ಮೈಸೂರು: ಎವಿಎಸ್ಎಸ್ ಆರಂಭಿಸಿ 14 ವರ್ಷಗಳಾಗಿದ್ದು, 24ನೇ ವರ್ಷಾಚರಣೆಗೆ ಎವಿಎಸ್ಎಸ್ ಬ್ಯಾಂಕ್ ಆರಂಭಿಸುವ ಗುರಿ ಹೊಂದಿದ್ದೇವೆ ಎಂದು ಎವಿಎಸ್ಎಸ್ ಅಧ್ಯಕ್ಷ ತುಂಬಲ ರಾಮಣ್ಣ ತಿಳಿಸಿದರು.
ಡಾ.ಬಿ.ಆರ್.ಅಂಬೇಡ್ಕರ್ ವಿವಿದ್ದೋದ್ದೇಶ ಸಹಕಾರ ಸಂಘ ಚಿಕ್ಕೋಡಿ ಶಾಖೆ ವತಿಯಿಂದ ಅರವಿಂದ ಘಟ್ಟಿ ಫಾರ್ಮ ಹೌಸ್ನಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಅಂಬೇಡ್ಕರ್ ಪ್ರಶಸ್ತಿ ಪ್ರದಾನ ಮತ್ತು ಯಶಸ್ವಿನಿ ಕಾರ್ಡ್ ವಿತರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
28 ಜಿಲ್ಲೆಗಳಲ್ಲಿ ಎವಿಎಸ್ಎಸ್ ಶಾಖೆಗಳಿವೆ. ಐಎಎಸ್ ಕೋಚಿಂಗ್, ಸೂಪರ್ ಮಾರ್ಕೇಟ್, ಕಾನೂನು ಕಾಲೇಜು ಆರಂಭಿಸಿದ್ದೇವೆ. ಬ್ಯಾಂಕ್ ಆಫ್ ಬರೋಡಾದಲ್ಲಿ ವ್ಯಾಪಾರ ವಹಿವಾಟು ನಡೆಸಲು ಚಿಂತನೆ ನಡೆಸಿದ್ದೇವೆ ಎಂದು ತಿಳಿಸಿದರು.
ದಲಿತರು ಹೋರಾಟಕ್ಕೆ ಸೀಮಿತರಾಗಿ ವ್ಯಾಪಾರೋದ್ಯಮಕ್ಕೆ ಗಮನಹರಿಸಲಿಲ್ಲ. ಶಿಕ್ಷಣ, ಆಸ್ಪತ್ರೆ ತೆರೆಯುವ ಯೋಚನೆ ಮಾಡಲಿಲ್ಲ. ಆರ್ಥಿಕವಾಗಿ ಸದೃಢರಾಗದೇ ಅಭಿವೃದ್ಧಿ ಹೊಂದಲಾಗುವುದಿಲ್ಲ ಎಂದು ಹೇಳಿದರು.
ಎವಿಎಸ್ಎಸ್ ನಡೆಸಿದ ಸರ್ವೇಯಲ್ಲಿ ಒಂದು ತಾಲೂಕಿನಲ್ಲಿ ಲಕ್ಷ ಕುಟುಂಬಗಳಿರುವ ದಲಿತರು ವಾರ್ಷಿಕ ೧೫೦೦ ಕೋಟಿ ರೂ. ವ್ಯವಹಾರ ನಡೆಸುತ್ತಾರೆ. ಬ್ಯಾಂಕ್ ವ್ಯವಹಾರದಲ್ಲೂ ಕೋಟ್ಯಂತರ ರೂ. ವಹಿವಾಟು ಮಾಡುತ್ತಾರೆ. ಇದರ ಲಾಭಾಂಶ ಅನ್ಯರ ಪಾಲಾಗುತ್ತಿದೆ. ಇದರಿಂದ ದಲಿತರಿಗೆ ಯಾವ ಉಪಯೋಗವೂ ಆಗುತ್ತಿಲ್ಲ ಎಂದು ತಿಳಿಸಿದರು.
ಕಾಗವಾಡದ ಶಿವಾನಂದ ಮಹಾವಿದ್ಯಾಲಯದ ಪ್ರಾಂಶುಪಾಲ ಪ್ರೊ.ಎಸ್.ಪಿ. ತಳವಾರ ಮಾತನಾಡಿ, ದಲಿತರು ಹಕ್ಕಿಗಾಗಿ ಹೋರಾಟ ಮಾಡಬೇಕು. ಆರ್ಥಿಕವಾಗಿ ಸಬಲರಾದರೆ ರಾಜಕೀಯ ಅಧಿಕಾರಕ್ಕೆ ಎಡೆ ಮಾಡುತ್ತದೆ. ರಾಜಕೀಯ ಅಧಿಕಾರದಿಂದ ಎಲ್ಲ ಬಾಗಿಲು ತೆರೆದುಕೊಳ್ಳುತ್ತೇವೆ. ನಮ್ಮ ಜೀವನ ಮಟ್ಟವೂ ಸುಧಾರಿಸುತ್ತದೆ ಎಂದು ತಿಳಿಸಿದರು.
