ಅಂಬೇಡ್ಕರ್ ಗೆ ಅಪಮಾನ, ಯಡವನಹಳ್ಳಿ ನಾಯಕ ಸಮುದಾಯದವರು ಹೇಳಿದ್ದಿಷ್ಟು!

ಮಣಿಕಂಠ ಜನತಾ ರಾಯಭಾರಿ
3 Min Read

ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ಯಡವನಹಳ್ಳಿ ಗ್ರಾಮದಲ್ಲಿ ನಾಯಕ ಸಮುದಾಯದ ಸಿದ್ದೇಶ್ ಎಂಬ ಕಿಡಿಗೇಡಿ ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ ಎಸಗಿದ್ದನು, ಈ ಸಂಬಂಧ ಅದೇ ಗ್ರಾಮದ ನಾಯಕ ಸಮುದಾಯದವರ ಅಭಿಪ್ರಾಯಗಳನ್ನು ಕೇಳಿದರೇ ನಿಜಕ್ಕೂ ನೀವು ಆಶ್ಚರ್ಯವನ್ನು ಪಡುತ್ತೀರಿ!

ಹೌದು ಚಾಮರಾಜನಗರ ಜಿಲ್ಲೆ, ಗುಂಡ್ಲುಪೇಟೆ ತಾಲೂಕಿನ ಬೇಗೂರು ಹೋಬಳಿಯ ಯಡವನಹಳ್ಳಿಯಲ್ಲಿ ಸಿದ್ದೇಶ್ ಎಂಬ ಕಿಡಿಗೇಡಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ ಮಾಡಿರುವ ಘಟನೆಗೆ ಸಂಬಂಧಿಸಿದಂತೆ ಬಹುಜನ ಸಮಾಜ ಪಕ್ಷದ ರಾಜ್ಯಾಧ್ಯಕ್ಷ ಎಂ.ಕೃಷ್ಣಮೂರ್ತಿ ಅವರು ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಹಲವಾರು ನಾಯಕ ಸಮುದಾಯದ ಮುಖಂಡರು ಹಂಚಿಕೊಂಡ ಅಭಿಪ್ರಾಯ ಎರಡು ಸಮುದಾಯಗಳ ನಡುವೆ ಇರುವ ಸೌಹಾರ್ದತೆಯನ್ನು ಸಾರುತ್ತದೆ.

ಬಾಬಾಸಾಹೇಬ್ ಅಂಬೇಡ್ಕರ್ ಬ್ಯಾನರ್ ಗೆ ಅಪಮಾನ ಮಾಡಿರುವ ಘಟನೆಯನ್ನು ಯಡವನಹಳ್ಳಿಯ ಸಮಸ್ತ ನಾಯಕ ಸಮುದಾಯ ಖಂಡಿಸುತ್ತದೆ. ನಾವು ಇಂದು ಏನಾದರೂ ಅಭಿವೃದ್ಧಿ ಹೊಂದಿದ್ದರೆ, ಶಿಕ್ಷಣ, ಉದ್ಯೋಗ ಪಡೆದಿದ್ದರೆ ಅದಕ್ಕೆ ಬಾಬಾಸಾಹೇಬರೇ ಕಾರಣ ಎಂದು ಪ್ರೌಢಶಾಲಾ ಶಿಕ್ಷಕ ಎಸ್. ಮಹೇಶ್, ಮಹದೇವ್, ಸಂದೇಶ್ m.com, ಗ್ರಾಮದ ಯಜಮಾನರಾದ ಸಿದ್ದನಾಯಕ ಅವರು ಈಗೇ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಪರಿಶಿಷ್ಟ ಜಾತಿಯ ಎಂಟು ಮನೆಗಳಿರುವ ಹಾಗೂ 150 ಕ್ಕೂ ಹೆಚ್ಚು ಪರಿಶಿಷ್ಟ ಪಂಗಡದ ನಾಯಕ ಸಮುದಾಯದ ಮನೆಗಳು ಇರುವ ಗ್ರಾಮ ಯಡವನಹಳ್ಳಿ. ಎರಡು ಸಮುದಾಯಗಳ ನಡುವೆ ಇದುವರೆಗೆ ಯಾವುದೇ ತಂಟೆ ತಕರಾರು ಇಲ್ಲದೆ ಸೌಹಾರ್ದತೆಯಿಂದ ಬದುಕುತ್ತಿರುವ ವಿಶೇಷ ಗ್ರಾಮವಿದು.

ಕೇವಲ ಎಂಟು ಮನೆಗಳಿರುವ ಪರಿಶಿಷ್ಟ ಜಾತಿ ಕಾಲೋನಿಯಲ್ಲಿ ಮದುವೆ ಹಬ್ಬ, ಸಾವು-ನೋವು ಮುಂತಾದ ಸಂದರ್ಭಗಳಲ್ಲಿ ಪರಸ್ಪರ ಸಹಕಾರಗಳಿಂದ ನಾಯಕ ಸಮುದಾಯದ ಎಲ್ಲರೂ ಭಾಗವಹಿಸುತ್ತಾರೆ. ಪರಮಪೂಜ್ಯ ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ ಮತ್ತು ಪರಿನಿಬ್ಬಾಣ ಕಾರ್ಯಕ್ರಮವನ್ನು ಸಹ ಇಬ್ಬರೂ ಕೂಡಿ ಆಚರಿಸುತ್ತಾರೆ.

