ಬೆಂಗಳೂರು, ಸೆ.25: ಕೇಂದ್ರ ಚುನಾವಣಾ ಆಯೋಗದ ವಿರುದ್ಧ ಕಾಂಗ್ರೆಸ್ ಪಕ್ಷದ ವತಿಯಿಂದ ಸೆಪ್ಟೆಂಬರ್ 26ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನ ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲು ಕರೆ ನೀಡಲಾಗಿದೆ.
ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ವಜಾಗೊಳಿಸಬೇಕು ಹಾಗೂ ಅವರ ವಿರುದ್ಧ ರಾಷ್ಟ್ರದ್ರೋಹದ ಆರೋಪದಡಿ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗ ತಿಳಿಸಿದೆ.
ಅಖಿಲ ಭಾರತ ಕಾಂಗ್ರೆಸ್ ಪಕ್ಷದ ಸೂಚನೆ ಹಾಗೂ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ‘ವೋಟ್ ಚೋರಿ’ ಹೋರಾಟದ ಹಿನ್ನೆಲೆಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಚುನಾವಣಾ ಆಯೋಗವು ಮತದಾರರ ಒಳಗೊಳ್ಳುವಿಕೆಯ ಬದಲಿಗೆ ಮತದಾರರನ್ನು ಹೊರದಬ್ಬುವ ಪ್ರಕ್ರಿಯೆಗೆ ಮುಂದಾಗಿದೆ ಹಾಗೂ ಆಯೋಗದ ಮುಖ್ಯ ಆಯುಕ್ತರು ಸರ್ವಾಧಿಕಾರಿ ಧೋರಣೆ ಮತ್ತು ಪಕ್ಷಪಾತದ ನಿಲುವು ಅನುಸರಿಸುತ್ತಿದ್ದಾರೆ ಎಂಬುದು ಕಾಂಗ್ರೆಸ್ನ ಆರೋಪವಾಗಿದೆ.
ಈ ಕುರಿತು ಕೆಪಿಸಿಸಿ ರಾಜ್ಯ ವಕ್ತಾರರು ಹಾಗೂ ಜಿಲ್ಲಾ ವಕ್ತಾರರು ಸೆ.26 ಮತ್ತು ಸೆ.28ರಂದು ಜಿಲ್ಲಾ ಕೇಂದ್ರಗಳಲ್ಲಿ ಡಿಸಿಸಿ ಅಧ್ಯಕ್ಷರು ಹಾಗೂ ಉಸ್ತುವಾರಿ ಸಚಿವರ ಸಮನ್ವಯದಲ್ಲಿ ಪತ್ರಿಕಾಗೋಷ್ಠಿ ಅಥವಾ ಪತ್ರಿಕಾ ಹೇಳಿಕೆಗಳನ್ನು ನೀಡುವಂತೆ ಸೂಚಿಸಲಾಗಿದೆ.
ಪತ್ರಿಕಾಗೋಷ್ಠಿ ಹಾಗೂ ಮಾಧ್ಯಮಗಳಲ್ಲಿ ಪ್ರಕಟವಾಗುವ ಸುದ್ದಿ, ವಿಡಿಯೋ ಲಿಂಕ್ಗಳನ್ನು ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗಕ್ಕೆ ಕಳುಹಿಸುವಂತೆ ಪ್ರಕಟಣೆಯಲ್ಲಿ ಮನವಿ ಮಾಡಲಾಗಿದೆ. ಈ ಸೂಚನೆಯನ್ನು ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷ ಹಾಗೂ ಮಾಜಿ MLC ರಮೇಶ್ ಬಾಬು ಹೊರಡಿಸಿದ್ದಾರೆ.