ಗುಂಡ್ಲುಪೇಟೆ ತಾಲೂಕನ್ನು ಬರಪೀಡಿತ ಪ್ರದೇಶ ಎಂದು ಘೋಷಿಸುವಂತೆ ಬಿಜೆಪಿ ‌ಒತ್ತಾಯ

ಮಣಿಕಂಠ ಜನತಾ ರಾಯಭಾರಿ
2 Min Read

ಗುಂಡ್ಲುಪೇಟೆ: ಪ್ರಸಕ್ತ ಸಾಲಿನಲ್ಲಿ ತಾಲೂಕಿನಲ್ಲಿ ಮುಂಗಾರು ಕೊರತೆಯಿಂದಾಗಿ ತಾಲೂಕಿನ ಬಹುತೇಕ ಗ್ರಾಮಗಳ ಕೊಳವೆ ಬಾವಿಗಳಲ್ಲಿ ನೀರು ನಿಂತು, ಕೆರೆಗಳು ಬತ್ತಿ ಹೋಗಿದ್ದು ಹಾಗಾಗಿ ತಾಲೂಕನ್ನು ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡುವಂತೆ ಒತ್ತಾಯಿಸಿ ಮಂಡಲ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಯಿತು.

ಪಟ್ಟಣದ ತಾಲೂಕು ಕಚೇರಿಯ ಮುಂದೆ ಜಮಾವಣೆಗೊಂಡ ಬಿಜೆಪಿ ಕಾರ್ಯಕರ್ತರು ರಾಜ್ಯ ಸರ್ಕಾರ ಮತ್ತು ಶಾಸಕ ಗಣೇಶ್ ಪ್ರಸಾದ್ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.

ಈ ಸಂಧರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಮಾಜಿ ಶಾಸಕ ಸಿ.ಎಸ್ ನಿರಂಜನ್ ಕುಮಾರ್ ‌ಮಾತನಾಡಿ,ತಾಲೂಕಿನಲ್ಲಿ ಹಂಗಳ, ಬೇಗೂರು, ತೆರಕಣಾಂಬಿ, ಹರವೆ ಭಾಗಗಳಲ್ಲಿ ಶೇಕಡವಾರು ಫಸಲುಗಳು ಒಣಗಿ ಹೋಗಿದ್ದು, ಬರ ಆವರಿಸಿದೆ.ಆದ್ದರಿಂದ ಸರ್ಕಾರ ಕೂಡಲೇ ಗುಂಡ್ಲುಪೇಟೆಯನ್ನು ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.

ಶಾಸಕ ಗಣೇಶಪ್ರಸಾದ್ ಕೆರೆಗಳಿಗೆ ನೀರು ತುಂಬಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. 3ನೇ ಹಂತದ ಕೆರೆಗಳಿಗೆ ಕಳೆದ ವರ್ಷ ಡಿಸೆಂಬರ್ ನಲ್ಲೆ ನೀರು ತುಂಬಿಸುತ್ತೇವೆ ಎಂದು ಭರವಸೆ ನೀಡಿ, 8 ತಿಂಗಳು ಕಳೆದರು ಶಿವಪುರ ಕಲ್ಲುಕಟ್ಟೆ ಕೆರೆಗೆ ನೀರು ಬಂದಿಲ್ಲ. ಹುತ್ತೂರು ಪಂಪ್ ಹೌಸ್ ನಿಂದ ಮೂರು ದಿನ ನೀರು ಹರಿದರೆ ನಾಲ್ಕನೇ ದಿನ ನೀರು ನಿಲ್ಲಿಸಲಾಗುತ್ತಿದೆ. ಇದರಿಂದ ಯಾವ ಕೆರೆಯೂ ಸಂಪೂರ್ಣವಾಗಿ ತುಂಬಿಲ್ಲ. ಇದರಿಂದ ಆ ಭಾಗದ ಬೋರ್ ಗಳು ನಿಂತು ಹೋಗಿದ್ದು, ಜೋಳ, ಸೂರ್ಯಕಾಂತಿ ಫಸಲು ಸಂಪೂರ್ಣ ಹಾಳಾಗಿದೆ. ಜೊತೆಗೆ ಹಂಗಳ, ಕಲ್ಲಿಗೌಡನಹಳ್ಳಿ, ದೇವರಹಳ್ಳಿ, ಕಳ್ಳಿಪುರ, ಗೋಪಾಲಪುರ ಭಾಗದ ರೈತರು ಬೆಳ್ಳುಳ್ಳಿ ಬೆಳೆ ಉಳಿಸಿಕೊಳ್ಳಲು ಖಾಸಗೀ ಟ್ಯಾಂಕರ್ ಗಳ ಮೊರೆ ಹೋಗಿದ್ದು, ಒಂದು ಟ್ಯಾಂಕರ್ ಗೆ 1200 ರೂ. ಹಣ ನೀರು ತಿರುಸುವ ಪರಿಸ್ಥಿತಿ ಬಂದೊದಗಿದೆ ಎಂದರು

