ಚಾಮರಾಜನಗರ: ಕಾವೇರಿ ವನ್ಯಧಾಮದಲ್ಲಿ ಮೂವರು ಬೇಟೆಗಾರರು ಶೂಟೌಟ್ನಲ್ಲಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಮಹತ್ವದ ಮಾಹಿತಿ ಬೆಳಕಿಗೆ ಬಂದಿದೆ ಎನ್ನಲಾಗಿದೆ.
ಮರಣೋತ್ತರ ಪರೀಕ್ಷೆ ವೇಳೆ ಮೃತರಾದ ಅಂತೋಣಿ ಸಾಮಿ ಹಾಗೂ ಪೀಟರ್ ಅವರ ಒಳ ಉಡುಪುಗಳಲ್ಲಿ ತಲಾ 5 ಪ್ರೈಮರ್ ಪತ್ತೆಯಾಗಿವೆ ಎನ್ನಲಾಗಿದೆ. ಈ ಮೂಲಕ ಕಾಡಿಗೆ ತೆರಳುವಾಗ ಅವರು ಬಂದೂಕು ಬಳಸಲು ಅಗತ್ಯವಿರುವ ಸಾಮಗ್ರಿಗಳನ್ನು ಕೊಂಡೊಯ್ದಿದ್ದರು ಎಂಬ ಅನುಮಾನಕ್ಕೆ ಸಾಕ್ಷ್ಯ ಸಿಕ್ಕಿದೆ ಎಂದು ಹೇಳಲಾಗುತ್ತಿದೆ.
ನಾಡ ಬಂದೂಕುಗಳಲ್ಲಿ ಗನ್ಪೌಡರ್ಗೆ ಕಿಡಿ ಹೊತ್ತಿಸಲು ಬಳಸುವ ಅಲ್ಯೂಮಿನಿಯಂ ಕ್ಯಾಪ್ ಮಾದರಿಯ ವಸ್ತುವೇ ಪ್ರೈಮರ್. ಟ್ರಿಗರ್ ಒತ್ತಿದಾಗ ಪ್ರೈಮರ್ ಮೂಲಕ ಕಿಡಿ ಹೊತ್ತಿಕೊಂಡು ಬಂದೂಕಿನಲ್ಲಿರುವ ಸ್ಫೋಟಕಕ್ಕೆ ಬೆಂಕಿ ತಗುಲುತ್ತದೆ.
ಇದರ ಜೊತೆಗೆ ಒಳ ಉಡುಪಿನಲ್ಲಿ ಬ್ಯಾಟರಿಯೂ ಪತ್ತೆಯಾಗಿದೆ ಎನ್ನಲಾಗಿದ್ದು, ಘಟನೆಯ ಕುರಿತು ತನಿಖಾ ತಂಡ ಮತ್ತಷ್ಟು ಸಾಕ್ಷ್ಯಗಳನ್ನು ಕಲೆ ಹಾಕುತ್ತಿದೆ. ಇಲ್ಲಿಯವರೆಗೆ ಮೃತರು ಬೇಟೆಗಾರರಲ್ಲ, ರೈತರು ಎಂಬ ವಾದವೂ ಕೇಳಿಬಂದಿತ್ತು. ಆದರೆ ಇದೀಗ ಪತ್ತೆಯಾಗಿರುವ ಪ್ರೈಮರ್ ಸೇರಿದಂತೆ ವಸ್ತುಗಳು ಪ್ರಕರಣಕ್ಕೆ ಹೊಸ ತಿರುವು ನೀಡುವ ಸಾಧ್ಯತೆ ಇದೆ.
ಮತ್ತೊಂದೆಡೆ, ಅರಣ್ಯ ಇಲಾಖೆ ಸಿಬ್ಬಂದಿ ಸುಮಾರು 10ರಿಂದ 15 ಅಡಿ ಅಂತರದಿಂದಲೇ ಗುಂಡು ಹಾರಿಸಿದ್ದಾರೆ ಎಂಬ ಮಾಹಿತಿಯೂ ಕೇಳಿಬಂದಿದೆ. ಸೈಡ್ಆಕ್ಷನ್ ಗನ್ನಿಂದ ಹಾರಿಸಿದ ಪೆಲೆಟ್ಗಳು ದೇಹದೊಳಗೆ ನುಗ್ಗಿ ಛಿದ್ರಗೊಳಿಸಿರುವುದು ಮರಣೋತ್ತರ ಪರೀಕ್ಷೆಯಲ್ಲಿ ಬಹಿರಂಗವಾಗಿದೆ ಎನ್ನಲಾಗಿದೆ. ಪ್ರೈಮರ್ ಪತ್ತೆ ಸೇರಿದಂತೆ ಮರಣೋತ್ತರ ಪರೀಕ್ಷೆಯ ಅಂಶಗಳ ಅಧಿಕೃತ ವಿವರಗಳು ಹಾಗೂ ಅವುಗಳ ತನಿಖಾ ಮಹತ್ವವನ್ನು ಅಧಿಕಾರಿಗಳು ಅಂತಿಮವಾಗಿ ಸ್ಪಷ್ಟಪಡಿಸಬೇಕಿದೆ.