ದಲಿತ ಅಧಿಕಾರಿಗಳ ಮೇಲಿನ ಹುನ್ನಾರವನ್ನು ಸಹಿಸುವುದಿಲ್ಲ- ಯರಿಯೂರು ರಾಜಣ್ಣ

ಮಣಿಕಂಠ ಜನತಾ ರಾಯಭಾರಿ
1 Min Read

ಚಾಮರಾಜನಗರ: ಜಿಲ್ಲೆಯಲ್ಲಿ ದಲಿತ ಅಧಿಕಾರಿಗಳ ಮೇಲೆ ಕೆಲವರು ಹುನ್ನಾರ ಮಾಡುತ್ತಿದ್ದು, ಅದನ್ನು ಎಂದಿಗೂ ಸಹಿಸುವುದಿಲ್ಲ ಎಂದು ದಸಂಸ ಸಂಚಾಲಕ ಯರಿಯೂರು ರಾಜಣ್ಣ ಖಂಡಿಸಿದರು.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಶನಿವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ದಲಿತ ಅಧಿಕಾರಿಗಳ ವಿರುದ್ಧ ತೆಜೋವಧೆ ಮಾಡುವುದು ಹೆಚ್ಚಾಗಿ ಕಂಡುಬರುತ್ತಿದೆ. ಅದರಲ್ಲೂ ದಲಿತರೊಬ್ಬರು ಜಿಲ್ಲಾ ಮಟ್ಟದ ಆರ್.ಸಿ.ಎಚ್.ಓ ಅಧಿಕಾರಿಯಾಗಿರುವುದನ್ನು ಸಹಿಸದ ರೈತ ಮುಖಂಡ ಹೊನ್ನೂರು ಬಸವಣ್ಣ ಅವರು, ಡಾ.ರೇಣುಕಾದೇವಿ ಅವರ ವಿರುದ್ಧ ದುರುದ್ದೇಶದಿಂದ ಆರೋಪ ಮಾಡಿದ್ದಾರೆ. ಅವರು ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದೆ ಎಂದರು.

ಡಾ.ರೇಣುಕಾದೇವಿ ಅವರು ಸಂತೇಮರಹಳ್ಳಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಉತ್ತಮ ರೀತಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ಅವರ ಜನಪ್ರಿಯತೆಯನ್ನು ಸಹಿಸದ ಕೋಮುವಾದಿಗಳು ಕುತಂತ್ರದಿಂದ, ಆಶಾ ಕಾರ್ಯಕರ್ತೆಯೊಬ್ಬರ ಮೂಲಕ ಅವರನ್ನು ಅಮಾನತ್ತು ಮಾಡಿಸಿದ್ದರು. ನ್ಯಾಯಾಲಯ ಮತ್ತು ಇಲಾಖೆಯ ತನಿಖೆಯಲ್ಲಿ ಅವರು ನಿರ್ದೋಷಿ ಎಂಬುದು ಸಾಬೀತಾಗಿದೆ. ಈಗ ರಾಜ್ಯ ಸರ್ಕಾರ ಡಾ.ರೇಣುಕಾದೇವಿ ಅವರನ್ನು ವರ್ಗಾವಣೆ ಮಾಡಿದೇ ಹೊರತು, ಬಡ್ತಿಯನ್ನು ನೀಡಿಲ್ಲ ಎಂದು ಹೊನ್ನೂರು ಬಸವಣ್ಣ ಅವರ ಆರೋಪಕ್ಕೆ ಸ್ಪಷ್ಟನೆಯನ್ನು ನೀಡಿದರು.

ಡಾ.ರೇಣುಕಾದೇವಿ ಅವರು ಆರ್.ಸಿ.ಎಚ್.ಓ ಅಧಿಕಾರಿಯಾಗಿರುವುದನ್ನು ಸಹಿಸದೇ ಕೆಲವರು ಕುತಂತ್ರ ರೂಪಿಸುತ್ತಿದ್ದಾರೆ. ಇದರ ಭಾಗವಾಗಿಯೇ ಹೊನ್ನೂರು ಬಸವಣ್ಣ ಅವರು ಆರೋಪ ಮಾಡಿದ್ದಾರೆ. ಬಸವಣ್ಣ ಅವರು ಅಗತ್ಯ ಮಾಹಿತಿಯನ್ನು ಇಟ್ಟುಕೊಳ್ಳದೇ ಓರ್ವ ದಲಿತ ಮಹಿಳಾ ಅಧಿಕಾರಿಯನ್ನು ತೆಜೋವಧೆ ಮಾಡುವ ಕೆಲಸ ಮಾಡಿದ್ದಾರೆ. ಇದು ಮುಂದುವರಿದರೇ ಹೊನ್ನೂರು ಬಸವಣ್ಣ ಅವರ ವಿರುದ್ಧ ನಾವು ಹೋರಾಟ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಮುಖಂಡ ವಾಸು ಹೊಂಡರಬಾಳು ಮಾತನಾಡಿ, ಡಾ.ರೇಣುಕಾದೇವಿ ಅವರು ಸಂತೇಮರಹಳ್ಳಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಆಡಳಿತಾಧಿಕಾರಿಯಾಗಿದ್ದ ಸಂದರ್ಭದಲ್ಲಿ ಹಲವಾರು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಈ ಕಾರಣಕ್ಕೆ ಅವರ ಅವಧಿಯಲ್ಲಿ 100 ಹಾಸಿಗೆಯ ಆಸ್ಪತ್ರೆಯಾಯಿತು. ಅಂತಹ ಜನಪರ ಕಾಳಜಿಯ ವೈದ್ಯರೊಬ್ಬರು ಜಿಲ್ಲಾ ಮಟ್ಟದ ಅಧಿಕಾರಿಯಾಗುವುದನ್ನು ಸಹಿಸದ ಕೆಲವರು ಕುತಂತ್ರ ರೂಪಿಸುತ್ತಿದ್ದಾರೆ. ಇದು ಅತ್ಯಂತ ಖಂಡನೀಯ ಎಂದರು.

ಗೋಷ್ಠಿಯಲ್ಲಿ ದಲಿತ ಮುಖಂಡರಾದ ಮಲ್ಲು, ರಂಗಸ್ವಾಮಿ, ಅನಿಲ್ ಕುಮಾರ್, ಶ್ರೀನಿವಾಸ್, ಪರಶಿವಮೂರ್ತಿ, ಆಶ್ರಿತ್ ಹಾಜರಿದ್ದರು.

Share this Article
Leave a comment