ಕೆರೆಗಳಿಗೆ ನೀರಿಲ್ಲದ ಕಾರಣ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದ ಬಹುತೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗುತ್ತಿದೆ. ಇದರ ಬಗ್ಗೆ ಶಾಸಕ ಗಣೇಶಪ್ರಸಾದ್ ತಲೆ ಕೆಡಿಸಿಕೊಂಡಿಲ್ಲ. ಕೇವಲ ಉಢಾಪೆ ಮಾತುಗಳನ್ನಾಡುತ್ತ ಕಾಲಾಹರಣ ಮಾಡುತ್ತಿದ್ದಾರೆ. ಇವರಿಗೆ ರೈತರಿಗೆ ಕಷ್ಟ ಅರಿವಾಗುವುದಿಲ್ಲ. ಅಪ್ಪನ ಹಣದಿಂದ ರಾಜಕೀಯ ಮಾಡುವವರಿಗೆ ರೈತರ ಸಮಸ್ಯೆ ತಿಳಿಯುವುದಿಲ್ಲ ಎಂದು ಕಿಡಿಕಾರಿದರು.

ವೃದ್ಧಾಪ್ಯ ವೇತನ ನೀಡಲು ಸರ್ಕಾರ ಮೀನಾಮೇಶ: ವೃದ್ಧಾಪ್ಯ ವೇತನ ನೀಡಲು ಆದಾಯ ಪ್ರಮಾಣ ಪತ್ರದಲ್ಲಿ ವಾರ್ಷಿಕವಾಗಿ 30 ಸಾವಿರ ನಿಗಧಿಯಾಗಿರಬೇಕು ಎಂದು ಕಾಂಗ್ರೆಸ್ ಸರ್ಕಾರ ಹೊರಡಿಸಿರುವ ಆದೇಶ ಅವೈಜ್ಞಾನಿಕವಾಗಿದೆ. ಇದರಿಂದ ವಯಸ್ಸಾದ ಮಹಿಳೆಯರು, ಪುರುಷರಿಗೆ ತೊಂದರೆ ಉಂಟಾಗಿದ್ದು, ನಾಡ ಕಚೇರಿಗಳಿಗೆ ಆದಾಯ ಪ್ರಮಾಣ ಪತ್ರ ಮಾಡಿಸಲು ಪ್ರತಿನಿತ್ಯ ಅಲೆದಾಡುವ ಸ್ಥಿತಿ ಬಂದಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ಸಿ.ಮಹದೇವಪ್ರಸಾದ್, ಡಾ.ನವೀನ್ ಮೌರ್ಯ, ಜಿಡಿಎಲ್ ಸುರೇಶ್, ಮಹದೇವಶೆಟ್ಟಿ,ಕನ್ನೇಗಾಲ ಸ್ವಾಮಿ, ಜಗದೀಶ್,ಅಗತಗೌಡನಹಳ್ಳಿ ಬಸವರಾಜು, ಪುರಸಭಾ ಮಾಜಿ ಸದಸ್ಯ ನಾಗೇಶ್, ಹಾಪ್ ಕಾಮ್ಸ್ ಮಾಜಿ ಅಧ್ಯಕ್ಷ ಲೋಕೇಶ್,ಕಬ್ಬಹಳ್ಳಿ ರೇವಣ್ಣ, ಪ್ರಣಯ್, ಶಿವಣ್ಣನಾಯಕ,ನಮೋ ಮಂಜು, ಸುನಿಲ್ ಮೂಡ್ಲು ,ಶಿಂಡನಪುರ ಮಂಜು, ಗೋವಿಂದನಾಯಕ್, ಡಿ.ಮಹೇಶ್, ಹರಿಶ್ಚಂದ್ರ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

Share this Article
Leave a comment