ಸೋಟಕನ್ ಸ್ಕೂಲ್ ಆಫ್ ಕರಾಟೆ ವತಿಯಿಂದ ಕಲರ್ ಬೆಲ್ಟ್ ಪರೀಕ್ಷೆ

ಮಣಿಕಂಠ ಜನತಾ ರಾಯಭಾರಿ
1 Min Read

*ಚುಡಾ ಅಧ್ಯಕ್ಷ ಮೊಹಮ್ಮದ್ ಅಸ್ಗರ್ (ಮುನ್ನಾ) ಸಲಹೆ 

*ಸೋಟಕನ್ ಸ್ಕೂಲ್ ಆಫ್ ಕರಾಟೆ ಆರ್ಟ್ ವತಿಯಿಂದ ಕರಾಟೆ ಕಲರ್ ಬೆಲ್ಟ್ ಟೆಸ್ಟ್ ಕಾರ್ಯಕ್ರಮ 

ಚಾಮರಾಜನಗರ, ಆ.30: ನಿರಂತರವಾಗಿ ಕರಾಟೆಯಿಂದ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳಬಹುದಾಗಿದೆ ಎಂದು ಚುಡಾ ಅಧ್ಯಕ್ಷ ಮೊಹಮ್ಮದ್ ಅಸ್ಗರ್ (ಮುನ್ನಾ) ಸಲಹೆ ನೀಡಿದರು.

ನಗರದ ಗುಂಡ್ಲುಪೇಟೆ ರಸ್ತೆಯಲ್ಲಿರುವ ಹುದಾ ಪಬ್ಲಿಕ್ ಶಾಲೆಯಲ್ಲಿ ಸೋಟಕನ್ ಸ್ಕೂಲ್ ಆಫ್ ಕರಾಟೆ ಆರ್ಟ್ ವತಿಯಿಂದ ಭಾನುವಾರ ಆಯೋಜಿಸಿದ್ದ ಕರಾಟೆ ಕಲರ್ ಬೆಲ್ಟ್ ಟೆಸ್ಟ್ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಪ್ರಸ್ತುತ ದಿನಗಳಲ್ಲಿ ಪ್ರತಿಯೊಬ್ಬರಿಗೂ, ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳಿಗೆ ಆತ್ಮರಕ್ಷಣೆ ತುಂಬಾ ಅಗತ್ಯವಾಗಿದೆ. ಕರಾಟೆ ನಮಗೆ ಸಂಕಷ್ಟದ ಸಮಯದಲ್ಲಿ ನಮ್ಮನ್ನು ನಾವು ರಕ್ಷಿಸಿಕೊಳ್ಳುವ ಧೈರ್ಯ ಮತ್ತು ತಂತ್ರಗಳನ್ನು ಕಲಿಸುತ್ತದೆ. ಕರಾಟೆ ಅಭ್ಯಾಸ ಮಾಡುವುದರಿಂದ ದೇಹವು ಸದೃಢವಾಗುತ್ತದೆ ಎಂದು ಹೇಳಿದರು.

ಸೋಟಕನ್ ಸ್ಕೂಲ್ ಆಫ್ ಕರಾಟೆ ಆರ್ಟ್ ಸಂಸ್ಥಾಪಕ ಅಧ್ಯಕ್ಷ ರೆನ್ಸಿ ನಾಗರಾಜ್ ಜಟ್ಟಿ ಮಾತನಾಡಿ, ಕಳೆದ 30 ವರ್ಷಗಳಿಂದ ನಮ್ಮ ಸಂಸ್ಥೆಯ ವತಿಯಿಂದ ನಿರಂತರವಾಗಿ ಕರಾಟೆ ತರಬೇತಿ ನೀಡಲಾಗುತ್ತಿದೆ. ಜಿಲ್ಲಾ ಕೇಂದ್ರದಲ್ಲಿ 4-5 ಕರಾಟೆ ತಂಡಗಳು ಬಹಳ ಉತ್ತಮ ರೀತಿಯಲ್ಲಿ ಕರಾಟೆ ತರಬೇತಿ ನೀಡುತ್ತಿವೆ. 200-250 ಮಕ್ಕಳು ತರಬೇತಿ ಪಡೆಯುತ್ತಿರುವುದು ಕರಾಟೆ ಮಹತ್ವವನ್ನು ತಿಳಿಸಿಕೊಡುತ್ತದೆ ಎಂದರು.

ಸಿಹಾನ್ ನಾಗೇಂದ್ರ ಮಾತನಾಡಿ, ಕರಾಟೆ ಜಪಾನ್ ದೇಶದಲ್ಲಿ ಉಗಮವಾದ ಒಂದು ಸಾಂಪ್ರದಾಯಿಕ ಸಮರ ಕಲೆಯಾಗಿದೆ.ಕರಾಟೆ ಕೇವಲ ಹೊಡೆದಾಟವಲ್ಲ, ಅದು ಜೀವನದ ಶಿಸ್ತನ್ನು ಕಲಿಸುತ್ತದೆ. ಇದು ನಮ್ಮ ಮನಸ್ಸಿನ ಏಕಾಗ್ರತೆ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ನಾವೆಲ್ಲರೂ ಈ ಅದ್ಭುತ ಕಲೆಯನ್ನು ಕಲಿತು ನಮ್ಮ ಜೀವನದಲ್ಲಿ ಶಿಸ್ತು ಮತ್ತು ಸುರಕ್ಷತೆಯನ್ನು ಅಳವಡಿಸಿಕೊಳ್ಳೋಣ ಎಂದು ಹೇಳಿದರು.

ಕರಾಟೆ ಕಲರ್ ಬೆಲ್ಟ್ ಟೆಸ್ಟ್ ನಲ್ಲಿ 150 ಕ್ಕಿಂತಲೂ ಹೆಚ್ಚು ಕರಾಟೆ ಪಟುಗಳು ಭಾಗವಹಿಸುವ ಮೂಲಕ ವಿವಿಧ ಕಲರ್ ಬೆಲ್ಟ್ ಗಳನ್ನು ಪಡೆದುಕೊಂಡರು. ಈ ವೇಳೆ ಸಿಹಾನ್ ಗಣೇಶ್ ಮೂರ್ತಿ, ತರಬೇತುದಾರರಾದ ರೆಹಾನ್, ರವೀಶ್, ಜಿತೇಶ್, ಫುರ್ಖಾನ್ ರೆಹಾನ್ ಹಾಗೂ ಇತರರು ಭಾಗವಹಿಸಿದ್ದರು.

Share this Article
Leave a comment