2026-27 ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭ, ಈ ಬಾರಿ 119 ದಿನ ರಜೆ 

ಮಣಿಕಂಠ ಜನತಾ ರಾಯಭಾರಿ
2 Min Read

ಬೆಂಗಳೂರು: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವರ್ಷವು ಮೇ 29ರಂದು ಆರಂಭವಾಗಲಿದ್ದು, ಕರ್ನಾಟಕ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ 2026-27ನೇ ಸಾಲಿನ ಅಧಿಕೃತ ಶೈಕ್ಷಣಿಕ ಕ್ಯಾಲೆಂಡರ್ ಪ್ರಕಟಿಸಿದೆ.

ಅದರಂತೆ ಈ ವರ್ಷ ಒಟ್ಟು 245 ದಿನ ಶಾಲೆ ಹಾಗೂ 119 ದಿನ ರಜೆ ಇರಲಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ. ಮೇ 30 ರಿಂದ ‘ದಾಖಲಾತಿ ಹಬ್ಬ’ ನಡೆಯಲಿದ್ದು, ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಸಮವಸ್ತ್ರ ಮತ್ತು ಪಠ್ಯಪುಸ್ತಕ ವಿತರಿಸಲಾಗುವುದು. ಅನಿವಾರ್ಯ ರಜೆಗಳಿಗೆ ಮರು-ತರಗತಿ ನಡೆಸುವುದು ಹಾಗೂ ಅಂಬೇಡ್ಕರ್ ಜಯಂತಿ ಆಚರಣೆಯನ್ನು ಕಡ್ಡಾಯಗೊಳಿಸಲಾಗಿದೆ. ರಾಜ್ಯ ಪಠ್ಯಕ್ರಮದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಇದು ಅನ್ವಯವಾಗಲಿದೆ.

ಪ್ರಮುಖ ದಿನಾಂಕಗಳು: 

* ಮೇ 28, 2026 (ಗುರುವಾರ) ಬೇಸಿಗೆ ರಜೆ ಅಂತ್ಯ  

*ಮೇ 29, 2026 (ಶುಕ್ರವಾರ) ಶಾಲೆ ಪುನರಾರಂಭ 

*ಮೇ 29, 2026 ರಿಂದ ಅಕ್ಟೋಬರ್ 2, 2026 ರವರೆಗೆ ಮೊದಲ ಅವಧಿ

*ಅಕ್ಟೋಬರ್ 3 ರಿಂದ ಅಕ್ಟೋಬರ್ 21, 2026 (19 ದಿನ) ದಸರಾ ರಜೆ

*ಅಕ್ಟೋಬರ್ 22, 2026 ರಿಂದ ಏಪ್ರಿಲ್ 10, 2027 ರವರೆಗೆ ಎರಡನೇ ಅವಧಿ 

*ಏಪ್ರಿಲ್ 11, 2027‌ ಬೇಸಿಗೆ ರಜೆ ಆರಂಭ

ಈ ಸಾಲಿನಲ್ಲಿ 245 ಒಟ್ಟು ಕೆಲಸದ ದಿನಗಳಿದ್ದು, 181 ದಿನ ಬೋಧನಾ ಕಲಿಕೆಗೆ ಅವಕಾಶ ಇರಲಿದೆ. 26 ದಿನಗಳನ್ನು ಪರೀಕ್ಷೆ ಮತ್ತು ಮೌಲ್ಯಾಂಕನಕ್ಕೆ ಮೀಸಲಿಡಲಾಗಿದೆ. 24 ದಿನ ಪಠ್ಯೇತರ ಚಟುವಟಿಕೆ, 10 ದಿನ ಮೌಲ್ಯಮಾಪನ/ಫಲಿತಾಂಶ ವಿಶ್ಲೇಷಣೆ, 4 ದಿನ ಸ್ಥಳೀಯ ರಜೆ ಹಾಗೂ 119 ದಿನ ಒಟ್ಟು ರಜಾ ದಿನಗಳಾಗಿರಲಿವೆ.

ಜೂನ್ 30, 2026 ರೊಳಗೆ ಎಲ್ಲಾ ಮಕ್ಕಳ ದಾಖಲಾತಿ ಪೂರ್ಣಗೊಳಿಸಬೇಕು. ಜೂನ್ ಮೊದಲ ವಾರದಲ್ಲೇ ಸಮವಸ್ತ್ರ ವಿತರಣೆ ಮಾಡಬೇಕು.6 ರಿಂದ 18 ವರ್ಷದ ಮಕ್ಕಳನ್ನು ಮರಳಿ ಶಾಲೆಗೆ ಕರೆತರಲು ‘ಶಾಲೆಗೆ ಮರಳಿ’ ವಿಶೇಷ ಅಭಿಯಾನ ಹಮ್ಮಿಕೊಳ್ಳಬೇಕು. ರಾಜ್ಯದ ಎಲ್ಲಾ ಶಾಲೆಗಳಲ್ಲಿ ಒಂದೇ ರೀತಿಯ ಶೈಕ್ಷಣಿಕ ಚಟುವಟಿಕೆ ಜಾರಿಗೊಳಿಸುವ ನಿಟ್ಟಿನಲ್ಲಿ ಏಕ ವೇಳಾಪಟ್ಟಿಯನ್ನು ಜಾರಿಗೊಳಿಸಿ ಶಿಕ್ಷಣ ಇಲಾಖೆ ಸೂಚನೆಯನ್ನು ನೀಡಿದೆ.

ಒಟ್ಟಾರೆ 2026-27ನೇ ಶೈಕ್ಷಣಿಕ ವರ್ಷ ಮೇ 29, 2026 ರಂದು ಆರಂಭವಾಗಿ ಏಪ್ರಿಲ್ 10, 2027 ರಂದು ಮುಕ್ತಾಯಗೊಳ್ಳಲಿದೆ. ಈ ಸಾಲಿನಲ್ಲಿ ದಸರಾ ರಜೆ 19 ದಿನ ಇರುವುದು ಈ ಬಾರಿಯ ವಿಶೇಷವಾಗಿದೆ.

“ಜನತಾ ರಾಯಭಾರಿ” ಓದುಗರೇ ನಿಮ್ಮ ಮಕ್ಕಳನ್ನು ಇಂದಿನಿಂದಲೇ ಶಾಲೆಗೆ ಕಳುಹಿಸಿ, ಇದೇ ರೀತಿಯ ಶೈಕ್ಷಣಿಕ ವಿಭಾಗದ ಸುದ್ದಿಗಳಿಗೆ “ಜನತಾ ರಾಯಭಾರಿ” ವೆಬ್ ಸೈಟ್, ಫೇಸ್ಬುಕ್ ಪೇಜ್, ಯೂಟ್ಯೂಬ್ ಪೇಜ್ ಫಾಲೋ ಮಾಡಿ ಬೆಂಬಲಿಸಿ…..

 

Share this Article
Leave a comment