*ಮೈಸೂರಿನ ಸೆಂಟ್ ಫಿಲೋಮಿನಾ ಕಾಲೇಜಿನ ಮುಖ್ಯಸ್ಥ ಡಾ.ನಯಿಮುಲ್ಲಾ ಖಾನ್ ಸಲಹೆ
*ಮೌಲಾನಾ ಆಜಾದ್ ಹಾಸ್ಟೆಲ್ (ಸುನ್ನಿ) ವಿದ್ಯಾರ್ಥಿ ಸಹಾಯಧನ ವಿತರಣೆ ಕಾರ್ಯಕ್ರಮ
ಚಾಮರಾಜನಗರ, ಸೆ.24: ಪ್ರಸ್ತುತ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಬೇಕಿದೆ ಎಂದು ಮೈಸೂರಿನ ಸೆಂಟ್ ಫಿಲೋಮಿನಾ ಕಾಲೇಜಿನ ಮುಖ್ಯಸ್ಥ ಡಾ.ನಯಿಮುಲ್ಲಾ ಖಾನ್ ಸಲಹೆ ನೀಡಿದರು.
ನಗರದ ಗುಂಡ್ಲುಪೇಟೆ ರಸ್ತೆಯಲ್ಲಿರುವ ಮೌಲಾನಾ ಆಜಾದ್ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಮೌಲಾನಾ ಆಜಾದ್ ಹಾಸ್ಟೆಲ್ (ಸುನ್ನಿ) ವಿದ್ಯಾರ್ಥಿ ಸಹಾಯಧನ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ದೇಶದ ಪ್ರಥಮ ಶಿಕ್ಷಣ ಸಚಿವರಾದ, ಮಹಾನ್ ದೇಶಭಕ್ತ, ವಿದ್ವಾಂಸ ಮೌಲಾನಾ ಅಬುಲ್ ಕಲಾಂ ಆಜಾದ್ ಅವರ ಹೆಸರಿನಲ್ಲಿ ನೀಡಲಾಗುತ್ತಿರುವ ಈ ವಿದ್ಯಾರ್ಥಿ ವೇತನವು ಕೇವಲ ಹಣಕಾಸಿನ ನೆರವಲ್ಲ, ಇದು ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ಹಾಕುತ್ತಿರುವ ಭದ್ರ ಬುನಾದಿಯಾಗಿದೆ. ಮೌಲಾನಾ ಆಜಾದ್ ಅವರ ಮಾತಿನಂತೆ ಶಿಕ್ಷಣವು ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕು. ಗುಣಮಟ್ಟದ ಶಿಕ್ಷಣವಿಲ್ಲದೆ ಯಾವುದೇ ರಾಷ್ಟ್ರ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ಅವರ ಈ ದೂರದೃಷ್ಟಿಯನ್ನು ನನಸು ಮಾಡುವ ನಿಟ್ಟಿನಲ್ಲಿ, ಆರ್ಥಿಕವಾಗಿ ಹಿಂದುಳಿದ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ವಿದ್ಯಾರ್ಥಿಗಳಿಗೆ ಶಿಕ್ಷಣದ ಹಾದಿ ಸುಲಭವಾಗಲಿ ಎಂಬ ಉದ್ದೇಶದಿಂದ ಈ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿದೆ ಎಂದರು.
ಹಾಸ್ಟೆಲ್ನಲ್ಲಿ ಉಳಿದುಕೊಂಡು ಓದುತ್ತಿರುವ ವಿದ್ಯಾರ್ಥಿಗಳಿಗೆ ಮನೆಯಿಂದ ದೂರವಿರುವಾಗ ಹಲವು ಸವಾಲುಗಳು ಎದುರಾಗುತ್ತವೆ. ಅದರಲ್ಲೂ ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲದಿದ್ದಾಗ ಓದಿನ ಮೇಲೆ ಗಮನ ಹರಿಸುವುದು ಕಷ್ಟವಾಗುತ್ತದೆ. ಅಂತಹ ವಿದ್ಯಾರ್ಥಿಗಳಿಗೆ ಈ ಯೋಜನೆಯು ಒಂದು ದೊಡ್ಡ ವರದಾನವಾಗಿದೆ. ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣ, ಮೊಬೈಲ್ ಗಳಿಂದ ಹಾಗೂ ಡ್ಮಾದಕ ವಸ್ತುಗಳಿಂದ ದೂರವಿರಬೇಕು. ಉನ್ನತವಾದ ಗುರಿಗಳನ್ನು ಇಟ್ಟುಕೊಂಡು ನಿರಂತರವಾಗಿ ಅಧ್ಯಯನ ಮಾಡಿದರೇ ಸಾಧನೆ ಸುಲಭವಾಗುತ್ತದೆ ಎಂದು ಹೇಳಿದರು.
ವಿದ್ಯಾರ್ಥಿಗಳು ತಮ್ಮ ಪೋಷಕರು ನಿಮ್ಮ ಮೇಲಿಟ್ಟಿರುವ ಭರವಸೆಯನ್ನು ಸುಳ್ಳು ಮಾಡಬೇಡಿ. ಶಿಸ್ತು, ಕಠಿಣ ಪರಿಶ್ರಮ ಮತ್ತು ಪ್ರಾಮಾಣಿಕತೆಯಿಂದ ಓದಿ, ಸಮಾಜದಲ್ಲಿ ಉನ್ನತ ಸ್ಥಾನವನ್ನು ಪಡೆದುಕೊಳ್ಳಬೇಕು. ಶಿಕ್ಷಣ ಎಂಬುದು ಯಾರೂ ಕದಿಯಲಾಗದ ಅತಿ ದೊಡ್ಡ ಆಸ್ತಿಯಾಗಿದೆ. ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿದ ಹಾಸ್ಟೆಲ್ ಆಡಳಿತ ಮಂಡಳಿಗೆ ಮತ್ತು ಅಧಿಕಾರಿಗಳಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ಪಿಯುಸಿಯ 105 ವಿದ್ಯಾರ್ಥಿಗಳಿಗೆ ಚೆಕ್ ಮೂಲಕ 2.46 ಲಕ್ಷ ರೂ, ಸಹಾಯಧನವನ್ನು ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಮೌಲಾನಾ ಜಾವೀದ್ ಸಾಬ್, ಕಾರ್ಯದರ್ಶಿ ಜಬೀನೂರ್, ಉಪಾಧ್ಯಕ್ಷ ಫಹಾದ್, ಖಜಾಂಚಿ ಇಕ್ಬಾಲ್ ಪಾಷಾ, ಸಂಪನ್ಮೂಲ ವ್ಯಕ್ತಿ ನೂರ್ ಖಾನ್, ನಗರಸಭೆ ಪೌರಾಯುಕ್ತ ಪರಶುರಾಮ್ ಛಲವಾದಿ, ಆರೋಗ್ಯ ನಿರೀಕ್ಷಕ ಮಂಜು, ನಗರಸಭೆ ಮಾಜಿ ಸದಸ್ಯರಾದ ಅಬ್ರಾರ್ ಅಹಮ್ಮದ್, ಖಲೀಲ್, ನಯಾಜ್, ಅಮೀಕ್, ಮುಜಾಮತ್ ಹಾಗೂ ಇತರರು ಹಾಜರಿದ್ದರು.