ಇಂತಹ ಗ್ರಾಮದಲ್ಲಿ ಕುಡಿತದ ಅಮಲಿನಲ್ಲಿ ವೈಯಕ್ತಿಕ ಜಗಳದ ಕಾರಣ, ಕಿಡಿಗೇಡಿ ಒಬ್ಬ ಮಾಡಿರುವ ಈ ಕೃತ್ಯವನ್ನು ಇಡೀ ಗ್ರಾಮ ಒಟ್ಟಾಗಿ ಖಂಡಿಸುತ್ತಿದೆ. ತಪ್ಪು ಮಾಡಿರುವ ವ್ಯಕ್ತಿ ಶಿಕ್ಷೆ ಅನುಭವಿಸಲಿ ಎಂದು ನಾಯಕ ಸಮುದಾಯದ ಯಜಮಾನರೂ ಸೇರಿದಂತೆ ಶಿಕ್ಷಕರು, ವಿದ್ಯಾರ್ಥಿಗಳು, ಯುವಕರು ಒಕ್ಕೂರಲಿನಿಂದ ಖಂಡಿಸಿದ್ದಾರೆ.

ಬಿಎ‌ಸ್ಪಿ ಮುಖಂಡರಿಂದ ನಾಯಕ ಸಮುದಾಯದ ಮುಖಂಡರ ಭೇಟಿ: ಯಡವನಹಳ್ಳಿ ಗ್ರಾಮಕ್ಕೆ ಬಿಎಸ್ಪಿ ರಾಜ್ಯಾಧ್ಯಕ್ಷ ಕೃಷ್ಣಮೂರ್ತಿ ಅವರು ಭೇಟಿ ನೀಡಿದ್ದ ಸಂದರ್ಭದಲ್ಲಿ, ಸ್ಥಳದಲ್ಲಿದ್ದ ಪಿಎಸ್ಐ ಲೋಕೇಶ್, ನಾಯಕ ಸಮುದಾಯದ ಮುಖಂಡರ ಜೊತೆ ಮಾತನಾಡಬೇಕೆಂದಾಗ, ಸದ್ಯಕ್ಕೆ ಬೇಡ ಎಂದರು. ಆದರೆ ಬಿಎಸ್ಪಿ ಮುಖಂಡರು ನಾಯಕ ಸಮುದಾಯದವರ ಜೊತೆ ಮಾತನಾಡಿದ ನಂತರ ಪಿಎಸ್ಐ ಸೇರಿದಂತೆ ಎಲ್ಲ ಪೊಲೀಸರು ಸಹ ಆಶ್ಚರ್ಯ ಚಿಕಿತರಾದರು.

ಎಲ್ಲಾ ಸಮುದಾಯಗಳ ವಿದ್ಯಾವಂತರು ಪ್ರಜ್ಞಾವಂತರು ಖಂಡಿತವಾಗಿಯೂ ಪರಮಪೂಜ್ಯ ಬಾಬಾ ಸಾಹೇಬರನ್ನು ಗೌರವಿಸುತ್ತಾರೆ. ಕೆಲವೇ ಕೆಲವು ಅವಿದ್ಯಾವಂತರು, ಕಿಡಿಗೇಡಿಗಳು ಸಂವಿಧಾನ ವಿರೋಧಿ, ಮನುವಾದಿಗಳ ಚಿತಾವಣೆಗೆ ಒಳಗಾಗಿ ಬಾಬಾಸಾಹೇಬರ ಪ್ರತಿಮೆ ಬ್ಯಾನರ್ ಗಳಿಗೆ ಅಪಮಾನ ಮಾಡುವ ಕೃತ್ಯ ಎಸಗುತ್ತಾರೆ. ಸರ್ಕಾರ, ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಪಂಚಾಯತ್ ರಾಜ್ ಮತ್ತು ಸಮಾಜ ಕಲ್ಯಾಣ ಇಲಾಖೆ ಒಟ್ಟಾಗಿ ಸಂವಿಧಾನ ಮತ್ತು ಬಾಬಾ ಸಾಹೇಬರ ಬಗ್ಗೆ ಎಲ್ಲ ವರ್ಗಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳುವ ಮೂಲಕ ಬಾಬಾಸಾಹೇಬರ ಬಗ್ಗೆ ಇರುವ ತಪ್ಪು ತಿಳುವಳಿಕೆ ಮತ್ತು ಪೂರ್ವಗ್ರಹವನ್ನು ಹೋಗಲಾಡಿಸಬೇಕು ಎಂದು ಬಿಎಸ್ಪಿ ಮುಖಂಡರು ಈ ಸಂದರ್ಭದಲ್ಲಿ ಒತ್ತಾಯಿಸಿದರು.

ಈ ವೇಳೆ ಬಿಎಸ್ಪಿ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಬ್ಯಾಡಮೂಡ್ಲು ಬಸವಣ್ಣ, ಚಾಮರಾಜನಗರ ಜಿಲ್ಲಾ ಉಪಾಧ್ಯಕ್ಷ ಗುಂಡ್ಲುಪೇಟೆ ಬಸವಣ್ಣ, ಚಾಮರಾಜನಗರ ತಾಲೂಕು ಅಧ್ಯಕ್ಷ ಚಂದ್ರಕಾಂತ್, ಗುಂಡ್ಲುಪೇಟೆ ಜಿಲ್ಲಾ ಕಾರ್ಯದರ್ಶಿ ರಾಜೇಂದ್ರ ಪ್ರಸಾದ್, ಪ್ರಧಾನ ಕಾರ್ಯದರ್ಶಿ ಮಹದೇವ್, ಮೂಡಲ ಹೊಸಳ್ಳಿ ಸಿದ್ದರಾಜು, ವರುಣ ಕ್ಷೇತ್ರದ ಉಸ್ತುವಾರಿ ನಾಗೇಂದ್ರ ಮುಂತಾದವರು ಹಾಜರಿದ್ದರು.

Share this Article
Leave a comment