ಸರ್ಕಾರಿ ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಣೆ

ಮಣಿಕಂಠ ಜನತಾ ರಾಯಭಾರಿ
2 Min Read

ಶ್ರೀರಂಗಪಟ್ಟಣ: ತಾಲೂಕಿನ ಮಹದೇವಪುರ ಬೋರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ವಿಶ್ವ ಪರಿಸರ ಮತ್ತು ನಾಡಪ್ರಭು ಕೆಂಪೇಗೌಡ ಜನ್ಮದಿನಾಚರಣೆ ಆಚರಿಸಲಾಯಿತು. ಇದೇ ವೇಳೆ ಮಕ್ಕಳಿಗೆ ಸಮವಸ್ತ್ರ ವಿತರಣೆ ಮಾಡಲಾಯಿತು.

ಬೆಳಗಿನೊಳಗು ಬಳಗ ಮತ್ತು ಬೋಧಿವೃಕ್ಷ ಸೊಸೈಟಿ ಫಾರ್ ಡೆವಲಪ್ಮೆಂಟ್ ಸಹಯೋಗದಲ್ಲಿ ಬುಧವಾರ ಮತ್ತು ಶನಿವಾರ ಧರಿಸುವ ಟ್ರ‍್ಯಾಕ್ ಸೂಟ್ ಅನ್ನು ೪೫ ಮಕ್ಕಳಿಗೆ ಕೊಡುಗೆಯಾಗಿ ನೀಡಲಾಯಿತು. ಶಾಲಾ ಆವರಣದಲ್ಲಿ ಸಸಿ ನೆಡಲಾಯಿತು.

ಮೈಸೂರು ಎಪಿಎಂಸಿ ಮಾಜಿ ಉಪಾಧ್ಯಕ್ಷ ಅಹಿಂದ ಜವರಪ್ಪ ಸಮವಸ್ತ್ರ ವಿತರಿಸಿ ಮಾತನಾಡಿ, ಗೃಹಲಕ್ಷ್ಮೀ ಹಣ, ಅನ್ನಭಾಗ್ಯ ಯೋಜನೆಯ ಸೌಲಭ್ಯ ಸಕಾಲದಲ್ಲಿ ದೊರೆಯದಿದ್ದರೆ ಸರ್ಕಾರವನ್ನ ದೂರುತ್ತೇವೆ. ಹಾಗೆಯೇ ಎಲ್ಲ ಸೌಕರ್ಯಗಳಿರುವ ಸರ್ಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸುವುದಿಲ್ಲ. ಹಕ್ಕುಗಳನ್ನು ಕೇಳುವಂತೆಯೇ ತಮ್ಮ ಜವಾಬ್ದಾರಿಯನ್ನು ನಾಗರಿಕರು ನಿರ್ವಹಿಸಬೇಕು ಎಂದು ಹೇಳಿದರು.

ಜಲಮೂಲ ಕಲುಷಿತವಾಗ್ತುದೆ. ತಲಕಾವೇರಿಯಿಂದ ತಮಿಳುನಾಡಿನ ಪೂಂಪ್‌ಹಾರ್‌ವರೆಗೂ ಕಾವೇರಿ ನದಿ ನೀರನ್ನು ಪರೀಕ್ಷೆ ಮಾಡಿದಾಗ ಕುಡಿಯಲು ಶುದ್ಧವಾಗಿಲ್ಲ ಎಂದು ವರದಿಗಳು ಬಂದಿವೆ. ದಿನೇದಿನೇ ಪರಿಸರ ನಾಶವಾಗುತ್ತಿದೆ. ಜಾಗತಿಕ ತಾಪಮಾನದಿಂದ ಪ್ರವಾಹ, ಭೂಕಂಪದಿಂದ ಅನಾಹುತಗಳನ್ನು ಎದುರಿಸುತ್ತಿದ್ದೇವೆ. ಮಕ್ಕಳು ಪರಿಸರ ಸಂರಕ್ಷಣೆಗೆ ಪಣತೊಡಬೇಕು. ಗಿಡನೆಟ್ಟು ಪೋಷಿಸಬೇಕು ಎಂದು ತಿಳಿಸಿದರು.

ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಬಸವರಾಜು ಮಾತನಾಡಿ, ಮಹಾನಗರಗಳಲ್ಲಿರುವ ಜನರು ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದಾರೆ. ಅಲ್ಲಿನ ಪರಿಸ್ಥಿತಿ ಹಳ್ಳಿಗಳಿಗೆ ಬರಬಾರದೆಂದರೆ ಗಿಡನೆಟ್ಟು ಬೆಳಸಬೇಕು. ಗುಣಮಟ್ಟದ ಶಿಕ್ಷöಣದೊಂದಿಗೆ ಎಲ್ಲ ಸೌಕರ್ಯ ದೊರೆಯುವ ಸರ್ಕಾರಿ ಶಾಲೆಗೆ ತಮ್ಮ ಮಕ್ಕಳನ್ನು ಸೇರ್ಪಡೆ ಮಾಡಬೇಕು ಎಂದರು.

ಮಹದೇವಪುರ ಕ್ಲಸ್ಟರ್ ಸಿಆರ್‌ಪಿ ಸುಸುಮಾ ಮಾತನಾಡಿ, ಖಾಸಗಿ ಸಂಘ ಸಂಸ್ಥೆಗಳು ಸರ್ಕಾರಿ ಶಾಲೆಗಳ ಮಕ್ಕಳ ದಾಖಲಾತಿ ಹೆಚ್ಚಳಕ್ಕೆ ಸಹಕರಿಸಬೇಕು. ಕಾನ್ವೆಂಟ್ ವ್ಯಾಮೋಹ ಬಿಡಬೇಕು ಎಂದು ಹೇಳಿದರು.

ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಕಾಳೇಗೌಡ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಕುಸಿಯುತ್ತಿರುವುದು ಆತಂಕಾರಿಯಾಗಿದೆ ಎಂದು ತಿಳಿಸಿದರು.

ಬೋಧಿವೃಕ್ಷ ಸೊಸೈಟಿ ಫಾರ್ ಡೆವಲಪ್‌ಮೆಂಟ್ ಅಧ್ಯಕ್ಷ ಎಂ.ಎಸ್ ಚಂದ್ರ ಮಾತನಾಡಿ, ತಾಪಮಾನ ಏರಿಕೆಯಿಂದ ಜಗತ್ತು ಬಳಲುತ್ತಿದ್ದು, ಮಕ್ಕಳಿಗೆ ಪರಿಸರ ಪ್ರಜ್ಞೆ ಬೆಳಸಬೇಕು ಎಂದು ಹೇಳಿದರು.

ಗ್ರಾಪಂ ಮಾಜಿ ಅಧ್ಯಕ್ಷ ಎಂ.ಈ ಜಗದೀಶ, ಮಾಜಿ ಉಪಾಧ್ಯಕ್ಷೆ ನಿಂಗಮ್ಮ ಮಹದೇವು, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಗವಿಸಿದ್ದು, ಶಿಕ್ಷಕರಾದ ಶಾರದಾ, ಗೀತಾ, ಛಾಯಾಕುಮಾರಿ ಭಾಗವಹಿಸಿದ್ದರು. ಶಾಲಾ ಮುಖ್ಯ ಶಿಕ್ಷಕ ಮಹಮ್ಮದ್ ಇಳ್ಯಾಸ್ ಸ್ವಾಗತಿಸಿದರು. ಶಿಕ್ಷಕಿ ಶಾರದಾ ನಿರೂಪಿಸಿದರು. ೬ನೇ ವಿದ್ಯಾರ್ಥಿಗಳಾದ ವರ್ಷಿಣಿ, ರೇಣುಕಾ ಪ್ರಾರ್ಥಿಸಿದರು.

Share this Article
Leave a comment