದ್ದಾರೆ ಎಂದರು.

ಎ.ಆರ್.ಕೃಷ್ಣಮೂರ್ತಿಯವರು ಈಗಾಗಲೇ ಮೂರನೇ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು, ಅವರಿಗೆ ರಾಜಕೀಯ ಅನುಭವ ಮತ್ತು ಅಭಿವೃದ್ಧಿಯ ಬಗ್ಗೆ ಆಳವಾಗಿ ತಿಳಿದುಕೊಂಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಜೊತೆ ಉತ್ತಮ ಬಾಂದವ್ಯವನ್ನು ಇಟ್ಟುಕೊಂಡಿದ್ದಾರೆ. ಸರ್ಕಾರದಿಂದ ವಿಶೇಷ ಅನುದಾನಗಳನ್ನು ತಂದು ಜಿಲ್ಲೆಯನ್ನು ಸಮಗ್ರ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಾರೆ. ಈ ನಿಟ್ಟಿನಲ್ಲಿ ಅವರಿಗೆ ಸಚಿವ ಸ್ಥಾನವನ್ನು ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ದೇಶದಲ್ಲಿ ತಲೆದೂರಿದ್ದ ಕೋವಿಡ್ 19 ಸಮಯದಲ್ಲಿ ರಾಜ್ಯ ಮಟ್ಟದ ಸಮಸ್ಯೆಗಳ ಬಗ್ಗೆ ಸದನದಲ್ಲಿ ಮಾತನಾಡಿ ಚಾಮರಾಜನಗರ ಜಿಲ್ಲೆಯಲ್ಲಿ ಕೋವಿಡ್ ಗೆ ಒಳಗಾಗಿ ಮೃತರಾಗಿದ್ದವರ ಕುಟುಂಬಗಳಿಗೆ ಸರ್ಕಾರದ ಆರ್ಥಿಕ ನೆರವನ್ನು ಒದಗಿಸಿಕೊಟ್ಟಿದ್ದಾರೆ. ಜಿಲ್ಲೆಯಲ್ಲಿ ವೈದ್ಯಕೀಯ ಸೌಲಭ್ಯಗಳು ದೊರಕುವಂತೆ ವ್ಯವಸ್ಥೆ ಮಾಡಿಸಿದ್ದಾರೆ. ಆದ್ದರಿಂದ ಶಾಸಕರಾದ ಎ. ಆರ್. ಕೃಷ್ಣಮೂರ್ತಿಯವರಿಗೆ ಸಚಿವ ಸ್ಥಾನ ಕೊಟ್ಟರೆ ಜಿಲ್ಲೆಯಲ್ಲಿ ಹಲವು ಅಭಿವೃದ್ಧಿ ಕೆಲಸ ಕಾರ್ಯಗಳು ನಡೆಯುತ್ತವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ನಿರ್ದೇಶಕರುಗಳಾದ ಕುಣಗಳ್ಳಿ ರಾಜುಗೌಡ , ನಾಗವೇಣಿ, ಸಹನಾ ಪ್ರಿಯ, ಶಿವಕುಮಾರ್ ಸ್ವಾಮಿ, ನಿರಂಜನ್ ಕುಮಾರ್, ಲಿಂಗರಾಜು, ಹರ್ಷ, ಶ್ರೀನಿವಾಸ್ ಮೂರ್ತಿ, ಹಾಗೂ ಇನ್ನಿತರರು ಇದ್ದರು.

Share this Article
Leave a comment