ಚಾಮರಾಜನಗರ: ನಗರದ ಭ್ರಮಾರಂಭ ಬಡಾವಣೆಯ 22ನೇ ವಾರ್ಡ್‌ನ ಬೂತ್ ಸಂಖ್ಯೆ 66 ಹಾಗೂ 67ರ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (SIR) ಕಾರ್ಯದಲ್ಲಿ ಉತ್ತಮ ಸೇವೆ ಸಲ್ಲಿಸಿದ ಬಿಎಲ್ಓಗಳನ್ನು ಬುಧವಾರ ಸನ್ಮಾನಿಸಲಾಯಿತು.
ನಗರಸಭೆ ಮಾಜಿ ಉಪಾಧ್ಯಕ್ಷೆ ಮಮತಾ ಬಾಲಸುಬ್ರಮಣ್ಯ ಅವರ ಅಧ್ಯಕ್ಷತೆಯಲ್ಲಿ ಬಿಎಲ್ಓಗಳಾದ ಕುಮಾರ್, ಹೇಮಲತಾ ಹಾಗೂ ಗ್ರಾಮ ಲೆಕ್ಕಾಧಿಕಾರಿ ಉಜ್ವಲ್ ಅವರನ್ನು ಭಾರತೀಯ ಜನತಾ ಪಾರ್ಟಿ ವಾರ್ಡ್ 22ರ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಚುಡಾ ಮಾಜಿ ಅಧ್ಯಕ್ಷರಾದ ಎಸ್.ಬಾಲಸುಬ್ರಮಣ್ಯ ಮಾತನಾಡಿ, ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಸರಿದೂಗಿಸಲು ಮತದಾರರಾಗಿ ಮತ ಹಕ್ಕುಗಳನ್ನು ಚಲಾಯಿಸುವುದು ಎಲ್ಲರ ಆದ್ಯ ಕರ್ತವ್ಯವಾಗಿದೆ. ಇದನ್ನು ಮಾಡಬೇಕಾದರೆ ಮತದಾರರ ಪಟ್ಟಿಯಲ್ಲಿ ನಮ್ಮ ಹೆಸರುಗಳು ಸೇರ್ಪಡೆಯಾಗಬೇಕು. ಆ ಕೆಲಸವನ್ನು ಅತ್ಯಂತ ಶ್ರದ್ಧೆಯಿಂದ ಬಿಎಲ್ಓಗಳು ನಿರ್ವಹಿಸಿದ್ದಾರೆ ಎಂದರು.
ಮೇರಾ ಯುವ ಭಾರತ್ ಜಿಲ್ಲಾ ಸಲಹಾ ಸಮಿತಿ ಸದಸ್ಯ ಪ್ರತಾಪ್ ಮಾತನಾಡಿ, ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR) ರಾಷ್ಟ್ರೀಯ ಮಹತ್ವದ ಕಾರ್ಯವಾಗಿದೆ. ದೇಶದ ಪ್ರಜಾಪ್ರಭುತ್ವದ ಬಲವರ್ಧನೆಗೆ ಅತ್ಯಂತ ಪ್ರಮುಖವಾಗಿದೆ. ನಿಖರ ಮತ್ತು ಪಾರದರ್ಶಕ ಮತದಾರರ ಪಟ್ಟಿ ನಿರ್ಮಾಣಕ್ಕೆ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಶ್ರಮ ಶ್ಲಾಘನೀಯವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬೂತ್ ಅಧ್ಯಕ್ಷ ನಂದೀಶ್, ನಾಗಶ್ರೀ, ವರ್ತಕರ ಸಂಘದ ಅಧ್ಯಕ್ಷ ಚಿದಾನಂದ ಗಣೇಶ್, ಮಧುರಾಣಿ, ಲಕ್ಷ್ಮಿ,ಅಂಕಿತಾ, ಮಾನಸ, ಪ್ರೇಮ ಹಾಗೂ ಇತರರು ಹಾಜರಿದ್ದರು.