ಚಾಮರಾಜನಗರ: ನಗರಸಭೆ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ಆರೋಪಿಸಿ ನಗರಸಭೆ ಮುಂಭಾಗವೇ ಕಸವನ್ನು ಸುರಿದು ಎಸ್.ಡಿ.ಪಿ.ಐ ವತಿಯಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು.
ನಗರದ ಹಳೆ ಸಾರಿಗೆ ಕಚೇರಿ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು ಅಲ್ಲಿಂದ ಮೆರವಣಿಗೆ ಹೊರಟು, ಗುಂಡ್ಲುಪೇಟೆ ವೃತ್ತ, ಸುಲ್ತಾನ್ ಷರೀಫ್ ವೃತ್ತ ಮತ್ತು ಶ್ರೀ ಭುವನೇಶ್ವರಿ ವೃತ್ತದ ಮೂಲಕ ನಗರಸಭೆ ಕಚೇರಿ ಮುಂಭಾಗ ತೆರಳಿ ಕಸವನ್ನು ಸುರಿದು ಕೆಲಕಾಲ ಪ್ರತಿಭಟನೆ ನಡೆಸಿದರು. ನಗರಸಭೆ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಗಾಳೀಪುರ ಬಡಾವಣೆ ಸೇರಿದಂತೆ ಕೆಲವು ಕಡೆ ಕುಡಿಯುವ ನೀರಿನ ಸಮಸ್ಯೆ ತಾಂಡವವಾಡುತ್ತಿದೆ. ಅಮೃತ್-2 ಯೋಜನೆಯಡಿಯಲ್ಲಿ ನಡೆಯುತ್ತಿರುವ ಕಾಮಗಾರಿಯಿಂದಾಗಿ ರಸ್ತೆಗಳು ಹದಗೆಟ್ಟಿದೆ. ಇ-ಸ್ವತ್ತು ಸೇರಿದಂತೆ ನಗರಸಭೆ ವತಿಯಿಂದ ನೀಡುವ ವಿವಿಧ ದಾಖಲೆಗಳು ನೀಡುವುದರಲ್ಲಿ ಬಹಳ ವಿಳಂಬವಾಗುತ್ತಿದೆ. ಈ ಎಲ್ಲಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರವನ್ನು ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಬಳಿಕ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ವೆಂಕಟೇಶ್ ಅವರಿಗೆ ಮನವಿ ಸಲ್ಲಿಸಿದರು.
ಸಾರ್ವಜನಿಕರ ಕೆಲಸಗಳನ್ನು ಮಾಡಲು ವಿಳಂಬ ಧೋರಣೆ ಅನುಸರಿಸುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ವಾರ್ಡ್ ಗಳಲ್ಲಿ ನಿರ್ದಿಷ್ಟ ಸಮಯಕ್ಕೆ ಕಸ ತೆರವುಗೊಳಿಸಿ, ಚರಂಡಿ ಹೂಳು ತೆಗೆಸಬೇಕು. ಎಲ್ಲಾ ವಾರ್ಡ್ ಗಳಿಗೂ ಸಮರ್ಪಕ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಅಮೃತ್-2 ಕುಡಿಯುವ ನೀರು ಪೂರೈಕೆ ಯೋಜನೆಯಲ್ಲಿ ನಡೆಯುತ್ತಿರುವ ಕಾಮಗಾರಿಯಿಂದ ಹದಗೆಟ್ಟಿರುವ ರಸ್ತೆಗಳನ್ನು ಶೀಘ್ರ ದುರಸ್ತಿಗೊಳಿಸಬೇಕು. ನಗರಸಭೆ ವತಿಯಿಂದ ನೀಡುವ ದಾಖಲೆಗಳನ್ನು ನಿರ್ದಿಷ್ಟ ಸಮಯದೊಳಗೆ ನೀಡಬೇಕು. ಗಾಳೀಪುರ ಬಡಾವಣೆಯ ಸಮೀಪದಲ್ಲಿ ಹಾದು ಹೋಗಿರುವ ಬೈಪಾಸ್ ರಸ್ತೆಯಲ್ಲಿ ಹೈಮಾಸ್ಟ್ ದೀಪವನ್ನು ಅಳವಡಿಸಬೇಕು ಎಂದು ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ನಗರಸಭೆ ಮಾಜಿ ಸದಸ್ಯ ಅಬ್ರಾರ್ ಅಹಮ್ಮದ್, ಜಿಲ್ಲಾಧ್ಯಕ್ಷರಾದ ಕಲೀಲ್ ಉಲ್ಲಾ,ಉಪಾಧ್ಯಕ್ಷರಾದ ಸಿ.ಕೆ.ನಯಾಜ್ ಉಲ್ಲಾ,ಪ್ರಧಾನ ಕಾರ್ಯದರ್ಶಿ ಮಹೇಶ್ ,ಕಾರ್ಯದರ್ಶಿಗಳಾದ ಜಬೀನೂರ್ ಹಾಗೂ ಸುಹೇಲ್ ಪಾಷ,ಟೌನ್ ಅಧ್ಯಕ್ಷರಾದ ಮಜರ್ ಖಾನ್, ಉಪಾಧ್ಯಕ್ಷರಾದ ಕಿಜರ್ ಅಹಮದ್ ಹಾಗೂ ವಿವಿಧ ವಾರ್ಡ್ ಗಳ ನಿವಾಸಿಗಳು ಹಾಜರಿದ್ದರು.