ಬೆಲ್ಲ ಉತ್ಪಾದನೆ ಕುರಿತು ಪಿಎಚ್.ಡಿ. ಪಡೆದ ಕೆಂಪನಪುರ ಮಹದೇವಸ್ವಾಮಿಗೆ ಸನ್ಮಾನ  

ಮಣಿಕಂಠ ಜನತಾ ರಾಯಭಾರಿ
3 Min Read

ಚಾಮರಾಜನಗರ: ಬೆಲ್ಲ ಉತ್ಪಾದನೆ ಹಾಗೂ ಆಲೆಮನೆ ವ್ಯವಸ್ಥೆಗೆ ಸಂಬಂಧಿಸಿದ ಸಂಶೋಧನೆಯ ಮೂಲಕ ಪಿಹೆಚ್.ಡಿ ಪಡೆದ ಚಾಮರಾಜನಗರದ ಪ್ರತಿಷ್ಟಿತಾ ಸಿದ್ದಾರ್ಥ ಕಾಲೇಜು ಪ್ರಾಂಶುಪಾಲ ಡಾ.ಮಹದೇವಸ್ವಾಮಿ ಕೆಂಪನಪುರ ಅವರನ್ನು ಜಿಲ್ಲೆಯ ವಿವಿಧ ಬಸವಪರ ಸಂಘಟನೆಗಳ ಪ್ರಮುಖರು ಆತ್ಮೀಯವಾಗಿ ಅಭಿನಂದಿಸಿ, ಶಾಲು ಹೊದಿಸಿ, ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕನ್ನಡ ಪಂಡಿತರು ಹಾಗೂ ಎಂ.ಸಿ.ಎಸ್. ಶಾಲೆಯ ಮುಖ್ಯೋಪಾಧ್ಯಾಯರಾದ ಮಹದೇವಸ್ವಾಮಿ ಅವರು, ಚಾಮರಾಜನಗರ ಜಿಲ್ಲೆಯ ಪ್ರಮುಖ ಕೃಷಿ ಆಧಾರಿತ ಉತ್ಪನ್ನವಾದ ಬೆಲ್ಲ ಉತ್ಪಾದನೆ ಕುರಿತು ಪಿಎಚ್.ಡಿ. ಪದವಿ ಪಡೆದಿರುವುದು ಇಡೀ ಜಿಲ್ಲೆಯ ಹೆಮ್ಮೆ ಹಾಗೂ ಸಂತಸದ ವಿಷಯವಾಗಿದೆ ಎಂದು ಹೇಳಿದರು.

ಡಾ. ಮಹದೇವಸ್ವಾಮಿ ಕೆಂಪನಪುರ ಅವರು ಕೃಷಿ ಪ್ರಧಾನ ಕುಟುಂಬದಲ್ಲಿ ಜನಿಸಿ ಬೆಳೆದವರಾಗಿದ್ದು, ಇಂದಿಗೂ ಕೃಷಿಯನ್ನೇ ತಮ್ಮ ಜೀವನದ ಅವಿಭಾಜ್ಯ ಅಂಗವನ್ನಾಗಿ ಮಾಡಿಕೊಂಡಿದ್ದಾರೆ. ತಮ್ಮ ಜೀವನಾನುಭವ, ರೈತರ ಬದುಕಿನೊಂದಿಗೆ ಇರುವ ನಿಕಟ ಬಾಂಧವ್ಯ ಹಾಗೂ ಆಲೆಮನೆಗಳಲ್ಲಿ ಬೆಲ್ಲ ತಯಾರಿಕೆಯ ಅನುಭವವನ್ನು ಸಂಶೋಧನೆಯ ವಿಷಯವನ್ನಾಗಿ ಆಯ್ಕೆ ಮಾಡಿಕೊಂಡಿರುವುದು ಶ್ಲಾಘನೀಯವಾಗಿದೆ ಎಂದು ತಿಳಿಸಿದರು.

