ಬೇಟೆಯಾಡುವ ಉದ್ದೇಶದಿಂದಲೇ ಅರಣ್ಯ ಪ್ರವೇಶಿಸಿದ್ದರು- ಎಸಿಎಫ್ ಮರಿಸ್ವಾಮಿ

ಮಣಿಕಂಠ ಜನತಾ ರಾಯಭಾರಿ
2 Min Read

ಚಾಮರಾಜನಗರ: ಕಾವೇರಿ ವನ್ಯಧಾಮದಲ್ಲಿ ನಡೆದ ಮೂವರು ಬೇಟೆಗಾರರ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾವೇರಿ ವನ್ಯಧಾಮದ ಎಸಿಎಫ್ ಮರಿಸ್ವಾಮಿ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದು, ಮೃತಪಟ್ಟವರು ಬೇಟೆಯಾಡುವ ಉದ್ದೇಶದಿಂದಲೇ ಅರಣ್ಯ ಪ್ರವೇಶಿಸಿದ್ದರು ಎಂದು ತಿಳಿಸಿದ್ದಾರೆ.

ಅರಣ್ಯಕ್ಕೆ ಬಂದಿದ್ದವರು ಬೇಟೆಗಾರರು, ದನ ಮೇಯಿಸಲು ಅಥವಾ ಹಸು ಹುಡುಕಲು ಬಂದಿರಲಿಲ್ಲ. ಬೇಟೆಯಾಡುವ ಉದ್ದೇಶದಿಂದಲೇ ಅವರು ಅರಣ್ಯ ಪ್ರವೇಶಿಸಿದ್ದರು ಎಂದು ಎಸಿಎಫ್ ಹೇಳಿದ್ದಾರೆ.

ಸುಮಾರು 8 ರಿಂದ 10 ಕಿ.ಮೀ. ಅರಣ್ಯದೊಳಗೆ ಅತಿಕ್ರಮ ಪ್ರವೇಶ ಮಾಡಿದ್ದರು. ಮೃತಪಟ್ಟವರಿಂದ ಸುಮಾರು 75 ಮೀಟರ್ ದೂರದಲ್ಲಿ ಎರಡು ಬ್ಯಾಗ್‌ಗಳಲ್ಲಿ 34.25 ಕೆಜಿ ಮಾಂಸ ಪತ್ತೆಯಾಗಿದೆ. ಬ್ಯಾಗ್‌ಗಳಲ್ಲಿ ದಿನಸಿ ಪದಾರ್ಥ, ಟಾರ್ಚ್ ಸೇರಿದಂತೆ ಬೇಟೆಗೆ ಬಳಸುವ ಸಲಕರಣೆಗಳು ಪತ್ತೆಯಾಗಿವೆ. ಪತ್ತೆಯಾದ ಮಾಂಸ ಯಾವ ಪ್ರಾಣಿಯದ್ದು ಎಂಬುದನ್ನು ತಿಳಿಯಲು ಲ್ಯಾಬ್‌ಗೆ ಕಳುಹಿಸಲಾಗಿದೆ ಎಂದಿದ್ದಾರೆ.

ಮೃತಪಟ್ಟ ಮೂವರ ವಿರುದ್ಧ ಈ ಹಿಂದೆ ಅರಣ್ಯ ಇಲಾಖೆಯಲ್ಲಿ ಯಾವುದೇ ಪ್ರಕರಣ ಇರಲಿಲ್ಲ. ಆದರೆ ತಲೆಮರೆಸಿಕೊಂಡಿರುವ ಮಹಿಮಾ ದಾಸ್ ವಿರುದ್ಧ ಕಳ್ಳಬೇಟೆಗೆ ಸಂಬಂಧಿಸಿದ ಒಂದು ಪ್ರಕರಣ ಇದೆ. ಅರಣ್ಯ ಸಿಬ್ಬಂದಿ ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದಾರೆ. ಸಿಬ್ಬಂದಿ ಗುಂಡು ಹಾರಿಸದಿದ್ದರೆ ಅವರೇ ಅಪಾಯಕ್ಕೆ ಸಿಲುಕುತ್ತಿದ್ದರು ಎಂದು ಎಸಿಎಫ್ ಹೇಳಿದ್ದಾರೆ.

ಮೃತಪಟ್ಟವರೂ ಗುಂಡು ಹಾರಿಸಿದ್ದರು, ಆದರೆ ಅದು ಮಿಸ್‌ಫೈರ್ ಆಗಿದೆ. ಮೂವರ ಮೇಲೆ ಗುಂಡು ಹಾರಿಸಿದ್ದು ಒಬ್ಬನೇ ಅರಣ್ಯ ಸಿಬ್ಬಂದಿ, ಉಳಿದ ಇಬ್ಬರು ಆತನೊಂದಿಗೆ ಇದ್ದರು. ಕಾರ್ಯಾಚರಣೆಯಲ್ಲಿ ಒಟ್ಟು 12 ಅರಣ್ಯ ಸಿಬ್ಬಂದಿ ಭಾಗಿಯಾಗಿದ್ದರು ಎಂದು ಮಾಹಿತಿ ನೀಡಿದ್ದಾರೆ.

ಹೊಸ ಚಪ್ಪಲಿ ಕುರಿತು ಸ್ಪಷ್ಟನೆ: ಸ್ಥಳದಲ್ಲಿ ನಾಲ್ಕು ಜೋಡಿ ಹೊಸ ಚಪ್ಪಲಿಗಳು ಪತ್ತೆಯಾಗಿದ್ದು, ಅವು ಪ್ಯಾರಗಾನ್ ಚಪ್ಪಲಿಗಳು ಎಂದು ಎಸಿಎಫ್ ಹೇಳಿದ್ದಾರೆ. ಸಿಬ್ಬಂದಿ ಚಪ್ಪಲಿಗಳನ್ನು ಅಲ್ಲಿಗೆ ತೆಗೆದುಕೊಂಡು ಹೋಗಿ ಇಟ್ಟಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಕಳ್ಳಬೇಟೆ ತಡೆ ಶಿಬಿರ ಹಾಗೂ ಸರ್ಕಾರಿ ಆಸ್ತಿಗೆ ಹಾನಿ ಮಾಡಿದವರ ವಿರುದ್ಧ ಕಾನೂನು ಪ್ರಕಾರ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಅರಣ್ಯ ಹಾಗೂ ಸರ್ಕಾರಿ ಆಸ್ತಿಯನ್ನು ಹಾನಿಗೊಳಿಸುವವರ ವಿರುದ್ಧವೂ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಘಟನೆಯಲ್ಲಿ ಪತ್ತೆಯಾದ ಮಾಂಸದ ಲ್ಯಾಬ್ ವರದಿ ಬಂದ ಬಳಿಕ ಅದು ಯಾವ ಪ್ರಾಣಿಯದ್ದು ಎಂಬುದು ಸ್ಪಷ್ಟವಾಗಲಿದೆ ಎಂದು ಎಸಿಎಫ್ ಮರಿಸ್ವಾಮಿ ಹೇಳಿದ್ದಾರೆ.

Share this Article
Leave a comment