ಯಳಂದೂರು: ತಾಲೂಕಿನಲ್ಲಿ ಜು.6 ರಂದು ನಡೆಯಬೇಕಿದ್ದ ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡ (ST) ಸಮುದಾಯಗಳ ಪ್ರಮುಖ ಸಭೆಯನ್ನು ತಹಶೀಲ್ದಾರ್ ಅವರು ಮಾಹಿತಿ ನೀಡದೆ ದಿಢೀರನೆ ಮುಂದೂಡಿದ್ದು, ತಾಲೂಕಿನ ದಲಿತ ಮುಖಂಡರು ಹಾಗೂ ಪ್ರಮುಖರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಹಿಂದಿನ 26/6/2026ರ ಸಭೆಯಲ್ಲೇ ಸ್ವತಃ ತಹಶೀಲ್ದಾರ್ ಅವರೇ 8/7/2026 ದಿನಾಂಕದಂದು ಸಭೆ ನಡೆಸುವುದಾಗಿ ಸ್ಪಷ್ಟವಾಗಿ ತಿಳಿಸಿದ್ದರು. ಅದರಂತೆ ತಾಲ್ಲೂಕಿನ ವಿವಿಧೆಡೆಯಿಂದ ಹಾಗೂ ತಾಲ್ಲೂಕಿನ ಮೂಲೆ ಮೂಲೆಗಳಿಂದ ನೂರಾರು ಮುಖಂಡರು ಮತ್ತು ಸಮುದಾಯದ ಪ್ರತಿನಿಧಿಗಳು ತಮ್ಮ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತರಲು ಸಭೆಗೆ ಆಗಮಿಸಿದ್ದರು. ಆದರೆ, ಸ್ಥಳಕ್ಕೆ ಬಂದ ಮುಖಂಡರಿಗೆ ಸಭೆಯನ್ನು ಮುಂದೂಡಲಾಗಿದೆ ಎಂಬ ಸುದ್ದಿ ತಿಳಿದು ತೀವ್ರ ನಿರಾಶೆ ಹಾಗೂ ಆಕ್ರೋಶ ಉಂಟಾಯಿತು.
ಸಮುದಾಯದ ಜ್ವಲಂತ ಸಮಸ್ಯೆಗಳನ್ನು ಆಲಿಸಲು ಅಧಿಕಾರಿಗಳಿಗೆ ಆಸಕ್ತಿ ಇಲ್ಲವೇ? ಎಂದು ಪ್ರಶ್ನಿಸಿರುವ ಮುಖಂಡರು ಸಮಾಜ ಕಲ್ಯಾಣ ಇಲಾಖೆ ತಾಲೂಕು ಅಧಿಕಾರಿ ಕೇಶವಮೂರ್ತಿ ಅವರನ್ನು ತರಾಟೆಗೆ ತೆಗೆದುಕೊಂಡರು.
ಅಧಿಕಾರಿಯಿಂದ ಉಡಾಫೆಯ ಉತ್ತರ: ತಾಲ್ಲೂಕಿನಲ್ಲಿ 8/7/2026 ರಂದು ನಡೆಯಬೇಕಿದ್ದ ಎಸ್ಸಿ, ಎಸ್ಟಿ ಪ್ರಮುಖ ಸಭೆಯನ್ನು ದಿಢೀರನೆ ಮುಂದೂಡಿರುವುದಲ್ಲದೆ ಸಭೆಯ ದಿನಾಂಕವೇ ಅಧಿಕೃತವಲ್ಲ ಎಂದು ಉಡಾಫೆ ಹೇಳಿಕೆ ನೀಡಿದ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಯ ಮಾತನ್ನು ಮುಖಂಡರಾದ ಗಣಿಗನೂರು ಚಂದ್ರು ಅವರು ತೀವ್ರವಾಗಿ ಖಂಡಿಸಿದರು.
ಹಿಂದಿನ ಸಭೆಯಲ್ಲಿ ತಹಶೀಲ್ದಾರ್ ಅವರೇ ಸ್ವತಃ ಇಂದಿನ ದಿನಾಂಕವನ್ನು ನಿಗದಿಪಡಿಸಿದ್ದರು. ಅದರಂತೆ ಎಸ್ಸಿ, ಎಸ್ಟಿ ಮುಖಂಡರುಗಳು ಹಾಗೂ ನೂರಾರು ಜನ ಸಭೆಗೆ ಆಗಮಿಸಿದ್ದರು. ಆದರೆ ಅಧಿಕಾರಿಗಳು ಸಭೆಗೆ ಬಾರದೆ ನಿರ್ಲಕ್ಷ್ಯ ವಹಿಸಿದ್ದನ್ನು ಪ್ರಶ್ನಿಸಿದಾಗ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಕೇಶವಮೂರ್ತಿ ರವರು ಈ ದಿನಾಂಕ ಅಧಿಕೃತವಲ್ಲ ಎಂದು ಹಗುರವಾಗಿ ಮಾತನಾಡಿದರೂ. ಈ ಹೇಳಿಕೆ ಮುಖಂಡರ ಆಕ್ರೋಶವನ್ನು ಮತ್ತಷ್ಟು ಹೆಚ್ಚಿಸಿತು.