ಬೆಲ್ಲ ಉತ್ಪಾದನೆಯಲ್ಲಿ ಎದುರಾಗುವ ಸವಾಲುಗಳು, ಉತ್ಪಾದನಾ ವಿಧಾನಗಳು, ಗುಣಮಟ್ಟ ಸುಧಾರಣೆ, ಮಾರುಕಟ್ಟೆ ಸಮಸ್ಯೆಗಳು ಹಾಗೂ ಅವುಗಳಿಗೆ ಅಗತ್ಯವಾದ ಪರಿಹಾರೋಪಾಯಗಳ ಕುರಿತು ನಡೆಸಿರುವ ಅಧ್ಯಯನವು ಮುಂದಿನ ಪೀಳಿಗೆಗೆ, ರೈತ ಸಮುದಾಯಕ್ಕೆ ಹಾಗೂ ಸರ್ಕಾರದ ನೀತಿ ರೂಪಿಸುವ ಪ್ರಕ್ರಿಯೆಗೆ ಉಪಯುಕ್ತ ಮಾರ್ಗದರ್ಶನವಾಗಲಿದೆ ಎಂದು ಅಭಿಪ್ರಾಯಪಟ್ಟರು.

ನಂತರ ಮಾತನಾಡಿದ ದುಗ್ಗಟ್ಟಿ ಜಮೀನ್ದಾರ್ ರಾಜೇಶ್ ಅವರು, “ನಾನು ಮತ್ತು ಮಹದೇವಸ್ವಾಮಿ ಅವರು ಮೈಸೂರಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ದಿನಗಳಿಂದಲೂ ಅವರ ಪರಿಚಯವಿದೆ. ಆಗಿನಿಂದಲೇ ಯಾವುದೇ ಕೆಲಸವನ್ನು ಅತ್ಯಂತ ಶ್ರದ್ಧೆ, ಪ್ರಾಮಾಣಿಕತೆ ಮತ್ತು ವೃತ್ತಿಪರತೆಯಿಂದ ನಿರ್ವಹಿಸುವ ವ್ಯಕ್ತಿತ್ವ ಅವರದು. ಅವರ ಪರಿಶ್ರಮ ಹಾಗೂ ಅಧ್ಯಯನದ ಬದ್ಧತೆಯೇ ಇಂದು ಪಿಎಚ್.ಡಿ. ಪದವಿಯಾಗಿ ಫಲ ನೀಡಿದೆ. ಈ ಸಾಧನೆ ಜಿಲ್ಲೆಯ ಯುವಜನತೆಗೆ ಮಾದರಿಯಾಗಿದೆ” ಎಂದು ಹೇಳಿದರು.

ಜಿಲ್ಲಾ ಅಭಿವೃದ್ಧಿ ಹೋರಾಟ ಸಮಿತಿಯ ಅಧ್ಯಕ್ಷ ಕೆ.ವೀರಭದ್ರಸ್ವಾಮಿ ಅವರು ಶುಭಾಶಯಗಳನ್ನು ತಿಳಿಸಿ, ಗ್ರಾಮೀಣ ಬದುಕು ಮತ್ತು ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಸಂಶೋಧನೆಗಳು ಸಮಾಜದ ಅಭಿವೃದ್ಧಿಗೆ ಪೂರಕವಾಗಿದ್ದು, ಡಾ. ಮಹದೇವಸ್ವಾಮಿ ಅವರ ಅಧ್ಯಯನ ರೈತ ಸಮುದಾಯಕ್ಕೆ ಬಹಳ ಉಪಯುಕ್ತವಾಗಲಿದೆ ಎಂದು ಹೇಳಿದರು.

