ಎನ್.ಸಿ.ಸಿ ತರಬೇತಿಯಲ್ಲಿ ಬೆಳ್ಳಿ ಪದಕ ಪಡೆದ ಗುಂಡ್ಲುಪೇಟೆ ಯುವಕ 

ಮಣಿಕಂಠ ಜನತಾ ರಾಯಭಾರಿ
2 Min Read

ಚಾಮರಾಜನಗರ: ಎನ್.ಸಿ.ಸಿ ಕಠಿಣ ಸೇನಾ ತರಬೇತಿಯಲ್ಲಿ ಬೆಳ್ಳಿ ಪದಕವನ್ನು ಪಡೆಯುವ ಮೂಲಕ ಗುಂಡ್ಲುಪೇಟೆ ತಾಲೂಕಿನ ಯುವಕನೊಬ್ಬ ಅಪರೂಪದ ಸಾಧನೆಯನ್ನು ಮಾಡಿದ್ದಾರೆ.

ಮಹಾರಾಷ್ಟ್ರದ ನಾಗಪುರದ ಕಾಂಫ್ಟಿಯಲ್ಲಿರುವ ಎನ್‌ಸಿಸಿ ಆಫೀಸರ್ ಟ್ರೈನಿಂಗ್ ಅಕಾಡೆಮಿಯಲ್ಲಿ ಜೂ.3 ರಿಂದ ಆ.1 ರವರೆಗೆ ಮೈಸೂರು 3 ಕರ್ನಾಟಕ ರಾಷ್ಟ್ರೀಯ ಕೆಡೆಟ್ ಕಾರ್ಪ್ ನೆವಲ್ ಯೂನಿಟ್ ನಿಂದ ಹಾಗೂ ಸಂತ ಮರಿಯಾ ದಿ ಮಥಿಯಾಸ್ ಶಾಲೆಯಿಂದ ಆಯ್ಕೆಯಾಗಿ ಗುಂಡ್ಲುಪೇಟೆಯ ನಾರಾಯಣಸ್ವಾಮಿ ಎಂಬುವವರು ಎನ್.ಸಿ.ಸಿ ತರಬೇತಿಯಲ್ಲಿ ಭಾಗವಹಿಸಿದ್ದರು.

ಭಾರತೀಯ ವಿದ್ಯಾರ್ಥಿ ಸಂಘ, ಮೈಸೂರಿನ ಪದ್ಮಪಾಣಿ ಲಲಿತಕಲಾ ಅಕಾಡೆಮಿಯ ಸದಸ್ಯರು ಹಾಗೂ ಗಾಯಕರು ಆಗಿರುವ ನಾರಾಯಣಸ್ವಾಮಿ ಅವರು ಪ್ರಿ ಕಮಿಷನ್ ಕೋರ್ಸ್ ತರಬೇತಿಯನ್ನು ಯಶಸ್ವಿಯಾಗಿ ಮುಗಿಸಿ ಅಸೋಸಿಯೇಟ್ ಎನ್. ಸಿ. ಸಿ ಆಫೀಸರ್ (ANO) ಆಗಿ ಆಯ್ಕೆಯಾದರು. ಈ ತರಬೇತಿಗೆ ಭಾರತದ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಸರಿಸುಮಾರು 650 ಶಿಕ್ಷಕರು, ಅದರಲ್ಲೂ ದಕ್ಷಿಣ ಭಾರತದ ರಾಜ್ಯಗಳಿಂದ 200 ಶಿಕ್ಷಕರು ಭಾಗವಹಿಸಿದ್ದರು.

