ಚಾಮರಾಜನಗರ: ಮಲೆ ಮಹದೇಶ್ವರ ವನ್ಯಧಾಮದಲ್ಲಿ ತಾಯಿಯಿಂದ ಬೇರ್ಪಟ್ಟು ಅಲೆದಾಡುತ್ತಿದ್ದ ಸುಮಾರು ಒಂದು ತಿಂಗಳ ಆನೆಮರಿಯನ್ನು ಆರೋಗ್ಯ ಹಾಗೂ ಸುರಕ್ಷತೆಯ ದೃಷ್ಟಿಯಿಂದ ಮೈಸೂರಿನ ಮೃಗಾಲಯಕ್ಕೆ ರವಾನಿಸಲಾಗಿದೆ.
ಹನೂರು ತಾಲೂಕಿನ ಅಜ್ಜಿಪುರ ಸಮೀಪದ ಕಣಿವೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಮುಖ್ಯ ರಸ್ತೆಯಲ್ಲಿ ಭಾನುವಾರದಿಂದ ಆನೆಮರಿ ತಾಯಿಗಾಗಿ ಹುಡುಕಾಡುತ್ತಾ ಅಲೆದಾಡುತ್ತಿತ್ತು. ಆನೆಮರಿ ಅಲೆದಾಡುತ್ತಿರುವುದನ್ನು ಗಮನಿಸಿದ ಅರಣ್ಯ ಸಿಬ್ಬಂದಿ, ತಾಯಿ ಆನೆಯೊಂದಿಗೆ ಮರಿಯನ್ನು ಸೇರಿಸಲು ಹಲವು ರೀತಿಯಲ್ಲಿ ಪ್ರಯತ್ನಿಸಿದ್ದಾರೆ.
ಆದರೆ ಸುತ್ತಮುತ್ತಲ ಪ್ರದೇಶದಲ್ಲಿ ತಾಯಿ ಆನೆ ಅಥವಾ ಆನೆಗಳ ಹಿಂಡು ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಆನೆಮರಿಯನ್ನು ಸುರಕ್ಷಿತವಾಗಿ ಸೆರೆಹಿಡಿದು, ಅಗತ್ಯ ಪೋಷಣೆ ಹಾಗೂ ಆರೈಕೆ ಒದಗಿಸುವ ಉದ್ದೇಶದಿಂದ ಮೈಸೂರಿನ ಮೃಗಾಲಯಕ್ಕೆ ರವಾನಿಸಲಾಗಿದೆ. ಆನೆಮರಿಯ ಆರೋಗ್ಯದ ಮೇಲೆ ಅರಣ್ಯ ಇಲಾಖೆ ಹಾಗೂ ಮೃಗಾಲಯದ ಸಿಬ್ಬಂದಿ ನಿಗಾ ವಹಿಸಿದ್ದಾರೆ.