ಮಹಾಮನೆ ಬಳಗದ ವತಿಯಿಂದ ಹೊನ್ನಮೇಟಿ ಸುಂದ್ರಪ್ಪ ಅವರು ಮಾತನಾಡಿ, ನೆಲದ ಬದುಕಿಗೆ ಸಂಬಂಧಿಸಿದ ವಿಷಯವನ್ನು ಸಂಶೋಧನೆಯಾಗಿ ರೂಪಿಸಿರುವುದು ಹೆಮ್ಮೆಯ ಸಂಗತಿ. ಇಂತಹ ಅಧ್ಯಯನಗಳು ಕೃಷಿ ಪರಂಪರೆಯನ್ನು ಉಳಿಸುವಲ್ಲಿ ಮಹತ್ವದ ಪಾತ್ರ ವಹಿಸಲಿವೆ ಎಂದು ಹೇಳಿದರು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಚಾಮರಾಜನಗರ ಜಿಲ್ಲಾ ಬಸವ ಕೇಂದ್ರದ ಅಧ್ಯಕ್ಷ ಹಾಗೂ ವೀರಶೈವ ಮಹಾಸಭೆಯ ಕೇಂದ್ರಸಮಿತಿ ಸದಸ್ಯ ಹೆಚ್. ಎಸ್. ಮಹದೇವಸ್ವಾಮಿ (ಎನ್ ರಿಚ್) ಅವರು, “ನಾವೆಲ್ಲರೂ ಇಂದು ತಮ್ಮನ್ನು ಭೇಟಿಯಾಗಿ ಅಭಿನಂದಿಸಿರುವುದು ಕೇವಲ ಸನ್ಮಾನಕ್ಕಾಗಿ ಅಲ್ಲ; ತಮ್ಮ ಸಾಧನೆ ನಮಗೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ. ಮುಂದಿನ ದಿನಗಳಲ್ಲಿ ಉನ್ನತ ಶಿಕ್ಷಣ ಹಾಗೂ ಸಂಶೋಧನೆ ಮಾಡಲು ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಬೇಕು. ತಮ್ಮಂತಹ ಪ್ರತಿಭಾವಂತರು ಸಮಾಜದ ಅಮೂಲ್ಯ ಆಸ್ತಿಯಾಗಿದ್ದು, ಯುವಜನತೆಗೆ ಪ್ರೇರಣೆಯಾಗಬೇಕು” ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಬಸವ ಬಳಗಗಳ ಒಕ್ಕೂಟದ ಕಾರ್ಯದರ್ಶಿ ದೊಡ್ಡರಾಯಪೇಟೆ ಗಿರೀಶ್, ಅಖಿಲ ಭಾರತ ವೀರಶೈವ ಮಹಾಸಭೆಯಜಿಲ್ಲಾ ಪ್ರತಿನಿಧಿಗಳಾದ ಮೂಡಲಪುರ ಮಂಜೇಶ್, ಕಾವುದವಾಡಿ ಗುರು, ಶರಣ ಸಾಹಿತ್ಯ ಪರಿಷತ್ತಿನ ಮಾಸ್ಟರ್ ಲಿಂಗರಾಜು,ಮಹಾಮನೆಯ ಪೊಲೀಸ್ ಜಯಶಂಕರ್ ಸೇರಿದಂತೆ ಜಿಲ್ಲೆಯ ವಿವಿಧ ಬಸವಪರ ಸಂಘಟನೆಗಳ ಮುಖಂಡರು, ಶಿಕ್ಷಣ ಪ್ರೇಮಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದು ಡಾ. ಕೆಂಪನಪುರ ಮಹದೇವಸ್ವಾಮಿ ಅವರಿಗೆ ಶುಭಾಶಯಗಳನ್ನು ಕೋರಿದರು.

ಡಾ. ಮಹದೇವಸ್ವಾಮಿ ಕೆಂಪನಪುರ ಅವರ ಈ ಸಾಧನೆ ಚಾಮರಾಜನಗರ ಜಿಲ್ಲೆಯ ಶಿಕ್ಷಣ ಕ್ಷೇತ್ರ, ಕೃಷಿ ಸಮುದಾಯ ಹಾಗೂ ಬೆಲ್ಲ ಉತ್ಪಾದನಾ ಕ್ಷೇತ್ರಕ್ಕೆ ಹೊಸ ಗೌರವ ತಂದುಕೊಟ್ಟಿದ್ದು, ಗ್ರಾಮೀಣ ಬದುಕಿನ ಅನುಭವವನ್ನು ವೈಜ್ಞಾನಿಕ ಸಂಶೋಧನೆಯೊಂದಿಗೆ ಬೆಸೆದ ಅಪರೂಪದ ಸಾಧನೆಯಾಗಿ ಎಲ್ಲರಿಂದಲೂ ಪ್ರಶಂಸೆಗೆ ಪಾತ್ರವಾಗಿದೆ.

ಚಾಮರಾಜನಗರದಲ್ಲಿ ಬೆಲ್ಲ ಉತ್ಪಾದನೆ ಕುರಿತು ಪಿಎಚ್.ಡಿ. ಪದವಿ ಪಡೆದ ಡಾ. ಮಹದೇವಸ್ವಾಮಿ ಕೆಂಪನಪುರ ಅವರನ್ನು ಜಿಲ್ಲೆಯ ವಿವಿಧ ಬಸವಪರ ಸಂಘಟನೆಗಳ ಪ್ರಮುಖರು ಶಾಲು ಹೊದಿಸಿ ಸನ್ಮಾನಿಸಿ ಅಭಿನಂದಿಸಿದರು.

Share this Article
Leave a comment