ಕೃಷಿ ಪ್ರಶಸ್ತಿ ಯೋಜನೆಯಡಿ ಬೆಳೆ ಸ್ಪರ್ಧೆಗೆ ರೈತರಿಂದ ಅರ್ಜಿ ಆಹ್ವಾನ 

ಮಣಿಕಂಠ ಜನತಾ ರಾಯಭಾರಿ
2 Min Read

ಚಾಮರಾಜನಗರ, ಆಗಸ್ಟ್ -25: ಕೃಷಿ ಇಲಾಖೆ ವತಿಯಿಂದ ಜಿಲ್ಲೆಯಲ್ಲಿ 2026-27ನೇ ಸಾಲಿಗೆ ಮುಂಗಾರು ಹಂಗಾಮಿನಲ್ಲಿ ಕೃಷಿ ಪ್ರಶಸ್ತಿ ಯೋಜನೆಯಡಿ ಬೆಳೆ ಸ್ಪರ್ಧೆಗೆ ರೈತರು ಹಾಗೂ ರೈತ ಮಹಿಳೆಯರಿಂದ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ರಾಜ್ಯದ ಕೃಷಿ ಉತ್ಪಾದನೆ ಗಣನೀಯವಾಗಿ ಹೆಚ್ಚಳವಾಗಲು ರೈತರ ಶ್ರಮ ಮತ್ತು ಸಕ್ರಿಯ ಪಾಲುಗಾರಿಕೆ ಕಾರಣವಾಗಿರುತ್ತದೆ. ಇಂತಹ ರೈತರನ್ನು ಗುರುತಿಸಲು ರಾಜ್ಯ, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟಗಳಲ್ಲಿ ಕೃಷಿ ಪ್ರಶಸ್ತಿ ಬಹುಮಾನಗಳನ್ನು ನೀಡಲಾಗುತ್ತದೆ. ಕೃಷಿ ಪ್ರಶಸ್ತಿ ಯೋಜನೆಯಡಿಯಲ್ಲಿ ಬೆಳೆ ಸ್ಪರ್ಧೆಗೆ ಭಾಗವಹಿಸಲಿಚ್ಚಿಸುವ ರೈತರು ರೈತ ಮಹಿಳೆಯರು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಕೃಷಿ ಇಲಾಖೆಯ ಕೆ-ಕಿಸಾನ್ ಪೋರ್ಟಲ್ ನಲ್ಲಿ ಕೃಷಿ ಪ್ರಶಸ್ತಿಗೆ ಅರ್ಜಿ ನಮೂನೆಯನ್ನು ಅಳವಡಿಸಲಾಗಿದೆ. ಸಿಟಿಜನ್ ಲಾಗಿನ್ ಅಥವಾ ಆರ್.ಎಸ್.ಕೆ. ಲಾಗಿನ್ ಮೂಲಕ ಹತ್ತಿರದ ರೈತ ಸಂಪರ್ಕ ಕೇಂದ್ರ, ಸಾಮಾನ್ಯ ಸೇವಾ ಕೇಂದ್ರ, ಸ್ವತಹ ಆಸಕ್ತ ರೈತ, ರೈತ ಮಹಿಳೆಯರು ಪ್ರತ್ಯೇಕವಾಗಿ ಕೆ-ಕಿಸಾನ್ ಪೋರ್ಟಲ್ ನಲ್ಲಿ ಅಗತ್ಯ ದಾಖಲೆಗಳೊಂದಿಗೆ ತಮ್ಮ ಎಫ್.ಐ.ಡಿ ಸಂಖ್ಯೆಯನ್ನು ಬಳಸಿಕೊಂಡು ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಕೃಷಿ ಪ್ರಶಸ್ತಿಯಲ್ಲಿ ಬೆಳೆ ಸ್ಪರ್ಧೆಗೆ ಅರ್ಜಿ ಶುಲ್ಕವನ್ನು ರದ್ದುಪಡಿಸಲಾಗಿದೆ.

ವಿವಿಧ ಹಂತದ ಬೆಳೆ ಸ್ಪರ್ಧೆ ವಿಜೇತರಿಗೆ ತಾಲೂಕು ಮಟ್ಟದ ಸ್ಪರ್ಧೆಗೆ ಪ್ರಥಮ ಬಹುಮಾನವಾಗಿ 15 ಸಾವಿರ, ದ್ವಿತೀಯ 10 ಸಾವಿರ, ತೃತೀಯ 5 ಸಾವಿರ ಹಾಗೂ ಜಿಲ್ಲಾಮಟ್ಟದ ಸ್ಪರ್ಧೆಗೆ ಪ್ರಥಮ 30 ಸಾವಿರ, ದ್ವಿತೀಯ 25 ಸಾವಿರ, ತೃತೀಯ 20 ಸಾವಿರ ಮತ್ತು ರಾಜ್ಯಮಟ್ಟದ ಸ್ಪರ್ಧೆಗೆ ಪ್ರಥಮ 50 ಸಾವಿರ, ದ್ವಿತೀಯ 40 ಸಾವಿರ, ತೃತೀಯ 35 ಸಾವಿರ ರೂ. ಬಹುಮಾನ ನಿಗದಿಪಡಿಸಲಾಗಿದೆ. ವಿವಿಧ ಹಂತದ ಬೆಳೆ ಸ್ಪರ್ಧೆಗೆ ನಿಗದಿಪಡಿಸಿದ ಬೆಳೆಗಳಲ್ಲಿ ಮಾತ್ರ ಸ್ಪರ್ಧೆಯನ್ನು ಏರ್ಪಡಿಸಲಾಗುವುದು ಹಾಗೂ ಅರ್ಜಿಗಳನ್ನು ಸ್ವೀಕರಿಸಲಾಗುವುದು.

ಚಾಮರಾಜನಗರ ಮತ್ತು ಗುಂಡ್ಲುಪೇಟೆ ತಾಲೂಕಿಗೆ ಮಳೆ ಆಶ್ರಿತ ಮುಸುಕಿನ ಜೋಳ, ಕೊಳ್ಳೇಗಾಲ ತಾಲೂಕಿಗೆ ನೀರಾವರಿ ಆಶ್ರಿತ ಭತ್ತ, ಹನೂರು ತಾಲೂಕಿಗೆ ಮಳೆ ಆಶ್ರಿತ ರಾಗಿ, ಯಳಂದೂರು ತಾಲೂಕಿಗೆ ನೀರಾವರಿ ಆಶ್ರಿತ ಭತ್ತ ಬೆಳೆಗಳನ್ನು ತಾಲೂಕುವಾರು ಕೃಷಿ ಪ್ರಶಸ್ತಿಗೆ ನಿಗದಿಪಡಿಸಲಾಗಿದೆ. ಮುಂಗಾರು ಹಂಗಾಮಿನ ಬೆಳೆ ಸ್ಪರ್ಧೆಗೆ ನೋಂದಾಯಿಸಿಕೊಳ್ಳಲು ಆಗಸ್ಟ್ 31 ಕಡೆಯ ದಿನವಾಗಿದೆ.

ಹೆಚ್ಚಿನ ಮಾಹಿತಿಗಾಗಿ ರೈತರು ಹತ್ತಿರದ ರೈತ ಸಂಪರ್ಕ ಕೇಂದ್ರ ಹಾಗೂ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಭೇಟಿ ನೀಡುವಂತೆ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share this Article
Leave a comment