ಚಿರನಿದ್ರೆಗೆ ಜಾರಿದ ಮಾಜಿ ಪ್ರಧಾನಿ ಪತ್ನಿ, ಚೆನ್ನಮ್ಮ ಅವರ ಅಂತ್ಯ ಸಂಸ್ಕಾರ ಎಲ್ಲಿ? 

ಮಣಿಕಂಠ ಜನತಾ ರಾಯಭಾರಿ
1 Min Read

ಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡ ಅವರ ಪತ್ನಿ ಚೆನ್ನಮ್ಮ (85) ಅವರು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಮೃತಪಟ್ಟಿದ್ದಾರೆ.

ಚೆನ್ನಮ್ಮ ಅವರು ಮೃತಪಟ್ಟಿರುವ ಹಿನ್ನೆಲೆಯಲ್ಲಿ ಬೆಂಗಳೂರು ಪದ್ಮನಾಭನಗರದ ದೇವೇಗೌಡರ ನಿವಾಸದಲ್ಲಿ ಇಂದು ಸಂಜೆಯಿಂದಲೇ ಸಾರ್ವಜನಿಕರು ಮತ್ತು ಗಣ್ಯರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಸಿಎಂ ಡಿಕೆ ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ, ಕೇಂದ್ರ ಮಂತ್ರಿಗಳು ಸೇರಿದಂತೆ ಅನೇಕ ಗಣ್ಯರು ಭೇಟಿ ನೀಡುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಮಣಿಪಾಲ್ ಆಸ್ಪತ್ರೆಯ ಮುಂಭಾಗ ಹಾಗೂ ಇನ್ನಿತರೆ ಕಡೆಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ಮಾಜಿ ಸಚಿವ ಹೆಚ್.ಡಿ. ರೇವಣ್ಣ, ನಿಖಿಲ್ ಕುಮಾರಸ್ವಾಮಿ ಅವರು ಈಗಾಗಲೇ ಚರ್ಚೆ ನಡೆಸಿದ್ದು, ಇಡೀ ಕುಟುಂಬ ಹಾಸನಕ್ಕೆ ತೆರಳಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಹಾಸನದಲ್ಲಿ ಚೆನ್ನಮ್ಮ ಅಂತ್ಯಕ್ರಿಯೆ: ಸುದೀರ್ಘ 72 ವರ್ಷಗಳ ಕಾಲ ಸಾಂಸಾರಿಕ ಜೀವನ ನಡೆಸಿದ ಎಚ್.ಡಿ.ದೇವೆಗೌಡ ಅವರನ್ನು ಪತ್ನಿ ಚೆನ್ನಮ್ಮ ಅವರು ಇಂದು ಬಿಟ್ಟು ಹೋಗಿದ್ದಾರೆ. ಅವರ ಅಂತ್ಯಕ್ರಿಯೆಯನ್ನು ಹಾಸನ ಜಿಲ್ಲೆ, ಹೊಳೆನರಸೀಪುರ ತಾಲೂಕಿನ ಹರದನಹಳ್ಳಿ ಗ್ರಾಮದಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಇದು ದೇವೇಗೌಡರ ಹುಟ್ಟೂರು ಮತ್ತು ಅವರ ಸ್ವಂತ ಮನೆ ಇರುವ ಸ್ಥಳವಾಗಿದೆ. ಪದ್ಮನಾಭನಗರದಲ್ಲಿ ಅಂತಿಮ ದರ್ಶನದ ಬಳಿಕ ಪಾರ್ಥಿವ ಶರೀರವನ್ನು ಹಾಸನಕ್ಕೆ ರವಾನಿಸಲಾಗುತ್ತದೆ. ರೈತ ಸಂಪ್ರದಾಯದಂತೆ ಹರದನಹಳ್ಳಿಯಲ್ಲಿರುವ ಕೃಷಿ ಜಮೀನಿನ ಬಳಿ ಅಂತ್ಯಕ್ರಿಯೆ ನೆರವೇರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

Share this Article
Leave a comment