ಚಾಮರಾಜನಗರ: ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಕ್ಷೇತ್ರದ ಅಭಿವೃದ್ಧಿಗೆ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಿದ್ದು, ಈ ಕುರಿತು ಶ್ವೇತಪತ್ರ ಹೊರಡಿಸುವ ಅಗತ್ಯವಿಲ್ಲ ಎಂದು ಕಾಂಗ್ರೆಸ್ ಉಪಾಧ್ಯಕ್ಷ ಬಿ.ಕೆ.ರವಿಕುಮಾರ್ ಅವರು ತಿರುಗೇಟು ನೀಡಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಶನಿವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಚಾ.ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಶಾಸಕ ಸಿ.ಪುಟ್ಪರಂಗಶೆಟ್ಟಿ ಅವರು ಹೆಚ್ಚಿನ ಅಭಿವೃದ್ಧಿ ಕೆಲಸವನ್ನು ಮಾಡಿದ್ದು, ಅವರು ಟೀಕೆ ಮಾಡುವಂತ ನೈತಿಕತೆ ಬಿಜೆಪಿಯವರಿಗೆ ಇಲ್ಲ. ಶಾಸಕ ಪುಟ್ಟರಂಗಶೆಟ್ಟಿ ಅವರು ಜನರಿಗೆ ಉತ್ತರದಾಯಿಯಾಗಿದ್ದು, ಬಿಜೆಪಿಯ ಎಂ.ರಾಮಚಂದ್ರು ಅವರಿಗೆ ಅಲ್ಲ. ಅವರು ತಂದಿರುವ ಅನುದಾನದ ಕುರಿತು ಶ್ವೇತಪತ್ರ ಹೊರಡಿಸುವ ಯಾವುದೇ ಅಗತ್ಯವಿಲ್ಲ ಎಂದು ಬಿಜೆಪಿ ಮುಖಂಡರಿಗೆ ತಿರುಗೇಟು ನೀಡಿದರು.
ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಶಿಕ್ಷಣ, ಆರೋಗ್ಯ, ಮೂಲ ಸೌಕರ್ಯಗಳಿಗೆ ಹೆಚ್ಚಿನ ಅನುದಾನವನ್ನು ನೀಡಿದ್ದಾರೆ. ರಸ್ತೆ, ಬೀದಿ ದೀಪ, ಚರಂಡಿ ವ್ಯವಸ್ಥೆ, ನೀರಾವರಿ, ಕೃಷಿ, ಶಾಲೆ ಮತ್ತು ಹಾಸ್ಟೆಲ್ ಗಳ ನಿರ್ಮಾಣ, ಸಮುದಾಯ ಭವನಗಳು ಹಾಗೂ ದೇವಾಲಯಗಳ ಅಭಿವೃದ್ಧಿಗೆ ನೂರಾರು ಕೋಟಿ ಅನುದಾನವನ್ನು ತಂದಿದ್ದಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಿಲ್ಲೆಗೆ ಎಷ್ಟು ಅನುದಾನವನ್ನು ಕೊಟ್ಟಿದ್ದಾರೆ ಎಂಬುದನ್ನು ಬಿಜೆಪಿ ಮುಖಂಡರು ಮನನ ಮಾಡಿಕೊಳ್ಳಬೇಕಿದೆ ಎಂದರು.
ಬಿಜೆಪಿ ಮುಖಂಡರು ಓರ್ವ ಶಾಸಕರ ವಿರುದ್ಧ ಟೀಕೆ ಮಾಡುವಾಗ ಅಗತ್ಯವಾದ ಮಾಹಿತಿಯನ್ನು ಇಟ್ಟುಕೊಂಡು ಆರೋಪ ಮಾಡಬೇಕಿದೆ. ನಾವು ಬಿಜೆಪಿ ಮುಖಂಡರಿಗೆ ಉತ್ತರ ನೀಡುವ ಅಗತ್ಯವಿಲ್ಲ. ಮತದಾರ ಪ್ರಭುಗಳ ಮುಂದೆ ಹೋಗುತ್ತೇವೆ. ಶಾಸಕರ ಅಭಿವೃದ್ಧಿ ಕುರಿತು ಜನರು ತೀರ್ಮಾನಿಸುತ್ತಾರೆ ಎಂದು ಹೇಳಿದರು.
ಗೋಷ್ಠಿಯಲ್ಲಿ ಚುಡಾ ಅಧ್ಯಕ್ಷ ಮೊಹಮ್ಮದ್ ಅಸ್ಗರ್ (ಮುನ್ನಾ), ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಸೋಮೇಶ್ವರ್, ಕನಿಷ್ಠ ವೇತನ ಸಲಹಾ ಸಮಿತಿ ಮಾಜಿ ಅಧ್ಯಕ್ಷ ಆರ್.ಉಮೇಶ್, ತಮ್ಮಡಹಳ್ಳಿ ಸುಬ್ಬನಾಯಕ, ಎಂ.ಶಿವಮೂರ್ತಿ, ಮಹೇಶ್ ಕುದರ್, ಗೋವಿಂದಶೆಟ್ಟಿ ಹಾಜರಿದ್ದರು.