ನಗರದ ತುಂಬೆಲ್ಲಾ ಬಸವ ಭಕ್ತ ಸಾಗರ

ಮಣಿಕಂಠ ಜನತಾ ರಾಯಭಾರಿ
1 Min Read

ಚಾಮರಾಜನಗರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಸಹಯೋಗದಲ್ಲಿ ಆಯೋಜಿಸಿರುವ ಬಸವೇಶ್ವರ ಜಯಂತಿಗೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಹರಿದು ಬರುತ್ತಿದ್ದಾರೆ.

ನಗರದ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿರುವ ಬಸವೇಶ್ವರರ ಪುತ್ಥಳಿ ಮುಂಭಾಗ ಜಮಾಯಿಸಿರುವ ಸಾವಿರಾರು ಭಕ್ತರು ವಿಜೃಂಭಣೆಯ ಬಸವ ಜಯಂತಿಗೆ ಸಾಕ್ಷಿಯಾಗಿದ್ದಾರೆ.

ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನಿಧ್ಯದಲ್ಲಿ, ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಅವರು ಬಸವೇಶ್ವರರ ಭವ್ಯ ಭಾವಚಿತ್ರ ಮೆರವಣಿಗೆಗೆ ಚಾಲನೆ ನೀಡಿದರು. ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಎಂ.ಆರ್.ಮಂಜುನಾಥ್, ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ, ಜಿಲ್ಲಾಧಿಕಾರಿ ಶ್ರೀರೂಪಾ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

ಜಿಲ್ಲಾಡಳಿತ ಭವನದ ಮುಂಭಾಗದಿಂದ ಪ್ರಾರಂಭವಾಗಿರುವ ಮೆರವಣಿಗೆ ಬಿ.ರಾಚಯ್ಯ ಜೋಡಿರಸ್ತೆಯ ಮೂಲಕ ಸಾಗುತ್ತಿದೆ. ನಂದಿಧ್ವಜ, ವೀರಗಾಸೆ ಕುಣಿತ ಹಾಗೂ ಇನ್ನಿತರೆ ಜಾನಪದ ಕಲಾತಂಡಗಳು ಮೆರವಣಿಗೆಗೆ ಮೆರುಗು ತುಂಬುತ್ತಿದೆ. ಎಲ್ಲೆಲ್ಲೂ ಬಸವಾದಿ ಶರಣರಿಗೆ ಜಯಘೋಷಗಳು ಮೊಳಗುತ್ತಿದ್ದು, ಬಸವೇಶ್ವರರ ಜಯಂತಿ ಮಹೋತ್ಸವಕ್ಕೆ ಭಕ್ತ ಸಾಗರವೇ ಹರಿದು ಬರುತ್ತಿದೆ.

 

Share this Article
Leave a comment