ಖರ್ಗೆ ಭಾಗಿಯಾಗಿದ್ದ ವೇದಿಕೆ ಶುದ್ಧೀಕರಣ; ಬಿಎಸ್ಪಿ ನಾಯಕಿ ಮಾಯಾವತಿ ಖಂಡನೆ

ಮಣಿಕಂಠ ಜನತಾ ರಾಯಭಾರಿ
1 Min Read

ಲಕ್ನೋ: ಎಐಸಿಸಿ ಅಧ್ಯಕ್ಷೆ ಹಾಗೂ ದಲಿತ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಭಾಗವಹಿಸಿದ್ದ ಸಭೆಯ ವೇದಿಕೆಯನ್ನು ಶುದ್ಧೀಕರಣಗೊಳಿಸಿದ್ದ ಪ್ರಕರಣವನ್ನು ಬಹುಜನ ಸಮಾಜ ಪಕ್ಷದ ನಾಯಕಿ ಮಾಯಾವತಿ ತೀವ್ರವಾಗಿ ಖಂಡಿಸಿದ್ದಾರೆ.

ಉತ್ತರಾಖಂಡದ ಹಲ್ದಾನಿಯಲ್ಲಿ ಆಯೋಜನೆಗೊಂಡಿದ್ದ ಸಭೆಯನ್ನುದ್ದೇಶಿಸಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾಷಣ ಮಾಡಿದ್ದ ವೇದಿಕೆಯನ್ನು ‘ಶುದ್ದೀಕರಿಸಿದ’ ಕ್ರಮವನ್ನು ಶುಕ್ರವಾರ ಖಂಡಿಸಿರುವ ಬಿಎಸ್ಪಿ ವರಿಷ್ಠೆ ಮಾಯಾವತಿ, ಇದು ತೀವ್ರ ಖಂಡನೀಯ ಮತ್ತು ಆತಂಕಕಾರಿಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಈ ಕೃತ್ಯಕ್ಕೆ ಕಾರಣವಾಗಿರುವ ಜಾತಿವಾದಿ ಹಾಗೂ ಊಳಿಗಮಾನ್ಯ ಶಕ್ತಿಗಳ ವಿರುದ್ಧ ಉತ್ತರ ಪ್ರದೇಶ ಮುಖ್ಯಮಂತ್ರಿ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಮಾಯಾವತಿ ಅವರು, “ಸಂಸತ್ತಿನ ಮೂಲಕ ಈ ಘಟನೆಯ ಕುರಿತು ದೇಶಕ್ಕೆ ತಿಳಿಯುವಂತಾಯಿತು. ಈ ವಿಷಯ ತೀವ್ರ ಖಂಡನೀಯ ಹಾಗೂ ಆತಂಕಕಾರಿಯಾಗಿದೆ” ಎಂದು ಹೇಳಿದ್ದಾರೆ.

ಈ ಪ್ರಕರಣ ಸಂಬಂಧ ರಾಜ್ಯಸಭೆಯನ್ನುದ್ದೇಶಿಸಿ ಮಾತನಾಡಿದ್ದ ಮಲ್ಲಿಕಾರ್ಜುನ ಖರ್ಗೆ, ಬಿಜೆಪಿಯೊಂದಿಗೆ ಸಂಬಂಧ ಹೊಂದಿರುವ ವ್ಯಕ್ತಿಗಳು ಈ ‘ಶುದ್ದೀಕರಣ’ ನಡೆಸಿದ್ದು, ಅಂತಹ ವ್ಯಕ್ತಿಗಳ ವಿರುದ್ಧ ಅಸ್ಪೃಶ್ಯಪತಾ ಕಾಯ್ದೆಯಡಿ ಕ್ರಮ ಕೈಗೊಳ್ಳಬೇಕು ಹಾಗೂ ಜೈಲಿಗೆ ಹಾಕಬೇಕು ಎಂದು ಆಗ್ರಹಿಸಿದ್ದರು. ಈ ನಡೆಯನ್ನು ಕೇಂದ್ರ ಸಚಿವ ಜೆ.ಪಿ.ನಡ್ಡಾ ಕೂಡ ಖಂಡಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Share this Article
Leave a comment