ಬೆಂಗಳೂರು: ದೆಹಲಿಯ ಜಂತರ್ ಮಂತರ್ ನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದ ವಿದ್ಯಾರ್ಥಿಗಳ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದ ಘಟನೆ ಕುರಿತು ಕನ್ನಡದ ನಟ ಯುವ ರಾಜ್ ಕುಮಾರ್ ಮೌನ ಮುರಿದು ವಿದ್ಯಾರ್ಥಿಗಳ ಪರವಾಗಿ ಧ್ವನಿ ಎತ್ತಿದ್ದಾರೆ.
ದೊಡ್ಮನೆ ಕುಡಿ, ಕನ್ನಡ ಚಿತ್ರರಂಗದ ನಾಯಕ ನಟ ಯುವ ರಾಜ್ ಕುಮಾರ್ ಅವರು ದೆಹಲಿ ಘಟನೆಯ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದು, ರಾಜಕೀಯಕ್ಕಿಂತ ಮಾನವೀಯತೆ ದೊಡ್ಡದು. ಪ್ರಚಾರಕ್ಕಿಂತ ಸತ್ಯ ದೊಡ್ಡದು. ಭಯಕ್ಕಿಂತ ಧ್ವನಿ ದೊಡ್ಡದು ಎಂದು ಮಾರ್ಮಿಕವಾಗಿ ಪ್ರಶ್ನೆಗಳನ್ನು ಕೇಳಿದ್ದಾರೆ.
ಈ ಪೋಸ್ಟ್ ಯಾವುದೇ ರಾಜಕೀಯ ಪಕ್ಷದ ಪರವೂ ಅಲ್ಲ, ವಿರೋಧವೂ ಅಲ್ಲ. ಇದು ಮಾನವೀಯತೆಯ ಬಗ್ಗೆ. ದೆಹಲಿಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ನಾವು ಸುಮ್ಮನೆ ನೋಡುತ್ತಾ ಹೋಗಬಾರದು. ದೇಶದ ಮೂಲೆ ಮೂಲೆಗಳಿಂದ ವಿದ್ಯಾರ್ಥಿಗಳು ಒಂದೇ ವಿಚಾರಕ್ಕಾಗಿ ಧ್ವನಿ ಎತ್ತುತ್ತಿದ್ದಾರೆ. ಅವರ ಧ್ವನಿಯನ್ನು ಕೇಳುವುದು, ಏನಾಗುತ್ತಿದೆ ಎಂದು ತಿಳಿದುಕೊಳ್ಳುವುದು ನಮ್ಮ ಜವಾಬ್ದಾರಿ ಎಂದು ಹೇಳಿದ್ದಾರೆ.

ದೆಹಲಿಯಲ್ಲಿ ನಡೆದ ಘಟನೆಗೆ ಯಾರು ಹೊಣೆ? ಈ ಪರಿಸ್ಥಿತಿ ತಪ್ಪಿಸಬಹುದಿತ್ತೇ? ವಿದ್ಯಾರ್ಥಿಗಳಿಗೆ ಗಾಯಗಳಾಗಲು ಕಾರಣವೇನು? ಇಂತಹ ಘಟನೆಗಳು ಮತ್ತೆ ನಡೆಯದಂತೆ ನಾವು ಏನು ಮಾಡಬೇಕು? ಎಂದು ಆಳುವ ಸರ್ಕಾರಗಳನ್ನು ಪ್ರಶ್ನಿಸಿದ್ದಾರೆ.
ಪ್ರತಿಯೊಬ್ಬ ನಾಗರಿಕನಿಗೂ ಮಾಹಿತಿ ತಿಳಿದುಕೊಳ್ಳುವ ಜವಾಬ್ದಾರಿ ಇದೆ. ನೆಲಮಟ್ಟದಲ್ಲಿರುವವರ ಧ್ವನಿಯನ್ನು ಆಲಿಸಿ. ಸತ್ಯಾಂಶಗಳನ್ನು ತಿಳಿದುಕೊಳ್ಳಿ. ಕಷ್ಟದ ಪ್ರಶ್ನೆಗಳನ್ನೂ ಕೇಳಿ. ನಿಮ್ಮದೇ ಆದ ಅಭಿಪ್ರಾಯ ರೂಪಿಸಿಕೊಳ್ಳಿ. ಒಂದು ರಾಷ್ಟ್ರ ತನ್ನ ಜನರು ಕಣ್ಮುಚ್ಚಿ ನೋಡುವುದನ್ನು ಬಿಟ್ಟು, ಮಾನವೀಯತೆಯ ಪರ ನಿಂತು, ಹೊಣೆಗಾರಿಕೆಯನ್ನು ಕೇಳಿದಾಗ ಇನ್ನಷ್ಟು ಬಲವಾಗುತ್ತದೆ. ಇದು ನಮ್ಮೆಲ್ಲರ ಸಮಸ್ಯೆ. ಏಕೆಂದರೆ ಒಂದು ರಾಷ್ಟ್ರದ ಭವಿಷ್ಯವನ್ನು ಅದರ ಜನರ ಜಾಗೃತಿ, ಮಾನವೀಯತೆ ಮತ್ತು ಹೊಣೆಗಾರಿಕೆಯನ್ನು ರೂಪಿಸುತ್ತವೆ ಎಂದು ತಿಳಿಸಿದ್ದಾರೆ.