ಕಾಂಗ್ರೆಸ್ ನಿಂದ ಎಸ್ಐಆರ್ ಹೈಜಾಕ್ ಮಾಡುವ ಪ್ರಯತ್ನ-ಆರ್.ಅಶೋಕ್ ಆರೋಪ 

ಮಣಿಕಂಠ ಜನತಾ ರಾಯಭಾರಿ
3 Min Read

ಚಾಮರಾಜನಗರ: ಭಾರತೀಯರಿಗೆ ಮಾತ್ರ ಮತದಾನದ ಹಕ್ಕು ದೊರೆಯಬೇಕು ಎಂಬ ಉದ್ದೇಶದಿಂದ 20 ವರ್ಷಗಳಿಗೊಮ್ಮೆ ಮತದಾರರ ಪರಿಷ್ಕರಣೆ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಎಸ್.ಐ.ಆರ್ ಪ್ರಕ್ರಿಯೆ ಪ್ರಾರಂಭವಾಗಿದೆ. ಆದರೆ ಕಾಂಗ್ರೆಸ್ ಸರ್ಕಾರ ಇದನ್ನು ಹೈಜಾಕ್ ಮಾಡುವ ಪ್ರಯತ್ನ ಮಾಡುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಆರೋಪಿಸಿದರು.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ತುಂಬಿದೆ. ಆದರೆ ಈಗ ಕಾಂಗ್ರೆಸ್ ಅಕ್ರಮ ವಲಸಿಗರಿಗೆ ಶಾಶ್ವತ ವಾಸ ದೃಢೀಕರಣ ಪತ್ರವನ್ನು ನೀಡಲು ಮುಂದಾಗಿರುವುದು ಅತ್ಯಂತ ಖಂಡನೀಯ. ಅಕ್ರಮ ವಲಸಿಗರನ್ನು ಪತ್ತೆ ಹಚ್ಚಲು ಎಸ್ಐಆರ್ ಮಾಡಲಾಗುತ್ತಿದೆ. ಆದರೆ ಕಾಂಗ್ರೆಸ್ ಅಕ್ರಮ ವಲಸಿಗರಿಗೆ ಶಾಶ್ವತ ವಾಸ ದೃಢೀಕರಣ ಪತ್ರ ನೀಡಲು ಮುಂದಾಗಿರುವುದು ಎಷ್ಟು ಸರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಸುಮಾರು 20-30 ಲಕ್ಷ ಜನರು ಅಕ್ರಮ ವಲಸಿಗರು ಇದ್ದಾರೆ ಎಂಬ ಸಂಶಯ ವ್ಯಕ್ತವಾಗುತ್ತಿದೆ. ಆದರೆ ಕಾಂಗ್ರೆಸ್ ಅಕ್ರಮ ವಲಸಿಗರಿಗೆ ಎಂದಿನಂತೆ ಸವಲತ್ತು ಕೊಡಲು ಮುಂದಾಗಿದ್ದು, ಈ ಮೂಲಕ ಅಲ್ಪಸಂಖ್ಯಾತರನ್ನು ಓಲೈಕೆ ಮಾಡಲು ಬಹುದೊಡ್ಡ ಹುನ್ನಾರ ಮಾಡಿಕೊಂಡಿದೆ. ಈ ದೇಶದಲ್ಲಿ ನಕ್ಸಲಿಸಂ ಪ್ರಾರಂಭವಾಗಿದ್ದೇ ಕಾಂಗ್ರೆಸ್ ಸರ್ಕಾರದಲ್ಲಿ, ಆದರೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಕ್ಸಲಿಸಂ ಅನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಿದೆ ಎಂದು ಹೇಳಿದರು.

