ವೃದ್ಧೆ ಡಿಜಿಟಲ್ ಅರೆಸ್ಟ್, ಕಳೆದುಕೊಂಡ ಹಣವೆಷ್ಟು ಗೊತ್ತಾ! 

ಮಣಿಕಂಠ ಜನತಾ ರಾಯಭಾರಿ
1 Min Read

ಬೆಂಗಳೂರು: ಶಿವಾಜಿನಗರದ 82 ವರ್ಷದ ವೃದ್ಧೆಯೊಬ್ಬರನ್ನು ಸೈಬರ್ ವಂಚಕರು ಡಿಜಿಟಲ್ ಅರೆಸ್ಟ್ ಮಾಡಿ ಬರೋಬ್ಬರಿ 24 ಕೋಟಿ ರೂ, ದೋಚಿದ್ದಾರೆ.

ಬೆಂಗಳೂರಿನ ಶಿವಾಜಿನಗರದಲ್ಲಿ ವಾಸವಾಗಿದ್ದ ವೃದ್ಧೆ ಮುಂಬೈ ಮತ್ತು ಬೆಂಗಳೂರಿನಲ್ಲಿ ಇದ್ದ ಆಸ್ತಿಯನ್ನು ಮಾರಿ, ಅಮೆರಿಕದಲ್ಲಿರುವ ಮಕ್ಕಳ ಜೊತೆ ನೆಲೆಸಲು ಪ್ಲಾನ್ ಮಾಡಿದ್ದರು. ಅದರಂತೆ ಆಸ್ತಿ ಮಾರಿದ ಹಣವನ್ನು ಬ್ಯಾಂಕ್‌ನಲ್ಲಿಟ್ಟಿದ್ದರು. ಜನವರಿ 2026 ರಿಂದ ಮೇ 2026 ರವರೆಗೆ ಸೈಬರ್ ಖದೀಮರು ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ವಿಡಿಯೋ ಕಾಲ್ ಮಾಡಿದ್ದು, ನಿಮ್ಮ ಬ್ಯಾಂಕ್ ಖಾತೆ ಮನಿ ಲಾಂಡರಿಂಗ್‌ಗೆ ಬಳಕೆಯಾಗಿದೆ. ನೀವು ಯಾರ ಜೊತೆಯೂ ಮಾತನಾಡಬಾರದು. ಎಲ್ಲ ಹಣವನ್ನು ವೆರಿಫಿಕೇಶನ್‌ಗೆ ಕಳುಹಿಸಿ ಎಂದು ಬೆದರಿಸಿ RTGS ಮೂಲಕ ಹಣ ವರ್ಗಾವಣೆ ಮಾಡಿಸಿಕೊಂಡಿದ್ದಾರೆ.

22 ಖಾತೆಗಳಿಗೆ ಟ್ರಾನ್ಸ್‌ಫರ್: ಸೈಬರ್ ಖದೀಮರು 5 ತಿಂಗಳಲ್ಲಿ ಹಂತ-ಹಂತವಾಗಿ 22 ಬ್ಯಾಂಕ್ ಖಾತೆಗಳಿಗೆ 24 ಕೋಟಿ ರೂ. ಹಣವನ್ನು ವರ್ಗಾವಣೆ ಮಾಡಿಸಿಕೊಂಡಿದ್ದಾರೆ. 24 ಕೋಟಿ ಕೊಟ್ಟರೂ ಇನ್ನೂ ಹಣ ಕೊಡಬೇಕು ಎಂದು ವಂಚಕರು ಒತ್ತಾಯಿಸಿದ್ದಾರೆ. ಆಗ ವೃದ್ಧೆ ಮನೆಯಲ್ಲಿದ್ದ 1.30 ಕೆಜಿ ಚಿನ್ನ ಅಡವಿಟ್ಟು ಹಣ ಕೊಡಲು ಬ್ಯಾಂಕ್‌ಗೆ ಬಂದಿದ್ದಾರೆ. ಚಿನ್ನ ಅಡವಿಡಲು ಬ್ಯಾಂಕ್ ಗೆ ಬಂದಾಗ ಬ್ಯಾಂಕ್ ಮ್ಯಾನೇಜರ್‌ಗೆ ಅನುಮಾನ ಬಂದು ಸಿಸಿಬಿ ಸೈಬರ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ವಿಚಾರಿಸಿದಾಗ ಮೊದಲು ವೃದ್ಧೆ ಬಾಯ್ಬಿಟ್ಟಿಲ್ಲ. ಆದರೆ ಕೊನೆಗೆ ಎಲ್ಲ ವಿವರಿಸಿದ್ದಾರೆ. ಬಳಿಕ ಪೊಲೀಸರು ವಿದೇಶದಲ್ಲಿರುವ ವೃದ್ಧೆಯ ಮಕ್ಕಳಿಗೆ ಮಾಹಿತಿ ನೀಡಿ, ಕೇಸ್ ದಾಖಲಿಸಿದ್ದಾರೆ.

5 ಆರೋಪಿಗಳ ಬಂಧನ: ಡಿಜಿಟಲ್ ಅರೆಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ, ಅಲಹಬಾದ್, ದೆಹಲಿ ಮೂಲದ ಗೌರವ್ ಕುಮಾರ್, ಓಂ ಪ್ರಕಾಶ್ ರಾಜಪೂತ್ ಸೇರಿ 5 ಮಂದಿಯನ್ನು ಸಿಸಿಬಿ ಸೈಬರ್ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ವಂಚಕರು ಬಳಸಿದ 22 ಅಕೌಂಟ್ ಪತ್ತೆ ಹಚ್ಚಿ, 60 ಲಕ್ಷ ರೂ, ಇರುವ ಬ್ಯಾಂಕ್ ಅಕೌಂಟ್ ಸೀಜ್ ಮಾಡಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.

 

Share this Article
Leave a comment