ಮೀಸಲಾತಿ ಬೇಕು ಬೇಡ ಎಂಬ ಅವಾಸ್ತವಿಕವಾದ ಚರ್ಚೆ ನಡೆಯುತ್ತಿದೆ. ತಲೆತಲಾಂತರದಿಂದ ನೋವು ಅನುಭವಿಸಿದವರಿಗೆ ಕೊಟ್ಟಿರುವ ಸಂವಿಧಾನ ಬದ್ಧವಾದ ಹಕ್ಕು. ಸಮ ಸಮಾಜ ನಿರ್ಮಾಣವಾಗುವ ತನಕ ಮೀಸಲಾತಿ ಇರಬೇಕು ಎಂದು ಹೇಳಿದರು.
ಉದ್ಯಮಿ ಅರವಿಂದ್ ಘಟ್ಟಿ ಮಾತನಾಡಿ, ಎವಿಎಸ್ಎಸ್ ಚಿಕ್ಕೋಡಿ ಶಾಖೆಗೆ 500 ಸದಸ್ಯರನ್ನು ನೀಡುವುದಾಗಿ ಹೇಳಿದರು. ದಲಿತ ಉದ್ಯಮದ ಸ್ಥಾಪನೆಯ ಬಗ್ಗೆ ಸ್ಫೂರ್ತಿದಾಯಕ ಮಾತುಗಳನ್ನಾಡಿ ಹುರಿದುಂಬಿಸಿದರು.
ಮಹಿಳಾ ಸಂಘಗಳಿಗೆ ಯಶಸ್ವಿನಿ ಕಾರ್ಡ್ ವಿತರಣೆ ಮಾಡಲಾಯಿತು. ಕಮಲರತ್ನ ಭಂತೇಜಿ ಸಾನಿಧ್ಯ ವಹಿಸಿದ್ದರು. ಡಾ.ಹೊಂಬಯ್ಯ ಪ್ರಾಸ್ತಾವಿಕ ನುಡಿಗಳನ್ನಾಡಿ ನಿರ್ವಹಿಸಿದರು. ನಿವೃತ್ತ ಶಿಕ್ಷಕ ಡಿ.ಎಸ್. ಕುಲಕರ್ಣಿ ಮಾತನಾಡಿದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಿಸ್ತರಣಾಧಿಕಾರಿ ನಾಗರಾಜು ಕರನಿಂಗ್, ಎಸ್ಸಿ, ಎಸ್ಟಿ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಂಗಾಧರ್ ಕಾಂಬಳೆ, ದಲಿತ ಉದ್ಯಮಿ ಮಹೇಂದ್ರ ಸಾಳ್ವೆ, ದಿಲೀಪ್ ಕಾಂಬಳೆ, ಸದಸ್ಯರಾದ ದಯಾನಂದ ಕಾಂಬಳೆ, ದೇವಋಷಿ, ಗುಂಡ್ಲುಪೇಟೆ ಗೋವಿಂದರಾಜು, ಮೈಸೂರಿನ ಜಯರಾಮು ಮುಂತಾದವರಿದ್ದರು. ಎ.ಜೆ.ಕಾಂಬಳೆ ಅಂಬೇಡ್ಕರ್ ಗೀತೆ ಹಾಡಿದರು. ಪ್ರಶಸ್ತಿ ಪುರಸ್ಕೃತರ ಪರವಾಗಿ ಡಾ.ಚಿಂ.ಬ.ಬಸವರಾಜು ಮಾತನಾಡಿದರು.
ಡಾ.ಬಿ.ಆರ್. ಅಂಬೇಡ್ಕರ್ ಅವರು ಆಗಸ್ಟ್ 29ಕ್ಕೆ ಸಂವಿಧಾನ ಕರಡು ರಚನಾ ಸಮಿತಿ ಅಧ್ಯಕ್ಷರಾಗಿ 76 ವರ್ಷಗಳಾದ ಸಂದರ್ಭದಲ್ಲಿ ವಿವಿಧ ಕೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಬಾಬಾ ಸಾಹೇಬರು ನಡೆದಾಡಿದ ನೆಲದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ.
ಅಂಬೇಡ್ಕರ್ ಪ್ರಶಸ್ತಿ ಪ್ರದಾನ: ಹಾಸನದ ವಿಜಯಕುಮಾರ ಬಾಗಿವಾಳು, ಯೋಗೀಶ್ ಈ, ಚಾಮರಾಜನಗರದ ಡಾ.ಚಿಂ.ಬ.ಬಸವರಾಜು, ತಿ.ನರಸೀಪುರದ ನಾಗರಾಜು ತಲಕಾಡು, ಮಂಡ್ಯದ ಆತ್ಮನಂದಾ ಎನ್.ಆರ್, ಮೈಸೂರಿನ ಡಾ.ಮಂಜು ಎಚ್.ಪಿ, ವಿನೋದ್ ಮಹದೇವಪುರ, ಕೋಲಾರದ ಡಾ.ಭೈರಪ್ಪ ಕೆ.ಎಂ, ಯಾದಗಿರಿ ನೀಲಾ ಮಲ್ಲೆ, ಮದ್ದೂರಿನ ಡಾ.ಹೊಂಬಯ್ಯ, ರಾಮನಗರದ ಪ್ರಸನ್ನ, ದಾವಣಗೆರೆಯ ಡಾ.ರಂಗಸ್ವಾಮಿ, ತುಮಕೂರಿನ ಡಾ.ಕುಮಾರಸ್ವಾಮಿ ಬಿಜ್ಜಿಹಳ್ಳಿ ಸೇರಿ ೨೫ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.