ಚಾಮರಾಜನಗರ: ಪಶ್ಚಿಮ ಬಂಗಾಳ, ಅಸ್ಸಾಂ, ಪುದುಚೇರಿ ರಾಜ್ಯಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಬಿಜೆಪಿ ವತಿಯಿಂದ ಸೋಮವಾರ ವಿಜಯೋತ್ಸವ ಆಚರಣೆ ಮಾಡಲಾಯಿತು.
ನಗರದ ಶ್ರೀಚಾಮರಾಜೇಶ್ವರ ಉದ್ಯಾನವನ ಮುಂಭಾಗದಲ್ಲಿ ಜಮಾಯಿಸಿದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಅಲ್ಲಿಂದ ಮೆರವಣಿಗೆಯಲ್ಲಿ ಶ್ರೀಭುವನೇಶ್ವರಿ ವೃತ್ತಕ್ಕೆ ತೆರಳಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಪ್ರಧಾನಿ ಮೋದಿ, ಅಮಿತ್ ಷಾ ಪರವಾಗಿ ಘೋಷಣೆ ಕೂಗಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ವೃಷಬೇಂದ್ರಪ್ಪ ಮಾತನಾಡಿ, ಪಶ್ಚಿಮ ಬಂಗಾಳ, ಅಸ್ಸಾಂ, ಪುದುಚೇರಿ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಅಧಿಕಾರ ಹಿಡಿರುವುದು ತುಂಬಾ ಸಂತಸವಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜನಪರ ಆಡಳಿತಕ್ಕೆ ಪಶ್ಚಿಮ ಬಂಗಾಳ, ಅಸ್ಸಾಂ, ಪುದುಚೇರಿ ರಾಜ್ಯಗಳ ಜನತೆ ಬೆಂಬಲವನ್ನು ನೀಡಿದ್ದಾರೆ ಎಂದು ತಿಳಿಸಿದರು.
ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸೂರ್ಯಕುಮಾರ್ ಮಾತನಾಡಿ, ದೇಶದ ಜನರು ಹಿಂದುತ್ವದ ಕಡೆ ಸಾಗುತ್ತಿದ್ದಾರೆ ಎನ್ನುವುದಕ್ಕೆ ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಒಂದು ಸಾಕ್ಷಿಯಾಗಿದೆ. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ವಿರುದ್ಧ ಬಿಜೆಪಿಗೆ ದೊಡ್ಡ ಗೆಲುವು ಬಂದಿದೆ. ಅದೇ ಅಸ್ಸಾಂ, ಪುದುಚೇರಿಯಲ್ಲಿ ಬಿಜೆಪಿ ಅಧಿಕಾರ ಹಿಡಿದಿದೆ ಎಂದರು.
ಈ ವೇಳೆ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೂಡ್ನಾಕೂಡು ಪ್ರಕಾಶ್, ನಗರ ಮಂಡಲ ಅಧ್ಯಕ್ಷ ಶಿವರಾಜ್, ಗ್ರಾಮಾಂತರ ಮಂಡಲ ಅಧ್ಯಕ್ಷ ಕಾಡಹಳ್ಳಿ ಕುಮಾರ್, ರಾಷ್ಟ್ರೀಯ ಓಬಿಸಿ ಮೋರ್ಚಾದ ಕಾರ್ಯಕಾರಿಣಿ ಸದಸ್ಯ ನೂರೊಂದುಶೆಟ್ಟಿ, ಸಾಹಿತಿ ಮಂಜುಕೋಡಿಉಗನೆ, ಎಪಿಎಂಸಿ ಮಾಜಿ ಅಧ್ಯಕ್ಷ ಮನೋಜ್ ಪಟೇಲ್, ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಆನಂದ್ ಭಗೀರಥ, ಬಂಗಾರನಾಯಕ, ಶಿವಣ್ಣ, ಮಂಜು, ಕೂಸಣ್ಣ, ಮಹೇಶ್, ಕೇಬಲ್ ರಂಗಸ್ವಾಮಿ ಹಾಗೂ ಇತರರು ಹಾಜರಿದ್ದರು.