ಪ್ರತ್ಯೇಕ ಜಿಲ್ಲಾ ಸಹಕಾರ ಬ್ಯಾಂಕ್ ಸ್ಥಾಪನೆಗೆ ಎಲ್ಲರ ಸಹಕಾರ ಅಗತ್ಯ : ಎಚ್.ಎಸ್.ನಂಜುಂಡಪ್ರಸಾದ್ 

ಮಣಿಕಂಠ ಜನತಾ ರಾಯಭಾರಿ
3 Min Read

*ಶ್ರೀ ಬಸವೇಶ್ವರ ಪತ್ತಿನ ಸಹಕಾರ ಸಂಘದ ರಜತ ಮಹೋತ್ಸವ ಉದ್ಘಾಟನೆ 

*ಮೂರು ಸಂಘಗಳ ವಾರ್ಷಿಕ ಮಹಾಸಭೆ ; ಪ್ರತಿಭಾ ಪುರಸ್ಕಾರ ಕಾರ್ಯಕ್ರಮ 

ಚಾಮರಾಜನಗರ: ಜಿಲ್ಲೆಯ ಆರ್ಥಿಕ ಪ್ರಗತಿಗೆ ಪೂರಕವಾಗಿ ಪ್ರತ್ಯೇಕ ಜಿಲ್ಲಾ ಸಹಕಾರ ಬ್ಯಾಂಕ್ ರಚನೆಯಾಗಬೇಕಾಗಿದೆ. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಹಾಗು ಸಹಕಾರಿ ಬಂಧುಗಳು ಸಹಕಾರ ನೀಡಬೇಕು ಎಂದು ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷರು ಆದ ಚಾಮುಲ್ ನಿರ್ದೇಶಕ ಎಚ್.ಎಸ್. ನಂಜುಂಡಪ್ರಸಾದ್ ತಿಳಿಸಿದರು.

ನಗರದ ಶ್ರೀ ಬಸವರಾಜಸ್ವಾಮಿಗಳ ಅನುಭವ ಮಂಟಪದಲ್ಲಿ ಶ್ರೀ ಬಸವೇಶ್ವರ ಪತ್ತಿನ ಸಹಕಾರ ಸಂಘದ ರಜತ ಮಹೋತ್ಸವ ಉದ್ಗಾಟನೆ ಮತ್ತು ಮೂರು ಸಂಘಗಳ ವಾರ್ಷಿಕ ಮಹಾಸಭೆಯನ್ನು ಉದ್ಗಾಟಿಸಿ ಅವರು ಮಾತನಾಡಿದರು.

ಚಾಮರಾಜನಗರ ಜಿಲ್ಲೆಯಾಗಿ 29 ವರ್ಷಗಳು ಕಳೆಯುತ್ತಿದೆ. ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ ಸೇರಿಕೊಂಡಿತ್ತು. ವಿಭಜನೆಯಾದ ಬಳಿಕ ದಿ. ಎಚ್.ಎಸ್. ಮಹದೇವಪ್ರಸಾದ್ ಅವರು ಸಹಕಾರ ಸಚಿವರಾಗಿ ಜಿಲ್ಲಾ ಹಾಲು ಒಕ್ಕುಟವನ್ನು ಪ್ರತ್ಯೇಕಗೊಳಿಸಿದರು. ಜಿಲ್ಲಾ ಸಹಕಾರ ಬ್ಯಾಂಕ್ ಪ್ರತ್ಯೇಕಗೊಳಿಸುವ ಪ್ರಕ್ರಿಯೆ ಚಾಲನೆಯಲ್ಲಿತ್ತು. ಇದಕ್ಕಾಗಿ ಗ್ರಾ.ಪಂ.ಗೊಂದು ಸಹಕಾರ ಸಂಘಗಳ ಸ್ಥಾಪನೆಗೆ ಆದೇಶ ಮಾಡಿದ್ದರು. ಅಲ್ಲದೇ ಸಹಕಾರ ಸಂಘದ ವಿಭಜನೆ ತಕ್ಕಂತೆ ನಮ್ಮ ಜಿಲ್ಲೆಯ ಅರ್ಥಿಕ ವಹಿವಾಟು ಹೆಚ್ಚಳ ಮಾಡಲು ಮಾರ್ಗೋಪಾಯಗಳನ್ನು ಮಾಡಿದ್ದರು. ಅವರು ಸಚಿವರಾಗಿ ಐದು ವರ್ಷ ಪೂರ್ಣ ಮಾಡಿದ್ದರೆ, ಚಾಮರಾಜನಗರ ಜಿಲ್ಲೆಯ ಅಭಿವೃದ್ದಿ ಜೊತೆಗೆ ಪ್ರತ್ಯೇಕ ಸಹಕಾರ ಬ್ಯಾಂಕ್ ರಚನೆಯಾಗುತ್ತಿದೆ. ಅವರು ಅಕಾಲಿಕ ನಿಧನದಿಂದ ಜಿಲ್ಲೆಯ ಅಭಿವೃದ್ದಿ ಕುಂಠಿತವಾಯಿತು ಎಂದು ದಿ. ಎಚ್.ಎಸ್. ಮಹದೇವಪ್ರಸಾದ್ ಅವರ ಸೇವೆಯನ್ನು ಸ್ಮರಿಸಿಕೊಂಡರು.

