ಗಾನಕೋಗಿಲೆ ಎಸ್.ಜಾನಕಿ ಅವರ ಆಸೆಯಂತೆ ಮೈಸೂರಿನಲ್ಲೇ ಅಂತ್ಯಕ್ರಿಯೆ

ಮಣಿಕಂಠ ಜನತಾ ರಾಯಭಾರಿ
1 Min Read

ಮೈಸೂರು: ಭಾರತ ಚಿತ್ರರಂಗದ ಖ್ಯಾತ ಹಿನ್ನೆಲೆ ಗಾಯಕಿ ಎಸ್. ಜಾನಕಿಯವರು ಇಹಲೋಕ ತ್ಯಜಿಸಿದ್ದಾರೆ. ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಚಿತ್ರರಂಗದ ಗಾನಕೋಗಿಲೆ ಎಂದೇ ಸುಪ್ರಸಿದ್ಧ 88 ವರ್ಷದ ಗಾಯಕಿ ಜಾನಕಿ ವಿಧಿವಶರಾಗಿದ್ದು, ಎಸ್. ಜಾನಕಿ ಅವರ ಆಸೆಯಂತೆ ಮೈಸೂರಿನ ತೋಟದ ಮನೆಯಲ್ಲಿ ಅಂತ್ಯಸಂಸ್ಕಾರ ಮಾಡಲು ಕುಟುಂಬಸ್ಥರು ನಿರ್ಧಾರ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ದಕ್ಷಿಣ ಭಾರತದ ಖ್ಯಾತ ಗಾಯಕಿ ಎಸ್. ಜಾನಕಿ ಅವರ ನಿಧನ ಹಿನ್ನೆಲೆ ಮೈಸೂರು ಜಿಲ್ಲೆಯ ಉಸ್ತುವಾರಿ ಸಚಿವ ಯತೀಂದ್ರ ಸಿದ್ದರಾಮಯ್ಯ ಅವರು ಸ್ಥಳೀಯ ಶಾಸಕರು, ಜಾನಕಿ ಅವರ ಕುಟುಂಬಸ್ಥರು, ಪೊಲೀಸ್ ಆಯುಕ್ತರು, ಜಿಲ್ಲಾಧಿಕಾರಿಗಳ ಜೊತೆ ಸಭೆ‌ ನಡೆಸಿ, ಪಾರ್ಥಿವ ಶರೀರದ ಅಂತಿಮ ದರ್ಶನದ ವ್ಯವಸ್ಥೆ, ಅಂತ್ಯಸಂಸ್ಕಾರದ ಸ್ಥಳ ನಿಗದಿ ಬಗ್ಗೆ ಚರ್ಚೆ ನಡೆಸಿದರು.

ಸಭೆ ಬಳಿಕ ಮಾಹಿತಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಯತೀಂದ್ರ ಸಿದ್ದರಾಮಯ್ಯ, ಸರ್ಕಾರಿ ಗೌರವದೊಂದಿಗೆ ಎಸ್. ಜಾನಕಿ ಅಂತ್ಯಕ್ರಿಯೆ ನಡೆಸುವಂತೆ ಸಿಎಂ ಡಿಕೆಶಿ ಸೂಚನೆ ಕೊಟ್ಟಿದ್ದಾರೆ. ಅವರ ಅಂತ್ಯಕ್ರಿಯೆಯನ್ನು ಮೈಸೂರಿನಲ್ಲೇ ನಡೆಸುವಂತೆ ಕುಟುಂಬಸ್ಥರು ತಿಳಿಸಿದ್ದಾರೆ ಎಂದು ಸಚಿವ ಯತೀಂದ್ರ ಸಿದ್ದರಾಮಯ್ಯ ಅವರು ಮಾಹಿತಿ ನೀಡಿದರು.

ಮಹಾರಾಜ ಕಾಲೇಜು ಮೈದಾನದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು,  ಇಂದು ರಾತ್ರಿ ಬೋಗಾದಿ ಮನೆಗೆ ಪಾರ್ಥಿವ ಶರೀರ ರವಾನಿಸಲಾಗುತ್ತದೆ. ನಾಳೆ ಬೆಳಗ್ಗೆ 8 ಗಂಟೆಯಿಂದ ಮಹಾರಾಜ ಕಾಲೇಜು ಮೈದಾನದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬಳಿಕ ಗದ್ದಿಗೆ ರಸ್ತೆ  ಮೂಲಕ ಸಾಗಿ ಕನಿಯನಹುಂಡಿಯ ತೋಟದ ಮನೆಯಲ್ಲಿ ಸಂಜೆ 4.30 ಗಂಟೆಗೆ ಅಂತ್ಯಕ್ರಿಯೆ ನಡೆಯಲಿದೆ ಎಂಬ ಮಾಹಿತಿ ಲಭ್ಯವಿದೆ.

Share this Article
Leave a comment