ಕಾಂಗ್ರೆಸ್ ಗ್ಯಾರಂಟಿ ಹೆಸರಿನಲ್ಲಿ ಜನರಿಗೆ ಮಂಕುಬೂದಿ ಎರಚುವ ಕೆಲಸ: ಪಂಚ ಗ್ಯಾರಂಟಿಗಳ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಪ್ರಸ್ತುತ ಗ್ಯಾರಂಟಿ ಯೋಜನೆಗಳಿಗೆ ಹಣಕೊಡಲು ಪರದಾಡುವಂತಹ ಸ್ಥಿತಿಯಲ್ಲಿದ್ದು, ಕಾಂಗ್ರೆಸ್ ಗ್ಯಾರಂಟಿ ಹೆಸರಿನಲ್ಲಿ ಜನರಿಗೆ ಮಂಕುಬೂದಿ ಎರಚುವ ಕೆಲಸ ಮಾಡುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಆರೋಪಿಸಿದರು. ಈಗಾಗಲೇ ಗೃಹ ಲಕ್ಷ್ಮೀ ಯೋಜನೆಯಲ್ಲಿ 5000 ಕೋಟಿ ರೂ, ಹಣವನ್ನು ಕಾಂಗ್ರೆಸ್ ನಾವರು ನುಂಗಿ ಹಾಕಿದ್ದಾರೆ. ಎಲ್ಲರಿಗೂ ಗ್ಯಾರಂಟಿ ಯೋಜನೆ ಎಂದು ಹೇಳಿ ಈಗ ಟ್ಯಾಕ್ಸ್, ಜಿಎಸ್ಟಿ ಕಟ್ಟುವವರಿಗೆ ಗೃಹ ಲಕ್ಷ್ಮೀ ಹಣವನ್ನು ನೀಡುವುದಿಲ್ಲ ಎನ್ನುತ್ತಿದ್ದಾರೆ. ಕುಸ್ತಿ ಪಟುಗಳಿಗೆ 7 ತಿಂಗಳಿಂದ ಗೌರವಧನ ಕೊಟ್ಟಿಲ್ಲ, ವೃದ್ಧಾಪ್ಯ ಮತ್ತು ವಿಧವಾ ವೇತನವನ್ನು ನೀಡಲು ಕೂಡ ಕಾಂಗ್ರೆಸ್ ಸರ್ಕಾರದಲ್ಲಿ ಹಣವಿಲ್ಲದಂತಾಗಿದೆ. ಒತಟ್ಟಾರೆ ಕಾಂಗ್ರೆಸ್ ಸರ್ಕಾರ ರಾಜ್ಯವನ್ನು ದಿವಾಳಿ ಅಂಚಿನಲ್ಲಿ ತಂದು ನಿಲ್ಲಿಸಿದೆ. ನಮ್ಮ ಸರ್ಕಾರದ ಅವಧಿಯಲ್ಲಿ ಕೆರೆಗಳನ್ನು ತುಂಬಿಸುವ ಕೆಲಸವನ್ನು ಮಾಡಿದ್ದೇವೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೆರೆಗಳಿಗೆ ನೀರು ತುಂಬಿಸಲು ಹಣವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

ಬರದ ಛಾಯೆಯಲ್ಲಿ ರೈತಾಪಿ ವರ್ಗ: ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಬರದ ಛಾಯೆ ಇದ್ದು, ರೈತರ ಬೆಳೆಗಳು ಸಂಪೂರ್ಣವಾಗಿ ಒಣಗಿದೆ. ರೈತಾಪಿ ವರ್ಗ ಈ ಬಾರಿ ಸಾಕಷ್ಟು ಸಂಕಷ್ಟಕ್ಕೆ ಸಿಲುಕಿದ್ದು, ಬರ ಪರಿಸ್ಥಿತಿಯನ್ನು ಘೋಷಣೆ ಮಾಡಲು ಕೂಡ ರಾಜ್ಯ ಸರ್ಕಾರ ಮುಂದಾಗಿಲ್ಲ ಎಂದು ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದರು. ಬರದ ಪರಿಸ್ಥಿತಿ ಕುರಿತು ಯಾವುದೇ ಸಮೀಕ್ಷೆ ಮಾಡದೇ, ಯಾವುದೇ ವರದಿಯನ್ನು ಸಿದ್ಧಪಡಿಸದೇ ಕೇಂದ್ರ ಸರ್ಕಾರ 10 ಸಾವಿರ ಕೋಟಿ ರೂ, ಅನುದಾನವನ್ನು ಕೊಡಬೇಕು ಎಂದು ಕೇಳುವುದು ಮೂರ್ಖತನದ ಪರಮಾವಧಿಯಾಗಿದೆ. ಈ ವಿಚಾರದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಸಿ. ಎಸ್, ನಿರಂಜನ್ ಕುಮಾರ್, ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್, ವಿಧಾನ ಪರಿಷತ್ ಮಾಜಿ ಸದಸ್ಯ  ಪ್ರೊ.ಮಲ್ಲಿಕಾರ್ಜುನಪ್ಪ, ಬಿಜೆಪಿ ರಾಜ್ಯ ಕಾರ್ಯದರ್ಶಿ ಡಾ. ಲಕ್ಹ್ಮೀ ಅಶ್ವಿನ್ ಗೌಡ, ಕೇಂದ್ರ ಪರಿಹಾರ ಸಮಿತಿ ಮಾಜಿ ಸದಸ್ಯ ಎಂ.ರಾಮಚಂದ್ರು , ಮಾಜಿ ಜಿಲ್ಲಾಧ್ಯಕ್ಷರಾದ ನಾರಾಯಣ ಪ್ರಸಾದ್, ಜಿಲ್ಲಾ ಪ್ರದಾನ ಕಾರ್ಯಧರ್ಶಿ ಮೂಡ್ನಾಕೂಡು ಪ್ರಕಾಶ್, ವಕ್ತಾರ ಮನೋಜ್ ಪಟೇಲ್ ಹಾಜರಿದ್ದರು.

Share this Article
Leave a comment