ನೇತ್ರದಾನದಿಂದ ಬದುಕು ಸಾರ್ಥಕ: ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಜೇಶ್ ಕುಮಾರ್ 

ಮಣಿಕಂಠ ಜನತಾ ರಾಯಭಾರಿ
2 Min Read

ಚಾಮರಾಜನಗರ, ಆ.25: ಎಲ್ಲರೂ ನೇತ್ರದಾನ ಮಾಡುವುದರಿಂದ ಸಾಕಷ್ಟು ಅಂಧರ ಬಾಳಿಗೆ ಬೆಳಕಾಗಬಹುದು. ಈ ಮೂಲಕ ಸಾರ್ಥಕತೆ ಪಡೆಯಬಹುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜೇಶ್ ಕುಮಾರ್ ಅವರು ಹೇಳಿದರು.

ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ರಾಷ್ಟ್ರೀಯ ನೇತ್ರದಾನ ಪಾಕ್ಷಿಕ ಆಚರಣೆ ಹಿನ್ನೆಲೆಯಲ್ಲಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿದ್ದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ವೈದ್ಯಕೀಯ ವಿದ್ಯಾರ್ಥಿಗಳು ಮುಂದಿನ ನೇತ್ರ ತಜ್ಞರಾಗಲಿದ್ದಾರೆ. ನೀವು ನೇತ್ರದಾನ ಮಾಡುವುದಾಗಿ ನೊಂದಣಿ ಮಾಡಿಕೊಂಡಲ್ಲಿ ನೇತ್ರ ತಜ್ಞರಾಗುವುದಕ್ಕೂ ಸಾರ್ಥಕವಾಗುತ್ತದೆ. ನಾನು ಮತ್ತು ನನ್ನ ಕುಟುಂಬ ವರ್ಗದವರು ಸಹ ನೇತ್ರದಾನಕ್ಕೆ ನೊಂದಣಿ ಮಾಡಿಕೊಂಡಿದ್ದೇವೆ ಎಂದರು.

ಚಾಮರಾಜನಗರ ಜಿಲ್ಲೆಯು ಮೇರುನಟ ಡಾ. ರಾಜ್ ಕುಮಾರ್ ಅವರ ತವರು ಜಿಲ್ಲೆಯಾಗಿದ್ದು, ಅವರು ಸಹ ನೇತ್ರದಾನ ಮಾಡಿದ್ದು, ಅವರ ಪುತ್ರ ಪುನೀತ್ ರಾಜ್ ಕುಮಾರ್ ಸಹ ನೇತ್ರದಾನ ಮಾಡಿದ್ದಾರೆ. ಸಾಕಷ್ಟು ಜನರು ನೇತ್ರದಾನ ಮಾಡಲು ನೊಂದಾಯಿಸಿಕೊಂಡಿದ್ದಾರೆ. ಎಲ್ಲರೂ ನೇತ್ರದಾನ ಮಾಡಿದಲ್ಲಿ ಸಾಕಷ್ಟು ಅಂಧರ ಬಾಳಿಗೆ ಬೆಳಕಾಗಬಹುದು ಎಂದು ಡಾ. ರಾಜೇಶ್ ಕುಮಾರ್ ಅವರು ತಿಳಿಸಿದರು.

ಜಿಲ್ಲಾ ಅಂಧತ್ವ ನಿಯಂತ್ರಣ ಕಾರ್ಯಕ್ರಮ ಅಧಿಕಾರಿ ಡಾ. ಚಂದ್ರಶೇಖರ್ ಅವರು ಮಾತನಾಡಿ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರು ನೇತ್ರದಾನಕ್ಕಾಗಿ ನೊಂದಣಿ ಮಾಡುತ್ತಿದ್ದು, ಇದು ಕುಟುಂಬದ ಸಂಪ್ರದಾಯವಾದಲ್ಲಿ ಅಗತ್ಯವಿರುವ ಎಲ್ಲಾ ಕಾರ್ನಿಯಾ ಅಂಧರಿಗೂ ಸಹ ದೃಷ್ಟಿ ನೀಡಬಹುದಾಗಿದೆ. ಮರಣದ ನಂತರ ಕಣ್ಣನ್ನು ಹೂಳದೆ ದಾನ ಮಾಡುವುದರಿಂದ ಮಡಿದವರ ನೇತ್ರಗಳು ಸದಾ ಜೀವಂತವಾಗಿರುತ್ತದೆ ಎಂದು ತಿಳಿಸಿದರು.

ನೇತ್ರ ವಿಭಾಗದ ಮುಖ್ಯಸ್ಥರಾದ ಡಾ. ಮಹೇಶ್ವರ್ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಪಿ.ಪಿ.ಟಿ ಮೂಲಕ ನೇತ್ರದಾನದ ಮಹತ್ವ, ದೇಶದಲ್ಲಿರುವ ಅಂಧರ ಅಂಕಿ ಅಂಶಗಳು ಮತ್ತು ನೇತ್ರದಾನ ನೊಂದಣಿ ಮಾಡಿರುವವರ ವಿವರ, ನೇತ್ರದಾನದ ಬಗ್ಗೆ ಇರುವ ತಪ್ಪು ನಂಬಿಕೆಗಳ ಬಗ್ಗೆ ಮಾಹಿತಿ ನೀಡಿದರು.

ಚಾಮರಾಜನಗರ ವೈದ್ಯಕೀಯ ಕಾಲೇಜಿನ ಅಧೀಕ್ಷಕರಾದ ಡಾ. ಮಾರುತಿ, ಪ್ರಾಂಶುಪಾಲರಾದ ಡಾ. ಗಿರೀಶ್ ವಿ. ಪಾಟೀಲ್, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು

Share this Article
Leave a comment