ಜಿಲ್ಲೆಯಲ್ಲಿ ಪ್ರತ್ಯೇಕ ಸಹಕಾರ ಬ್ಯಾಂಕ್ ಅವಶ್ಯಕತೆ ಬಹಳ ಇದೆ. ಇದಕ್ಕಾಗಿ ಜಿಲ್ಲೆಯ ಜನಪ್ರತಿನಿಧಗಳು, ಎಲ್ಲಾ ಸಹಕಾರಿ ಬಂಧುಗಳು ಒತ್ತಾಯ ಮಾಡಬೇಕಾಗಿದೆ. ಸಹಕಾರ ಕ್ಷೇತ್ರದಲ್ಲಿ ರಾಜಕೀಯ ಸಲ್ಲದು, ಪರಸ್ಪರ ಸಹಕಾರದಿಂದ ಅಭಿವೃದ್ದಿಯತ್ತ ಸಾಗಬೇಕು. ಶ್ರೀ ಬಸವೇಶ್ವರ ಪತ್ತಿನ ಸಹಕಾರ ಯಶಸ್ವಿಯಾಗಿ 25 ವರ್ಷಗಳನ್ನು ಪೂರ್ಣ ಮಾಡಿದೆ. ರಜತ ಮಹೋತ್ಸವ ಆಚರಣೆ ಮಾಡಿಕೊಳ್ಳುತ್ತಿರುವುದು ಹೆಮ್ಮೆ ತಂದಿದೆ. 20 ಕೋಟಿ ರೂ.ಗಳಿಗೂ ಹೆಚ್ಚು ವಹಿವಾಟು ಮಾಡಿದೆ. ಇಂಥ ಸಂಘಗಳು ಬಲಿಷ್ಠವಾದಷ್ಟು ಸಮಾಜ ಹಾಗೂ ಜಿಲ್ಲೆಯ ಅಭಿವೃದ್ದಿಗೆ ಸಹಕಾರಿಯಾಗುತ್ತದೆ. ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷನಾಗಿ ಸಂಘದ ಅಭಿವೃದ್ದಿಗೆ ಬದ್ದನಾಗಿದ್ದು, ಮುಂದಿನ ದಿನಗಳಲ್ಲಿ ಸಂಘದ ನಿಸ್ವಾರ್ಥ ಸೇವೆಯನ್ನು ಪರಿಗಣಿಸಿ ಉನ್ನತ ಪ್ರಶಸ್ತಿಯನ್ನು ಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ನಂಜುಂಡಪ್ರಸಾದ್ ತಿಳಿಸಿದರು.

ಮೂರು ಸಂಘಗಳ ಜಂಟಿ ಕ್ರಿಯಾ ಸಮಿತಿಯ ಅಧ್ಯಕ್ಷ ಬಸಪ್ಪ ಮಾತನಾಡಿ, ಜಿಲ್ಲೆಯಲ್ಲಿರುವ ಸಮಾಜದ ಸರ್ಕಾರಿ ನೌಕರರನ್ನು ಸಂಘಟನೆ ಮಾಡುವ ಜೊತೆಗೆ ಅವರ ಆರ್ಥಿಕ ಪ್ರಗತಿಗೆ ಪೂರಕವಾಗಿ ಶ್ರೀ ಬಸವೇಶ್ವರ ಪತ್ತಿನ ಸಹಕಾರ ಸಂಘವನ್ನು ಸ್ಥಾಪನೆ ಮಾಡಿ, ಎಲ್ಲಾ ನೌಕರರನ್ನು ಭೇಟಿ ಮಾಡಿ, ಷೇರು ಸಂಗ್ರಹಿಸಿ, ಸಂಘ ರಚನೆ ಮಾಡಲಾಯಿತು. ಇಂದು ರಜತ ಮಹೋತ್ಸವವನ್ನು ಆಚರಣೆ ಮಾಡಲಾಗುತ್ತಿದೆ. ಇದಕ್ಕೆ ದುಡಿದವರು ಬಹಳಷ್ಟು ಮಂದಿ ಇದ್ದಾರೆ. ಸಂಘದ ಪದಾಧಿಕಾರಿಗಳು ಯಾವುದೇ ಭತ್ಯೆಯನ್ನು ಪಡೆದುಕೊಳ್ಳದೆ ನಿಸ್ವಾರ್ಥ ಸೇವೆಯನ್ನು ಇಂದಿಗೂ ಸಹ ಸಲ್ಲಿಸುತ್ತಾ ಬಂದಿದ್ದಾರೆ. ಹೀಗಾಗಿ ಇದರ ಶ್ರೇಯಸ್ಸು ಸಂಘದ ಎಲ್ಲಾ ಸದಸ್ಯರಿಗೂ ಸಲ್ಲುತ್ತದೆ ಎಂದರು.

