ಬುಡಕಟ್ಟು ಕುಟುಂಬಗಳಿಗೆ ಶೀಘ್ರದಲ್ಲೇ ಪೌಷ್ಟಿಕ ಆಹಾರದ ಕಿಟ್ ವಿತರಣೆ- ಎಂಎಲ್ಸಿ ಕೆ.ಶಿವಕುಮಾರ್ ಮನವಿಗೆ ಸ್ಪಂದನೆ 

ಮಣಿಕಂಠ ಜನತಾ ರಾಯಭಾರಿ
1 Min Read

ಮೈಸೂರು,ಸೆ.02: ಬುಡಕಟ್ಟು ಕುಟುಂಬಗಳಿಗೆ ಸರ್ಕಾರದಿಂದ ವಿತರಿಸುತ್ತಿದ್ದ ಪೌಷ್ಟಿಕ ಆಹಾರದ ಕಿಟ್ ಪೂರೈಕೆ ಒಪ್ಪಂದದ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸಿ ಶೀಘ್ರದಲ್ಲೇ ಪೌಷ್ಟಿಕ ಆಹಾರದ ಕಿಟ್ ವಿತರಿಸಲಾಗುವುದು ಎಂದು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಚಿವರಾದ ಟಿ.ರಘುಮೂರ್ತಿ ಅವರು ಭರವಸೆ ನೀಡಿದರು.

ಬೆಂಗಳೂರಿನ ವಿಧಾನಸೌಧದ ಕಚೇರಿಯಲ್ಲಿ ಸಚಿವರನ್ನು ಭೇಟಿ ಮಾಡಿದ ವಿಧಾನ ಪರಿಷತ್ ಸದಸ್ಯರಾದ ಕೆ.ಶಿವಕುಮಾರ್ ಅವರು, ಕಳೆದ ಆರು ತಿಂಗಳಿಂದ ಪೌಷ್ಟಿಕ ಆಹಾರದ ಕಿಟ್ ವಿತರಣೆಯು ಸ್ಥಗಿತಗೊಂಡಿದ್ದು, ಇದರಿಂದ ಸಾವಿರಾರು ಆದಿವಾಸಿ ಕುಟುಂಬಗಳ ಸಂಕಷ್ಟಕ್ಕೆ ಸಿಲುಕಿವೆ ಎಂದು ಪತ್ರ ಸಲ್ಲಿಸಿ ಸಚಿವರ ಗಮನಕ್ಕೆ ತಂದರು.

ಈ ಕುರಿತು ಪ್ರತಿಕ್ರಿಯಿಸಿದ ಸಚಿವರು, ಪೌಷ್ಟಿಕ ಆಹಾರದ ಕಿಟ್ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು. ಮುಂದಿನ ದಿನಗಳಲ್ಲಿ ಹಾಡಿಗಳಿಗೆ ಭೇಟಿ ನೀಡಿ ಆದಿವಾಸಿ ಜನರ ಸಮಸ್ಯೆಗಳನ್ನು ಆಲಿಸಿ ಪರಿಹರಿಸಲಾಗುವುದು ಎಂದು ಆಶ್ವಾಸನೆ ನೀಡಿದರು.

ಮೈಸೂರು, ಚಾಮರಾಜನಗರ, ಕೊಡಗು, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಯ ಕಾಡು ಮತ್ತು ಕಾಡಂಚಿನಲ್ಲಿ ಸುಮಾರು 48 ಸಾವಿರ ಬುಡಕಟ್ಟು ಕುಟುಂಬಗಳು ವಾಸಿಸುತ್ತಿದ್ದು, ಇವರ ಅಪೌಷ್ಟಿಕತೆ ನಿವಾರಣೆಗಾಗಿ ರಾಜ್ಯ ಸರ್ಕಾರವು ಆದಿವಾಸಿಗಳಿಗೆ 2008 ರಿಂದ ಉಚಿತವಾಗಿ ಪೌಷ್ಟಿಕ ಆಹಾರದ ಕಿಟ್ ವಿತರಿಸುವ ಯೋಜನೆ ಜಾರಿಗೆ ತಂದಿದೆ.

ಅರಣ್ಯ ಉತ್ಪನ್ನಗಳನ್ನು ಅವಲಂಬಿಸಿ ಜೀವನ ಸಾಗಿಸುತ್ತಿರುವ ಆದಿವಾಸಿ ಕುಟುಂಬಗಳಿಗೆ ಸರ್ಕಾರದ ಪೌಷ್ಟಿಕ ಆಹಾರದ ಕಿಟ್ ಸಹಕಾರಿಯಾಗಿದ್ದು, ಈ ಕಿಟ್‌ನಲ್ಲಿ ನೀಡುತ್ತಿದ್ದ ರಾಗಿ, ಮೊಟ್ಟೆ, ತುಪ್ಪ, ಅಡುಗೆ ಎಣ್ಣೆ ಮತ್ತು ಬೇಳೆಕಾಳು ಸೇರಿದಂತೆ ಪೌಷ್ಟಿಕಾಂಶಯುಕ್ತ ಆಹಾರ ಸಾಮಗ್ರಿಗಳು ಆದಿವಾಸಿ ಜನರ ಅಪೌಷ್ಟಿಕತೆ ನಿವಾರಣೆಗೆ ಪೂರಕವಾಗಿದ್ದವು.

ಆದರೆ, ಕಳೆದ ಆರು ತಿಂಗಳಿಂದ ಸರ್ಕಾರ ವಿತರಿಸುತ್ತಿದ್ದ ಪೌಷ್ಟಿಕ ಆಹಾರದ ಕಿಟ್ ವಿತರಣೆಯು ಸ್ಥಗಿತಗೊಂಡಿದ್ದು, ಬುಡಕಟ್ಟು ಕುಟುಂಬಗಳು ದಿನನಿತ್ಯದ ಅಗತ್ಯತೆಗಾಗಿ ಪರದಾಡುತ್ತಿದ್ದಾರೆ. ಈ ಕಾರಣದಿಂದ ಕುಟುಂಬಗಳು ವಲಸೆ ಹೋಗುತ್ತಿದ್ದು, ಇದು ಆತಂಕಕಾರಿ ಬೆಳವಣಿಗೆಯಾಗಿದೆ. ಆದ್ದರಿಂದ ಈ ಕೂಡಲೇ ಪೌಷ್ಟಿಕ ಆಹಾರದ ಕಿಟ್ ವಿತರಿಸಬೇಕು ಎಂದು ಕೆ.ಶಿವಕುಮಾರ್ ಅವರು ಮನವರಿಕೆ ಮಾಡಿದ್ದಾರೆ.

Share this Article
Leave a comment