ಓದು ಬರಹ ಕಲಿಯದವನು, ಆದರೆ ಕೋಟ್ಯಂತರ ಜನರಿಗೆ ಅಕ್ಷರ ಕಲಿಸಿದ ಕವಿ. “ಫಕೀರಾ” ಕಾದಂಬರಿಯಿಂದ “ಜೀತ್ ಹಮಾರಿ” ಹಾಡಿನವರೆಗೆ – ಅಸಮಾನತೆಯ ವಿರುದ್ಧ ಹೋರಾಡಿದ ಸಾಹಿತ್ಯ ಯೋಧನ ಕಥೆ.
ಓದು ಬಾರದ ಬರಹಗಾರ ಎಂದೇ ಜನಜನಿತವಾಗಿರುವ ಅಣ್ಣಾ ಭಾವು ಸಾಠೆ ಅವರು 1920 ಆ.1 ರಂದು ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ವಾಟೇಗಾಂವ್ ಗ್ರಾಮದಲ್ಲಿ ಜನಿಸಿದರು. ಔಪಚಾರಿಕ ಶಿಕ್ಷಣ ಪಡೆಯದ ಅಣ್ಣಾ ಭಾವು ಸಾಠೆ ಅವರ 35 ಕಾದಂಬರಿಗಳು, 15 ನಾಟಕಗಳು, 10 ಕಾವ್ಯ ಸಂಗ್ರಹಗಳು ಮರಾಠಿ ಮತ್ತು ದಲಿತ ಸಾಹಿತ್ಯದ ಇತಿಹಾಸವನ್ನೇ ಬದಲಾಯಿಸಿದವು. ಅವರನ್ನು “ದಲಿತ ಸಾಹಿತ್ಯದ ಪಿತಾಮಹ” ಎಂದು ಕರೆಯಲು ಇವೇ ಕಾರಣವಾದವು. ಅವರ ಬರಹಗಳಲ್ಲಿ ಕಣ್ಣೀರಲ್ಲ, ಕ್ರಾಂತಿಯಿತ್ತು. ದೀನರ ನೋವನ್ನು ಅವರು ಕವಿತೆಯಾಗಿ, ಹಾಡಾಗಿ, ಕಾದಂಬರಿಯಾಗಿ ಜಗತ್ತಿಗೆ ತೋರಿಸಿದರು.
ಆರಂಭಿಕ ಜೀವನ ಮತ್ತು ಹೋರಾಟ: ಅಣ್ಣಾ ಭಾವು ಅವರು ಮಾಂಗ್ ಸಮುದಾಯಕ್ಕೆ ಸೇರಿದವರು. ಬಡತನದಿಂದಾಗಿ 9ನೇ ವಯಸ್ಸಿಗೆ ಶಾಲೆ ಬಿಡಬೇಕಾಯಿತು. ಮುಂಬೈಗೆ ಬಂದು ಕಾರ್ಮಿಕರಾಗಿ ಕೆಲಸ ಮಾಡಿದರು. ರಾತ್ರಿ ಫ್ಯಾಕ್ಟರಿಯಲ್ಲಿ, ಹಗಲು ಮಿಲ್ಲಿನಲ್ಲಿ ಕೆಲಸ ಮಾಡಿದರು. ಆದರೆ ಇದೇ ಅನುಭವ ಅವರ ಸಾಹಿತ್ಯದ ಕಚ್ಚಾ ವಸ್ತುವಾಯಿತು. “ನಾನು ನೋಡಿದ ಹಸಿವು, ಅವಮಾನ, ಜಾತಿ ತಾರತಮ್ಯವೇ ನನ್ನ ಸಾಹಿತ್ಯ” ಎಂದು ಅವರು ಹೇಳುತ್ತಿದ್ದರು. ಅಣ್ಣಾ ಭಾವು ಅವರ ಸಾಹಿತ್ಯ ಕೇವಲ ಗ್ರಂಥಾಲಯಕ್ಕೆ ಸೀಮಿತವಾಗಿರಲಿಲ್ಲ. ಅದು ಬೀದಿಗೆ, ಕಾರ್ಖಾನೆಗೆ, ಹಳ್ಳಿಗೆ ಇಳಿದಿತ್ತು.
1959 ರಲ್ಲಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಮೊದಲ ಮರಾಠಿ ಕಾದಂಬರಿ “ಫಕೀರಾ” ಭಾವು ಸಾಠೆ ಅವರ ಅಪರೂಪದ ಕಾದಂಬರಿಯಾಗಿದೆ. ಇದು ಶೋಷಿತ ರೈತನ ಹೋರಾಟದ ಕಥೆಯಾಗಿದೆ. ಅದಲ್ಲದೇ “ಚಿತ್ರಾ”, “ವಾರಣಾಚಾ ವಾಘ್” ಕೂಡ ಪ್ರಸಿದ್ಧ ಭಾವು ಸಾಠೆ ಅವರ ಪ್ರಮುಖ ಕಾದಂಬರಿಯಾಗಿವೆ. “ಜೀತ್ ಹಮಾರಿ” ಎಂಬ ಭಾವು ಸಾಠೆ ಅವರ ಹಾಡು ಭಾರತ-ಚೀನಾ ಯುದ್ಧದ ವೇಳೆ ರಾಷ್ಟ್ರಭಕ್ತಿಯ ಸಂಕೇತವಾಯಿತು. “ಹಾ ಮಝಾ ಮಾರ್ಗ ಏಕಲಾ” ಅವರ ಸ್ವಾಭಿಮಾನದ ಘೋಷಣೆಯಾಯಿತು. “ಐಕ್ ಗಾವ್ ಬಾರಾ ಭಾನಗಡಿ” ಎಂಬ ನಾಟಕದ ಮೂಲಕ ಜಾತಿ ವ್ಯವಸ್ಥೆಯನ್ನು ವಿಡಂಬಿಸಿದರು. ಅವರ ಸಾಹಿತ್ಯದ ಭಾಷೆ ಸಂಸ್ಕೃತೀಕೃತವಾಗಿರಲಿಲ್ಲ. ಅದು ಜನರ ಬಾಯಿ ಮಾತಾಗಿತ್ತು. ಅದೇ ಕಾರಣಕ್ಕೆ ಕಾರ್ಮಿಕ, ರೈತರು ತಕ್ಷಣ ಅವರ ಹಳೇ ಸಾಹಿತ್ಯಕ್ಕೆ ಕನೆಕ್ಟ್ ಆಗುತ್ತಿದ್ದರು.