ಪ್ರತಿಭಟನೆಯ ಎಚ್ಚರಿಕೆ: ಸ್ವತಃ ತಹಶೀಲ್ದಾರ್ ಅವರೇ ಮುಂದಿನ ಸಭೆಯ ದಿನಾಂಕವನ್ನು ಖುದ್ದಾಗಿ ತಿಳಿಸಿದ್ದರು. ಈಗ ಇಲಾಖೆಯ ಅಧಿಕಾರಿಗಳು ಇದನ್ನು ಅನಧಿಕೃತ ಎಂದು ಹೇಳುತ್ತಿರುವುದು ಸಮುದಾಯಕ್ಕೆ ಮಾಡುತ್ತಿರುವ ದ್ರೋಹ ಮತ್ತು ಅಪಮಾನ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಭೆಯನ್ನು ನಿಲ್ಲಿಸಿರುವ ಬಗ್ಗೆ ಮಾಹಿತಿನೀಡದೆ ನುಣುಚಿಕೊಳ್ಳುತ್ತಿರುವ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಹಾಗೂ ತಹಶೀಲ್ದಾರ್ ಅವರು ತಕ್ಷಣವೇ ಸಮುದಾಯಗಳಿಗೆ ಕ್ಷಮೆಯಾಚಿಸಬೇಕು. ಕೂಡಲೇ ಸಭೆಯ ಹೊಸ ಅಧಿಕೃತ ದಿನಾಂಕವನ್ನು ಪ್ರಕಟಿಸದಿದ್ದರೆ ತಾಲ್ಲೂಕು ಕಚೇರಿಗೆ ಮುತ್ತಿಗೆ ಹಾಕಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಕೋಟ್:
ಮೂರು ತಾಲೂಕಿನಲ್ಲಿ ಸಮಾಜ ಕಲ್ಯಾಣ ಅಧಿಕಾರಿಯಾಗಿ ಕೆಲಸ ಮಾಡುತ್ತಿರುವ ಕೇಶವಮೂರ್ತಿ ರವರಿಗೆ ಕೆಲಸದ ಒತ್ತಡದಿಂದ ಸಭೆಗಳನ್ನು ಮುಂದೂಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇವರಿಗೆ ಒಂದು ತಾಲೂಕಿನಲ್ಲಿ ಕೆಲಸ ಮಾಡಲು ಅವಕಾಶ ನೀಡಿ ನಮ್ಮ ಎಸ್ಸಿ, ಎಸ್ಟಿ ಸಮಸ್ಯೆಗಳನ್ನ ಕೇಳದ ಇಂತಹ ಅಧಿಕಾರಿ ನಮ್ಮ ತಾಲೂಕಿನಲ್ಲಿ ಕೆಲಸ ಮಾಡುವುದು ಬೇಡ.
|ಯೋಗೇಶ್ ಸಾಂಗ್ಲಿಯಾನ ದಲಿತ ಮುಖಂಡರು
ಎಸ್ಸಿ ಮೀಸಲು ಕ್ಷೇತ್ರವಾದ ನಮ್ಮ ತಾಲೂಕಿನಲ್ಲಿ ಎಸ್ಸಿ ಎಸ್ಟಿ ಕುಂದು ಕೊರತೆ ಸಭೆಯು ನಡೆಯದೇ ಇರಲು ತಾಲೂಕು ಆಡಳಿತವನ್ನು ಹಿಡಿತಕ್ಕೆ ತೆಗೆದುಕೊಳ್ಳದ ಶಾಸಕರಾದ ಕೃಷ್ಣಮೂರ್ತಿ ರವರ ವೈಫಲ್ಯ ಎದ್ದು ಕಾಣುತ್ತಿದೆ. ಸಮುದಾಯದ ಪ್ರತಿನಿಧಿಯಾದ ಎ.ಆರ್.ಕೃಷ್ಣಮೂರ್ತಿ ರವರು ನಿರ್ಲಕ್ಷ್ಯ ತೋರುತ್ತಿರುವುದು ಏಕೆ ಎಂಬುದು ತಿಳಿಯದಾಗಿದೆ.
|ರಾಜು ಅಗರ , ಎಸ್ಟಿ ಮುಖಂಡರು
ಎಸ್ಸಿ ಎಸ್ಟಿ ಸಭೆಗೆ ಎಲ್ಲಾ ಅಧಿಕಾರಿಗಳು ಹಾಜರಾಗಬೇಕು ಎಂದು ತಿಳಿಸಲು 8/7/2026ರಂದು ಅಧಿಕಾರಿಗಳ ಸಭೆಯನ್ನು ನಡೆಸಿದ್ದೇವೆ. ಮುಂದಿನ ಜು.15ನೇ ತಾರೀಕು ಎಸ್ಸಿ, ಎಸ್ಟಿ ಕುಂದು ಕೊರತೆ ಸಭೆಯನ್ನು ಕರೆಯಲಾಗುತ್ತದೆ. ಅಲ್ಲಿ ಎಲ್ಲಾ ಅಧಿಕಾರಿಗಳು ಹಾಜರಾಗುತ್ತಾರೆ.
|ನಯನ, ತಹಸೀಲ್ದಾರ್, ಯಳಂದೂರು