ಸಿದ್ದುಗೆ ವಿಶ್ವೇಶ್ವರ ‘ಭಟ್’, ಡಿಕೆಶಿಗೆ ರಾಘವೇಂದ್ರ ‘ಭಟ್’: ಹ.ರಾ.ಮಹೇಶ್ ವ್ಯಂಗ್ಯ‌

ಮಣಿಕಂಠ ಜನತಾ ರಾಯಭಾರಿ
1 Min Read

ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮಾಧ್ಯಮ ಕಾರ್ಯದರ್ಶಿಯಾಗಿ ಹಿರಿಯ ಪತ್ರಕರ್ತ ರಾಘವೇಂದ್ರ ಭಟ್ ಅವರನ್ನು ನೇಮಕ ಮಾಡಿಕೊಂಡಿರುವ ವಿಚಾರಕ್ಕೆ ಬಹುಜನ ಸಮಾಜ ಪಕ್ಷದ ಉಸ್ತುವಾರಿ ಹ.ರಾ.ಮಹೇಶ್ ಅವರು ವ್ಯಂಗ್ಯವಾಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿರುವ ಹ.ರಾ.ಮಹೇಶ್ ಅವರು ಕಾಂಗ್ರೆಸ್ಸಿನ ಸಿದ್ಧರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ವಿಶ್ವೇಶ್ವರ ಭಟ್ ಎಂಬ ಆರ್.ಎಸ್.ಎಸ್ ಬಿಜೆಪಿ ಬ್ರಾಹ್ಮಣ ಪತ್ರಕರ್ತನ ಸ್ನೇಹ ಸಲಹೆ ಸೂಚನೆ ಮಾರ್ಗದರ್ಶನಗಳನ್ನು ಪಡೆಯುತ್ತಿದ್ದರು. ಈಗ ಅದೇ ಕಾಂಗ್ರೆಸ್ಸಿನ ಡಿ.ಕೆ.ಶಿವಕುಮಾರ್ ಎಂಬ ಮುಖ್ಯಮಂತ್ರಿಗಳು ಮತ್ತದೇ ಆರ್.ಎಸ್.ಎಸ್ ಬಿಜೆಪಿಪರ ಬ್ರಾಹ್ಮಣ ಪತ್ರಕರ್ತನಾದ ರಾಘವೇಂದ್ರ ಭಟ್ ಅನ್ನು ತಮ್ಮ ಮಾಧ್ಯಮ ಕಾರ್ಯದರ್ಶಿ ಮಾಡಿಕೊಂಡಿದ್ದಾರೆ. ಇದರಲ್ಲಿ ಆಶ್ಚರ್ಯ ಪಡುವಂಥದ್ದೇನಿದೆ ಎಂದು ಕಿಚಾಯಿಸಿದ್ದಾರೆ.

‘ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಬೇರೆ ಬೇರೆ ಮತ್ತು ಕಾಂಗ್ರೆಸ್ ಅಂದ್ರೆ ಜಾತ್ಯಾತೀತ ಬ್ರಾಹ್ಮಣ್ಯ ವಿರೋಧಿ ಬಹಳ ಸಾಚಾ’ ಎಂಬ ಭ್ರಮೆಯಲ್ಲಿ ತಾವೂ ಇದ್ದು, ಅದನ್ನೇ ಮುಗ್ಧ ಜನರಿಗೂ ನಂಬಿಸಲೊರಟಿರುವ ಕಾಂಗ್ರೆಸ್ ಪರ ಕೆಲ ಬರಹಗಾರರು, ಪತ್ರಕರ್ತರು ಹಾಗೂ ಪ್ರಗತಿಪರರ ಗೋಳನ್ನು ನೆನ್ನೆಯಿಂದ ನೋಡಲಾಗುತ್ತಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಆರೆಸೆಸ್ ಬಿಜೆಪಿ ಬ್ರಾಹ್ಮಣರು ತಮಗಿಂತ (ಶೂದ್ರರಿಗಿಂತ) ಬಹಳ ಶ್ರೇಷ್ಟರು ಬುದ್ಧಿವಂತರು ಎಂದು‌ ಒಪ್ಪಿಕೊಂಡು ಸದಾ ಅವರ ಸ್ನೇಹ ಸಲಹೆ ಮಾರ್ಗದರ್ಶನ ಪಡೆಯುವುದರಲ್ಲಿ‌ ಕಾಂಗ್ರೆಸ್ಸಿಗ ಸಿದ್ಧರಾಮಯ್ಯನವರು ಮತ್ತು‌ ಡಿಕೆಶಿಯವರಲ್ಲಿ ಒಂದೇ ಒಂದು ಸಣ್ಣ ವ್ಯತ್ಯಾಸವೇನೆಂದರೆ ಸಿದ್ಧರಾಮಯ್ಯನವರು ಅನಧಿಕೃತವಾಗಿ ಗುಟ್ಟಾಗಿ ಮಾಡುತ್ತಿದ್ದನ್ನು, ಡಿಕೆಶಿಯವರು ಮುಕ್ತವಾಗಿ ಅಧಿಕೃತವಾಗಿ ಖುಲ್ಲಂಖುಲ್ಲ ಮಾಡುತ್ತಾರೆ ಅಷ್ಟೇ ಎಂದಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಯಾವಾಗ ಪಕ್ಷದಿಂದ ಉಚ್ಛಾಟಿಸುವರೋ ಎಂದು ಪ್ರಶ್ನೆ ಎತ್ತಿರುವುದು ಸಾಕಷ್ಟು ಚರ್ಚೆಯನ್ನು ಹುಟ್ಟು ಹಾಕಿದೆ.

Share this Article
Leave a comment