ಚಾಮರಾಜನಗರ: ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆ ನಿರ್ಮಾಣ ಮಾಡಬೇಕಿದ್ದ ಜಾಗದ ಸಮೀಪವೇ ಏಕಾಏಕಿಯಾಗಿ ವಾಲ್ಮೀಕಿ ಬೋರ್ಡ್ ನೆಟ್ಟಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.
ತಾಲೂಕಿನ ಅಮಚವಾಡಿ ಗ್ರಾಮದ ಪರಿಶಿಷ್ಟ ಜಾತಿ ಸಮುದಾಯದವರು ವಾಸ ಮಾಡುತ್ತಿರುವ ಬಡಾವಣೆ ಮುಂಭಾಗದ ಜಾಗದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ನಿರ್ಮಾಣಕ್ಕೆ ಜಾಗ ಮೀಸಲಿರಿಸಲಾಗಿತ್ತು. ಈ ಜಾಗದಲ್ಲಿ ಇಂದು (ಶನಿವಾರ) ಬೆಳಗ್ಗೆ ಕೆಲವರು ವಾಲ್ಮೀಕಿ ಬೋರ್ಡ್ ನೆಟ್ಟು ಹೋಗಿದ್ದಾರೆ. ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಬೂದಿಮುಚ್ಚಿದ ವಾತಾವರಣ: ಅಮಚವಾಡಿ ಗ್ರಾಮದಲ್ಲಿ ಅಂಬೇಡ್ಕರ್ ಪ್ರತಿಮೆ ನಿರ್ಮಾಣ ಮಾಡಲು ಮೀಸಲು ಇರಿಸಿರುವ ಜಾಗದಲ್ಲಿ, ಈ ಹಿಂದೆ ಪಶು ಆಸ್ಪತ್ರೆ ಇತ್ತು. ಆ ಆಸ್ಪತ್ರೆ ಬೇರೆ ಕಡೆಗೆ ಸ್ಥಳಾಂತರವಾದ ಮೇಲೆ ಪರಿಶಿಷ್ಟ ಸಮುದಾಯದವರು ಈ ಜಾಗ ನಮ್ಮ ಸಮುದಾಯಕ್ಕೆ ಸೇರುತ್ತದೆ ಎಂದು ಆ ಸ್ಥಳದಲ್ಲಿ ಅಂಬೇಡ್ಕರ್ ಅವರ ಪ್ರತಿಮೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿತ್ತು ಎಂದು ಅಮಚವಾಡಿ ಗ್ರಾಮಸ್ಥರೊಬ್ಬರು “ಜನತಾ ರಾಯಭಾರಿ” ಗೆ ಮಾಹಿತಿ ನೀಡಿದರು.
ಅಂದಿನಿಂದ ಎರಡು ಸಮುದಾಯಗಳ ನಡುವೆ ಜಾಗದ ವಿಚಾರದಲ್ಲಿ ಬೂದಿಮುಚ್ಚಿದ ವಾತಾವರಣ ನಿರ್ಮಾಣವಾಗಿತ್ತು. ಈಗ ಏಕಾಏಕಿ ವಾಲ್ಮೀಕಿ ಬೋರ್ಡ್ ನೆಟ್ಟಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ಮುಂದಿನ ಬೆಳವಣಿಗೆಗಳಿಗೆ ಕಾದು ನೋಡಬೇಕಿದೆ.