ಚಾಮರಾಜನಗರ: ಸಾರ್ವಜನಿಕ ಸುರಕ್ಷತೆ ಹಾಗೂ ರಸ್ತೆ ಸಂಚಾರವನ್ನು ಸುಗಮಗೊಳಿಸುವ ಉದ್ದೇಶದಿಂದ ಚಾಮರಾಜನಗರ ಜಿಲ್ಲಾ ಪೊಲೀಸ್ ವತಿಯಿಂದ ಜಿಲ್ಲೆಯಾದ್ಯಂತ ಎ.ಎನ್.ಪಿ.ಆರ್. (Automatic Number Plate Recognition) ಕ್ಯಾಮೆರಾಗಳನ್ನು ಪ್ರಮುಖ ಹೆದ್ದಾರಿಗಳಲ್ಲಿ ಅಳವಡಿಸಲಾಗಿದೆ.
ಎ.ಎನ್.ಪಿ.ಆರ್ ಕ್ಯಾಮೆರಾಗಳ ಮೂಲಕ ವಾಹನಗಳ ನಂಬರ್ ಪ್ಲೇಟ್ಗಳನ್ನು ಸ್ವಯಂ ಚಾಲಿತವಾಗಿ ಗುರುತಿಸಿ ಸಂಚಾರಿ ಉಲ್ಲಂಘನೆಗಳನ್ನು ಪರಿಣಾಮಕಾರಿಯಾಗಿ ಪತ್ತೆಹಚ್ಚಲು ಹಾಗು ಅಗತ್ಯ ಕಾನೂನು ಕ್ರಮ ಕೈಗೊಳ್ಳಲು ಇದು ಸಹಕಾರಿಯಾಗಿರುತ್ತದೆ. ವಿಶೇಷವಾಗಿ ಹೆಲೈಟ್ ಧರಿಸದೆ, ಸೀಟ್ ಬೆಲ್ಟ್ ಧರಿಸದೇ, ದ್ವಿಚಕ್ರವಾಹನದಲ್ಲಿ ಇಬ್ಬರಿಗಿಂತ ಹೆಚ್ಚು ಜನರು ಸವಾರಿಮಾಡುವುದು, ವಾಹನ ಚಾಲನೆ ಮಾಡುವಾಗ ಮೊಬೈಲ್ ಫೋನ್ ಬಳಕೆಮಾಡಿ ಸಂಚಾರಿ ನಿಯಮಗಳನ್ನು ಉಲ್ಲಂಘನೆಮಾಡುವ ವಾಹನ ಚಾಲಕರುಗಳನ್ನು ವಿಶೇಷವಾಗಿ ಗುರುತಿಸಿ ಸದರಿ ವಾಹನಗಳ ಮಾಲೀಕರ ವಿಳಾಸಕ್ಕೆ ದಂಡ ವಿಧಿಸಿದ ಪೊಲೀಸ್ ನೋಟೀಸ್ಗಳನ್ನು ಅಂಚೆ ಮೂಲಕ ಕಳುಹಿಸಲಾಗುವುದು ಹಾಗೂ ವಾಹನ ಮಾಲೀಕರ ಮೊಬೈಲ್ ಸಂಖ್ಯೆಗೆ ದಂಡ ವಿಧಿಸಿರುವ ಬಗ್ಗೆ ಎಸ್.ಎಂ.ಎಸ್. ಮೂಲಕ ಮಾಹಿತಿ ನೀಡಲಾಗುವುದು.
ಎ.ಎನ್.ಪಿ.ಆರ್. ಕ್ಯಾಮೆರಾ ವ್ಯವಸ್ಥೆಯು ವಾಹನಗಳ ಸಂಚಾರವನ್ನು ಪರಿಣಾಮಕಾರಿಯಾಗಿ ಮೇಲ್ವಿಚಾರಣೆ ಮಾಡುವುದರ ಜೊತೆಗೆ ಕಳುವಾದ ವಾಹನಗಳು ಹಾಗೂ ಕಾನೂನು ಬಾಹಿರ ಚಟುವಟಿಕೆಗಳಿಗೆ ಸಂಬಂಧಿಸಿದ ವಾಹನಗಳನ್ನು ಪತ್ತೆಹಚ್ಚಲು ಸಹಾ ನೆರವಾಗುತ್ತದೆ.
ಸಾರ್ವಜನಿಕರು ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ ಹೆಲೈಟ್ ಮತ್ತು ಸೀಟ್ ಬೆಲ್ಟ್ ಧರಿಸಿ, ವೇಗದ ಮಿತಿಯನ್ನು ಪಾಲಿಸಿ, ವಾಹನ ಚಾಲನೆ ಮಾಡುವಾಗ ಮೊಬೈಲ್ ಫೋನ್ ಬಳಸದೇ ಸುರಕ್ಷಿತವಾಗಿ ಸಂಚರಿಸಿ ಎಂಬ ಸಂದೇಶದ ಮೂಲಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಮುತ್ತುರಾಜು ಅವರು ಸಾರ್ವಜನಿಕರಿಗೆ ಸೂಚನೆ ನೀಡಿರುತ್ತಾರೆ.