ಯಡವನಹಳ್ಳಿಯಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ, ಮಹಾಸಭಾ ಮುಖಂಡರ ಭೇಟಿ 

ಮಣಿಕಂಠ ಜನತಾ ರಾಯಭಾರಿ
1 Min Read

ಚಾಮರಾಜನಗರ: ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ ಘಟನೆ ಸಂಬಂಧ ಗುಂಡ್ಲುಪೇಟೆ ತಾಲೂಕಿನ ಯಡವನಹಳ್ಳಿ ಗ್ರಾಮಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ಮಹಾಸಭಾ ಪದಾಧಿಕಾರಿಗಳು ಭಾನುವಾರ ಭೇಟಿ ನೀಡಿದರು.

ಯಡವನಹಳ್ಳಿ ಗ್ರಾಮದ ಪರಿಶಿಷ್ಟ ಸಮುದಾಯದ ಬಡಾವಣೆಗೆ ಭೇಟಿ ನೀಡಿ, ಘಟನೆಯ ಸಂಬಂಧ ಮಹಾಸಭಾ ಪದಾಧಿಕಾರಿಗಳು ಮಾಹಿತಿ ಪಡೆದುಕೊಂಡರು. ಬಳಿಕ ಗ್ರಾಮಸ್ಥರಿಗೆ ಧೈರ್ಯ ತುಂಬಿದರು.

ಈ ಸಂದರ್ಭದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಮಹಾಸಭಾ ಅಧ್ಯಕ್ಷ ಉಮೇಶ್ ಕುದರ್ ಮಾತನಾಡಿ, ಜಿಲ್ಲೆಯಲ್ಲಿ ಪದೇಪದೇ ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ ಮಾಡುತ್ತಿರುವುದು ಅತ್ಯಂತ ಖಂಡನೀಯ. ವೈಯಕ್ತಿಕ ವಿಚಾರಗಳಿಗೆ ಅಂಬೇಡ್ಕರ್ ಅವರನ್ನು ಎಳೆದುತಂದು ಅವರಿಗೆ ಅಪಮಾನ ಮಾಡುವುದು ಸರಿಯಾದ ನಡೆಯಲ್ಲ ಎಂದು ಖಂಡಿಸಿದರು.

ಯಡವನಹಳ್ಳಿ ಗ್ರಾಮದಲ್ಲಿ ಪರಿಶಿಷ್ಟ ಜಾತಿಯ ಕುಟುಂಬದವರು ಕಡಿಮೆ ಸಂಖ್ಯೆಯಲ್ಲಿ ಇದ್ದು, ಪೊಲೀಸರು ಸೂಕ್ತ ರಕ್ಷಣೆಯನ್ನು ನೀಡಬೇಕು. ಈ ಪ್ರಕರಣದಲ್ಲಿ ಪೊಲೀಸರು ಸೂಕ್ತ ತನಿಖೆ ನಡೆಸಿ, ಆರೋಪಿಗೆ ಕಠಿಣ ಶಿಕ್ಷೆಯನ್ನು ನೀಡಬೇಕು ಎಂದು ಒತ್ತಾಯಿಸಿದರು.

ಅಂಬೇಡ್ಕರ್ ಮಹಾಸಭಾ ಕಾರ್ಯಾಧ್ಯಕ್ಷ ಸಿ.ಕೆ.ಮಂಜುನಾಥ್ ಮಾತನಾಡಿ, ಯಡವನಹಳ್ಳಿ ಗ್ರಾಮದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ ಮಾಡಿರುವುದು ಅತ್ಯಂತ ಖಂಡನೀಯ. ಇಂತಹ ಪ್ರಕರಣಗಳು ಮರುಕಳಿಸುತ್ತಿರುವುದರಿಂದ ರಾಜ್ಯ ಸರ್ಕಾರ ಸೂಕ್ತವಾದ ಕಾಯ್ದೆಯನ್ನು ರೂಪಿಸಬೇಕು ಎಂದು ಒತ್ತಾಯಿಸಿದರು.

ಈ ವೇಳೆ ಮಹಾಸಭಾ ಪದಾಧಿಕಾರಿಗಳಾದ ನಲ್ಲೂರು ಪರಮೇಶ್, ಜ್ಯೋತಿಗೌಡನಪುರ ಶೇಷಪ್ಪ ಪಾಸ್ವಾನ್, ಛಲವಾದಿ ರಮೇಶ್, ಎಸ್.ಪಿ.ಮಹೇಶ್ ಸಿದ್ದಯ್ಯನಪುರ, ಪ್ರಶಾಂತ್ ನಾಗವಳ್ಳಿ, ವಾಸು ಹೊಂಡರಬಾಳು, ರಂಗಸ್ವಾಮಿ, ಬೆಳಚವಾಡಿ ರವಿ, ಮಹೇಶ್ ಹಾಗೂ ಇತರರು ಹಾಜರಿದ್ದರು.

Share this Article
Leave a comment