ಚಾಮರಾಜನಗರ: ಉತ್ತರಾಖಂಡದ ಸಭೆಯೊಂದರಲ್ಲಿ ಭಾಗವಹಿಸಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಸಭೆಯ ಬಳಿಕ ಶುದ್ಧೀಕರಣ ಮಾಡಿದ ಪ್ರಕರಣವನ್ನು ಖಂಡಿಸಿ ದಲಿತ ಸಂಘರ್ಷ ಸಮಿತಿ ವತಿಯಿಂದ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ನಗರದ ಜಿಲ್ಲಾಡಳಿತ ಭವನದ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು ಕೆಲಕಾಲ ಧರಣಿ ನಡೆಸಿದರು. ಉತ್ತರಾಖಂಡದ ಮುಖ್ಯಮಂತ್ರಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ದಸಂಸ ಸಂಚಾಲಕ ಸಿ.ಎಂ.ಶಿವಣ್ಣ ಮಾತನಾಡಿ, ಉತ್ತರಾಖಂಡದ ರಾಮಲೀಲಾ ಮೈದಾನದಲ್ಲಿ ಆ.8 ರಂದು ನಡೆದ ಕಾರ್ಯಕ್ರಮದಲ್ಲಿ ರಾಜ್ಯಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆಯವರು ಭಾಗವಹಿಸಿ, ಜನರನ್ನು ಉದ್ದೇಶಿಸಿ ಮಾತನಾಡಿದ್ದರು. ಆದರೆ 2 ದಿನಗಳ ನಂತರ ಹಿಂದುಪರ ಸಂಘಟನೆಗಳು ಅಲ್ಲಿನ ಸ್ಥಳವನ್ನು ಶುದ್ಧೀಕರಣ ಮಾಡಿರುವುದು ಅತ್ಯಂತ ಖಂಡನೀಯ ಎಂದರು.
ದೇಶದಲ್ಲಿ ಸಂವಿಧಾನ ಜಾರಿಗೊಂಡು 77 ವರ್ಷಗಳು ಕಳೆದರೂ, ಅಸ್ಪೃಶ್ಯತೆ ಆಚರಣೆ ಜೀವಂತವಾಗಿದೆ ಎಂಬುದನ್ನು ಉತ್ತರಾಖಂಡದ ಪ್ರಕರಣ ಉದಾಹರಣೆಯಾಗಿದೆ. ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಸಕಲರಿಗೂ ಸಮಾನತೆ ದೊರಕಿಸಿಕೊಟ್ಟರು. ಆದರೆ ಇಂದಿಗೂ ತಳ ಸಮುದಾಯಗಳ ಸ್ಥಿತಿ ಬದಲಾಗಿಲ್ಲ. ಅಸ್ಪೃಶ್ಯತೆ ಆಚರಣೆ ದಿನದಿನಕ್ಕೆ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಶುದ್ಧೀಕರಣ ಮಾಡಿದ ಕಿಡಿಗೇಡಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ದಸಂಸ ಸಂಚಾಲಕ ರಂಗಸ್ವಾಮಿ, ಚಿನ್ನಸ್ವಾಮಿ, ಚಂದ್ರಶೇಖರ್, ನಂಜುಂಡಸ್ವಾಮಿ, ಬಸವಯ್ಯ, ಶೇಖರ್, ಭೈರಯ್ಯ, ಶಿವಣ್ಣ, ಚಿನ್ನಸ್ವಾಮಿ, ಕುಮಾರ ಹಾಗೂ ಇತರರು ಭಾಗವಹಿಸಿದ್ದರು.