ಶ್ರೀ ಬಸವೇಶ್ವರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಗೌರಿ ಶಂಕರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಶ್ರೀ ಬಸವೇಶ್ವರ ಪತ್ತಿನ ಸಹಕಾರ ಸಂಘವು ನೌಕರರಿಗೆ ಸಾಲ ಸೌಲಭ್ಯವನ್ನು ರಿಯಾಯತಿ ದರದಲ್ಲಿ ನೀಡುವ ಮೂಲಕ ಸಮಾಜ ಮುಖಿ ಸೇವೆ ಕಾರ್ಯಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಸಂಘ ಆರಂಭಗೊಂಡು 25ನೇ ವರ್ಷಕ್ಕೆ ಕಾಲಿಟ್ಟಿದು, ಈ ವರ್ಷದ ಪೂರ್ತಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಮೂಲಕ ರಜತ ಮಹೋತ್ಸವ ವರ್ಷ ಆಚರಣೆಯನ್ನು ಅರ್ಥ ಪೂರ್ಣವಾಗಿ ಮಾಡುವ ಉದ್ದೇಶ ನಮ್ಮದಾಗಿದೆ. ಸಹಕಾರಿ ಬಂಧುಗಳು ಇನ್ನು ಹೆಚ್ಚಿನ ರೀತಿಯಲ್ಲಿ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಸಿದ್ದಮಲ್ಲಪ್ಪ ಮಾತನಾಡಿ, ಮೂರು ಸಂಘಗಳು ಸಹ ಒಂದೇ ವೇದಿಕೆಯಲ್ಲಿ ಕಳೆದ 25 ವರ್ಷಗಳಿಂದ ವಾರ್ಷಿಕ ಸಭೆಯನ್ನು ಆಯೋಜನೆ ಮಾಡಿಕೊಂಡು ಬಂದಿರುವುದು ವಿಶೇಷ. ಇಂಥ ಸಂಘಗಳಲ್ಲಿ ನಾವೆಲ್ಲರು ಪದಾಧಿಕಾರಿಗಳಿದ್ದೇವೆ ಎಂಬುವುದು ಹೆಮ್ಮೆ. ಸಂಘವು ಬಲಿಷ್ಠವಾದಷ್ಟು ಸದಸ್ಯರು ಹಾಗೂ ಸಮಾಜದ ಬಂಧುಗಳಿಗೆ ಸಹಕಾರಿಯಾಗುತ್ತದೆ ಎಂದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಮರಿಯಾಲ ಮಠದ ಶ್ರೀ ಇಮ್ಮುಡಿ ಮುರುಘರಾಜೇಂದ್ರಸ್ವಾಮಿ ನಗರ ಮಠದ ಶ್ರೀ ಚನ್ನಬಸವಸ್ವಾಮೀಜಿ ವಹಿಸಿದ್ದರು. ಸಂಗಮ ಗೃಹ ನಿರ್ಮಾ ಸಹಕಾರ ಸಂಘದ ಅಧ್ಯಕ್ಷ ಬಿ.ಎಲ್. ಮುದ್ದಬಸವಣ್ಣ ಇದ್ದರು. ಶ್ರೀ ಬಸವೇಶ್ವರ ಪತ್ತಿನ ಸಹಕಾರ ಸಂಘ, ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ದಿ ಸಂಘ ಹಾಗೂ ಸಂಗಮ ಗೃಹ ನಿರ್ಮಾಣ ಸಹಕಾರ ಸಂಘಗಳ ನಿರ್ದೇಶಕರು, ಸದಸ್ಯರು ಉಪಸ್ಥಿತರಿದ್ದರು. ವೇದಿಕೆಯಲ್ಲಿ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ , ನಿವೃತ್ತ ನೌಕರರಿಗೆ ಸನ್ಮಾನ ಮಾಡಲಾಯಿತು.

Share this Article
Leave a comment