ಎರಡು ತಿಂಗಳ ಅವಧಿಯ ಈ ಕಠಿಣ ಸೇನಾ ತರಬೇತಿಯಲ್ಲಿ ಲಿಖಿತ ಪರೀಕ್ಷೆಗಳು, ಡಿ.ಎಸ್.ಟಿ ಡ್ರಿಲ್, ಫೈರಿಂಗ್ ಮತ್ತು ದೈಹಿಕ ತರಬೇತಿ ಪರೀಕ್ಷೆಗಳು ನಡೆದಿದ್ದು, ಎಲ್ಲಾ ಪರೀಕ್ಷೆಗಳಲ್ಲಿ ಮೊದಲ ಪ್ರಯತ್ನದಲ್ಲೇ ನಾರಾಯಣಸ್ವಾಮಿ ಅವರು ಉತ್ತೀರ್ಣರಾಗಿ, ಅತಿ ಹೆಚ್ಚು ಅಂಕಗಳನ್ನು ಗಳಿಸಿದ್ದಾರೆ. ದಕ್ಷಿಣ ಭಾರತ ಮತ್ತು ಕರ್ನಾಟಕ ದಿಂದ ಭಾಗವಹಿಸಿದ್ದ ಅಷ್ಟು ಜನರಲ್ಲಿ ಏನ್. ಸಿ. ಸಿ ನೌಕ ವಿಭಾಗದಲ್ಲಿ ಬೆಳ್ಳಿ ಪದಕವನ್ನು ಇವರು ಪಡೆದಿದ್ದು , ಮೇಜರ್ ಜನರಲ್ ಕಮಾಂಡಂಟ್ ಶರಬ್ಜಿತ್ ಸಿಂಗ್ ಬಕ್ಷಿ -ಸೇನಾ ಮೆಡಲ್ ಮತ್ತು ವಿಶಿಷ್ಟ್ ಸೇನಾ ಮೆಡಲ್ ಅವರು ಬೆಳ್ಳಿ ಪದಕದ ಜೊತೆಗೆ ಪ್ರಮಾಣ ಪತ್ರ ಮತ್ತು ಪಾರಿತೋಷಕವನ್ನು ವಿತರಿಸಿದ್ದಾರೆ.

ದಕ್ಷಿಣ ಭಾರತಕ್ಕೆ ಏಕೈಕ ಮೆಡಲ್: ಮೂಲತಃ ಗುಂಡ್ಲುಪೇಟೆ ತಾಲೂಕಿನವರಾದ ಶಿಕ್ಷಕ ನಾರಾಯಣಸ್ವಾಮಿ ಅವರು ಎನ್.ಸಿ.ಸಿ ತರಬೇತಿಯಲ್ಲಿ ಬೆಳ್ಳಿ ಪದಕ ಪಡೆಯುವ ಮೂಲಕ ದಕ್ಷಿಣ ಭಾರತದಲ್ಲೇ ಈಬಾರಿ ಏಕೈಕ ಮೆಡಲ್ ಗೆದ್ದ ಕೀರ್ತಿಗೆ ಭಾಜನರಾಗಿದ್ದಾರೆ. ಅದಲ್ಲದೇ ಮೈಸೂರಿನ ಮಾನಸ ಗಂಗೋತ್ರಿಯಲ್ಲಿರುವ 3 ಕರ್ನಾಟಕ ಎನ್. ಸಿ. ಸಿ ನೆವಲ್ ಯೂನಿಟ್ ಇತಿಹಾಸದಲ್ಲೇ ಮೊದಲ ಬಾರಿಗೆ ಬೆಳ್ಳಿ ಪದಕವನ್ನು ಪಡೆದ ಕೀರ್ತಿ ನಾರಾಯಣಸ್ವಾಮಿ ಅವರದ್ದಾಗಿದೆ. ಇದು ಶಿಕ್ಷಕ ನಾರಾಯಣಸ್ವಾಮಿ ಅವರ ಜೀವಮಾನದ ಮತ್ತು ಐತಿಹಾಸಿಕ ಸಾಧನೆಯಾಗಿದೆ.

ಅಭಿನಂದನೆಗಳ ಮಹಾಪೂರ: ಎನ್.ಸಿ.ಸಿ ತರಬೇತಿಯಲ್ಲಿ ಬೆಳ್ಳಿ ಪದಕ ಪಡೆದಿರುವ ನಾರಾಯಣಸ್ವಾಮಿ ಅವರಿಗೆ ಮೈಸೂರು ಮತ್ತು ಚಾಮರಾಜನಗರದ ವಿವಿಧ ಸಂಘ-ಸಂಸ್ಥೆಗಳು ಹಾಗೂ ಹಿತೈಷಿಗಳು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಅಕ್ಕ ಐಎಎಸ್ ಅಕಾಡೆಮಿಯ ನಿರ್ದೇಶಕರಾದ ಡಾ.ಶಿವಕುಮಾರ್, ಭಾರತೀಯ ವಿದ್ಯಾರ್ಥಿ ಸಂಘ ಹಾಗೂ ಪದ್ಮಪಾಣಿ ಲಲಿತಕಲಾ ಅಕಾಡೆಮಿಯ ಸದಸ್ಯರು ನಾರಾಯಣಸ್ವಾಮಿ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

Share this Article
Leave a comment