ಅಣ್ಣಾ ಭಾವು ಸಾಠೆ ಅವರ ಕೃತಿಗಳು ಹಿಂದಿ, ಗುಜರಾತಿ, ಕನ್ನಡ, ಇಂಗ್ಲಿಷ್ ಸೇರಿದಂತೆ 27 ಭಾಷೆಗಳಿಗೆ ಅನುವಾದಗೊಂಡಿವೆ. ರಷ್ಯಾ, ಚೆಕೋಸ್ಲೊವಾಕಿಯಾದಲ್ಲಿಯೂ ಅವರ ಕಥೆಗಳು ಪ್ರಕಟಗೊಂಡವು. “ಫಕೀರಾ” ರಷ್ಯನ್ ಭಾಷೆಯಲ್ಲಿ 1 ಲಕ್ಷ ಪ್ರತಿಗಳು ಮಾರಾಟವಾಯಿತು.
ರಾಜಕೀಯ ಮತ್ತು ಸಾಮಾಜಿಕ ಕೊಡುಗೆ: ಅಣ್ಣಾ ಭಾವು ಕೇವಲ ಬರಹಗಾರರಾಗಿ ಉಳಿಯಲಿಲ್ಲ. ಅವರು ಸಂಯುಕ್ತ ಮಹಾರಾಷ್ಟ್ರ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದರು. “ಮಹಾರಾಷ್ಟ್ರಕ್ಕೆ ಪ್ರತ್ಯೇಕ ರಾಜ್ಯ ಬೇಕು” ಎಂದು ಹಾಡು, ಭಾಷಣದ ಮೂಲಕ ಜನರನ್ನು ಜಾಗೃತಗೊಳಿಸಿದರು. ಅಂಬೇಡ್ಕರ್ ಅವರ ಚಿಂತನೆಗಳಿಂದ ಪ್ರಭಾವಿತರಾಗಿ ದಲಿತರ ಶಿಕ್ಷಣ ಮತ್ತು ಸ್ವಾಭಿಮಾನಕ್ಕಾಗಿ ದುಡಿದರು. “ಸಾಹಿತ್ಯವು ಕೇವಲ ಮನರಂಜನೆಗೆ ಅಲ್ಲ, ಅದು ಬದಲಾವಣೆಗೆ ಒಂದು ಆಯುಧ” ಎಂಬುದು ಅವರ ನಂಬಿಕೆಯಾಗಿತ್ತು. 1969 ರ ಜುಲೈ 18 ರಂದು ಕೇವಲ 49 ನೇ ವಯಸ್ಸಿನಲ್ಲಿ ಅವರು ನಿಧನರಾದರು. ಆದರೆ ಅವರ ಸಾಹಿತ್ಯ ಇಂದಿಗೂ ಜೀವಂತವಾಗಿದೆ.
ಅಣ್ಣಾ ಭಾವು ಸಾಠೆ ಅವರು ಕೇವಲ ಮರಾಠಿ ಬರಹಗಾರರಲ್ಲ. ಅವರು ಭಾರತದ ಅಂಚಿನಲ್ಲಿರುವ ಜನರ ಧ್ವನಿಯಾಗಿದ್ದರು. ಅವರು ತಮ್ಮ ಜೀವನದಿಂದಲೇ ಸಾಬೀತು ಮಾಡಿದರು. 2020 ರಲ್ಲಿ ಅವರ ಜನ್ಮ ಶತಮಾನೋತ್ಸವವನ್ನು ಇಡೀ ದೇಶ ಆಚರಿಸಿತು. ಇಂದಿಗೂ ಪ್ರತಿ ವರ್ಷ ಆ.1 ರಂದು ಅವರ ಹಾಡುಗಳು, ಕವಿತೆಗಳು ದಲಿತರ ಮತ್ತು ಕಾರ್ಮಿಕರ ಸಭೆಗಳಲ್ಲಿ ಮೊಳಗುತ್ತವೆ.
ಕೊನೆಯದಾಗಿ “ನನ್ನ ರಕ್ತದಿಂದ ಅಕ್ಷರ ಬರೆಯುತ್ತೇನೆ, ಆ ಅಕ್ಷರದಿಂದ ಸಮಾಜ ಬದಲಾಯಿಸುತ್ತೇನೆ” ಎಂಬ ಅಣ್ಣಾ ಭಾವು ಸಾಠೆ ಅವರ ಮಾತುಗಳು ನಮಗೆ ಆದರ್ಶವಾಗಬೇಕಿದೆ. ಅವರ ಹುಟ್ಟಿದ ದಿನವನ್ನು ದೇಶದ ದಲಿತರು ನೆನಪು ಮಾಡಿಕೊಳ್ಳಬೇಕಿದೆ.
-ಆ.ಸಿ.ಮ, ಚಾಮರಾಜನಗರ