ಚಾಮರಾಜನಗರ: ಮೈಸೂರು ದಸರಾದಲ್ಲಿ ಕಂಬಳ ಮಾಡಲು ಸಿದ್ಧ ಪಡಿಸುತ್ತಿರುವ ಜಾಗಕ್ಕೆ ಖರ್ಚು ಮಾಡುವ ಹಣವನ್ನು ಚಾಮರಾಜನಗರದಲ್ಲಿ ಹಳ್ಳ ಬಿದ್ದಿರುವ ರಸ್ತೆಗಳನ್ನು ಮುಚ್ಚಿಸುವುದಕ್ಕೆ ಖರ್ಚು ಮಾಡಲಿ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹೇಳಿದರು.
ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಒಂದೊಂದು ಜಿಲ್ಲೆಗೆ ಒಂದೊಂದು ಸಾಂಸ್ಕೃತಿಕ ಹಿನ್ನೆಲೆ ಇದೆ. ಕಂಬಳ ಉಡುಪಿ, ಮಂಗಳೂರು, ಕಾರವಾರ ಭಾಗದಲ್ಲಿದೆ. ಮೈಸೂರು ದಸರಾ ವಿಜಯನಗರ ಅರಸರ ಕಾಲದಿಂದಲೂ ನಡೆಯುತ್ತಿದೆ. ಇಲ್ಲಿ ಕುಸ್ತಿ, ಚಾಮುಂಡೇಶ್ವರಿ ತಾಯಿ ಪೂಜೆ ಪ್ರಸಿದ್ಧಿಯಾಗಿದೆ. ಮಂಗಳೂರಿನಲ್ಲಿ ದಸರಾ ಮಾಡಿ ಈ ಪದ್ಧತಿಗಳನ್ನೆಲ್ಲ ಹೇರಿಕೆ ಮಾಡಬಾರದು ಎಂದರು.
ಈ ಬಾರಿಯ ಮೈಸೂರು ದಸರಾ ಕಾರ್ಯಕ್ರಮದಲ್ಲಿ ಕಂಬಳ ಮಾಡಲು ಸುಮಾರು 10 ಕೋಟಿ ರೂ, ಖರ್ಚು ಮಾಡಲು ಸರ್ಕಾರ ಮುಂದಾಗುತ್ತಿದೆ. ಕಂಬಳಕ್ಕೆ ಹಳ್ಳ ತೋಡಲು ಹಣವನ್ನು ಖರ್ಚು ಮಾಡುವ ಬದಲು ಚಾಮರಾಜನಗರದಲ್ಲಿ ಗುಂಡಿ ಬಿದ್ದಿರುವ ರಸ್ತೆಗಳ ಅಭಿವೃದ್ಧಿಗೆ ಬಳಕೆ ಮಾಡಲಿ ಎಂದು ತಿಳಿಸಿದರು.