ಕೆಬ್ಬೇಪುರದಲ್ಲಿ ಅಸ್ಪೃಶ್ಯತೆ ಆಚರಣೆ; ನಾಲ್ಕು ಜನರ ಮೇಲೆ ಎಫ್ಐಆರ್ ದಾಖಲು 

ಮಣಿಕಂಠ ಜನತಾ ರಾಯಭಾರಿ
1 Min Read

ಚಾಮರಾಜನಗರ: ತಾಲೂಕಿನ ಕೆಬ್ಬೇಪುರ ಗ್ರಾಮದಲ್ಲಿ ಶಾಲಾ ಮಕ್ಕಳಿಗೆ ಊಟ ಬಡಿಸದೇ ಅಸ್ಪೃಶ್ಯತೆ ಆಚರಣೆ ಮಾಡಿದ್ದ ನಾಲ್ವರ ವಿರುದ್ಧ ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ತಾಲೂಕಿನ ಕೆಸ್ಟೇಪುರ ಗ್ರಾಮದಲ್ಲಿ ಸೆ.18ರಂದು ಬಂಡಿ ಮೆರವಣಿಗೆ ಉತ್ಸವದ ಅಂಗವಾಗಿ ಬಸವೇಶ್ವರ ದೇವಸ್ಥಾನದ ಮುಂಭಾಗ ಶಾಮಿಯಾನ ಹಾಕಿ ಸಾರ್ವಜನಿಕರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಈ ವೇಳೆ ಗ್ರಾಮದ ಸರ್ಕಾರಿ ಶಾಲೆಯ ಮಕ್ಕಳನ್ನು ಊಟಕ್ಕೆ ಆಹ್ವಾನಿಸಲಾಗಿತ್ತು ಎನ್ನಲಾಗಿದೆ.

ಶಾಲೆಯ ಮುಖ್ಯ ಶಿಕ್ಷಕ ಹರೀಶ್ ಅವರು ಮಕ್ಕಳನ್ನು ಊಟದ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದು ಊಟದ ಪಂಕ್ತಿಯಲ್ಲಿ ಕುಳಿತಿದ್ದ ವೇಳೆ ಸವರ್ಣೀಯರು ದಲಿತ ಸಮುದಾಯಕ್ಕೆ ಸೇರಿದ ಮಕ್ಕಳಿಗೆ ಊಟ ಬಡಿಸದೇ ಪಂಕ್ತಿಯಿಂದ ಎಬ್ಬಿಸಿ ಹೊರಗೆ ಕಳುಹಿಸಿದ್ದಾರೆ. ಊಟ ಸಿಗದೆ ಮಕ್ಕಳು ಶಾಲೆಗೆ ಮರಳಿದ್ದು, ಬಳಿಕ ಮಧ್ಯಾಹ್ನ ಸುಮಾರು 3.30ಕ್ಕೆ ಶಾಲೆಯಲ್ಲಿ ಉಪ್ಪಿಟ್ಟು ತಯಾರಿಸಿ ನೀಡಲಾಗಿದೆ ಎಂದು ಕೆಬ್ಬೆಪುರ ಗ್ರಾಮದ ಕೃಷ್ಣಮೂರ್ತಿ ಅವರು ಬೇಗೂರು ಠಾಣೆಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಈ ಸಂಬಂಧ ಗ್ರಾಮದ ಮಲ್ಲೇಶ್, ಮಹೇಂದ್ರ, ಶಾಲೆಯ ಮುಖ್ಯ ಶಿಕ್ಷಕ ಹರೀಶ್ ಹಾಗೂ ಎಸ್‌ಡಿಎಂಸಿ ಅಧ್ಯಕ್ಷ ಸಂಪತ್ ವಿರುದ್ಧ ಎಸ್ಸಿ, ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಬೇಗೂರು ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Share this Article
Leave a comment