ಕೊಳ್ಳೇಗಾಲ: ತಾಲ್ಲೂಕಿನ ಸರಗೂರು ಹೊರವಲಯದ ರಸ್ತೆಯಲ್ಲಿ ಪ್ಯಾಸೆಂಜರ್ ಆಟೋ ಮಗುಚಿ ಚಾಲಕ ಸೇರಿ ಆರು ಪ್ರಯಾಣಿಕರು ಗಾಯಗೊಂಡಿರುವ ಘಟನೆ ಮಂಗಳವಾರ ಬೆಳಗ್ಗೆ ಜರುಗಿದೆ.
ತಾಲೂಕಿನ ಸತ್ತೇಗಾಲ ಗ್ರಾಮದ ಪುಟ್ಟಮ್ಮ(60), ಮನೀಶ್(14), ಲಕ್ಷ್ಮಮ್ಮ(58), ಚಾಲಕ ಮಧು(55), ಪಟ್ಟಣದ ಮಂಜುಳಾ(35) ಹಾಗೂ ಮತ್ತೀಪುರ ಗ್ರಾಮದ ಮಹದೇವಮ್ಮ(70) ಇವರು ಗಾಯಗೊಂಡಿದ್ದಾರೆ.

ಸತ್ತೇಗಾಲ ಕಡೆಯಿಂದ ಕೊಳ್ಳೇಗಾಲ ಪಟ್ಟಣಕ್ಕೆ ಬರುತ್ತಿದ್ದ ಪ್ರಯಾಣಿಕರು ತುಂಬಿದ್ದ ಪ್ಯಾಸೆಂಜರ್ ಆಟೋ ಸರಗೂರು ಗ್ರಾಮದ ಹೊರವಲಯದ ರಸ್ತೆಯಲ್ಲಿ ಮಗುಚಿದ್ದ ಪರಿಣಾಮ ಪ್ರಯಾಣಿಕರು ಗಾಯಗೊಂಡಿದ್ದರು. ತಕ್ಷಣ ಗಾಯಾಳುಗಳನ್ನು ಕೊಳ್ಳೇಗಾಲ ಆಸ್ಪತ್ರೆಗೆ ಕರೆತರಲಾಯಿತು.
ಆಸ್ಪತ್ರೆಯ ವೈದ್ಯರಾದ ಡಾ.ಟೀನಾ ಅವರು ಗಾಯಾಳುಗಳಿಗೆ ಚಿಕಿತ್ಸೆ ನೀಡಿ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮೈಸೂರು ಹಾಗೂ ಚಾಮರಾಜನಗರ ಸಿಮ್ಸ್ ಆಸ್ಪತ್ರೆಗಳಿಗೆ ಕಳುಹಿಸಿಕೊಡಲಾಯಿತು. ಚಾಲಕ ಮಾತ್ರ ಕೊಳ್ಳೇಗಾಲ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.