ಗಾಳಿಪಟ ಉತ್ಸವಗಳಿಂದ ಮಕ್ಕಳ ದೈಹಿಕ ಆರೋಗ್ಯ ವೃದ್ಧಿ : ಶ್ರೀನಿಧಿ ಕುದರ್ 

ಮಣಿಕಂಠ ಜನತಾ ರಾಯಭಾರಿ
1 Min Read

ಚಾಮರಾಜನಗರ: ಶಾಲಾ-ಕಾಲೇಜುಗಳಲ್ಲಿ ಗಾಳಿಪಟ ಉತ್ಸವವನ್ನು ಆಯೋಜನೆ ಮಾಡುವುದರಿಂದ ಮಕ್ಕಳಲ್ಲಿ ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿಗೆ ಸಹಕಾರಿಯಾಗಲಿದೆ ಎಂದು ಗಣಿ ಉದ್ಯಮಿ ಹಾಗೂ ಸಮಾಜ ಸೇವೆಯ ಶ್ರೀನಿಧಿ ಕುದರ್ ಅವರು ತಿಳಿಸಿದರು.

ನಗರದ ಸೋಮವಾರಪೇಟೆ ಎಂಸಿಎಸ್ ಪಬ್ಲಿಕ್ ಸ್ಕೂಲ್ ನಲ್ಲಿ ಶುಕ್ರವಾರ ಆಯೋಜಿಸಿದ್ದ ಗಾಳಿಪಟ ಉತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಗಾಳಿಪಟ ಉತ್ಸವವು ಮುಖ್ಯವಾಗಿ ಮಕರ ಸಂಕ್ರಾಂತಿ ಅಥವಾ ಉತ್ತರಾಯನ ಹಬ್ಬದ ಸಂದರ್ಭದಲ್ಲಿ ಸೂರ್ಯನ ಉತ್ತರಾಯಣ ಗತಿಯ ಆರಂಭವನ್ನು ಸಂಭ್ರಮಿಸಲು ನಡೆಯುವ ಸಾಂಪ್ರದಾಯಿಕ ಕ್ರೀಡೆಯಾಗಿದ್ದು, ಸಾಂಸ್ಕೃತಿಕವಾಗಿ ಆಚರಣೆ ಮಾಡಲಾಗುತ್ತದೆ. ಬಣ್ಣಬಣ್ಣದ ಪಟಗಳಿಂದ ಅಲಂಕಾರ ಮಾಡುವ ಉತ್ತರಾಯಣ ಉತ್ಸವ ಬಹಳ ಪ್ರಸಿದ್ಧವಾಗಿದೆ. ಚಳಿಗಾಲದ ಮಾಗಿಯ ಕಾಲದಲ್ಲಿ ಬೀಸುವ ಅನುಕೂಲಕರ ಗಾಳಿಯು ಗಾಳಿಪಟಗಳನ್ನು ಆಕಾಶದಲ್ಲಿ ಹಾರಿಸಲು ಸಹಕಾರಿಯಾಗುತ್ತದೆ ಎಂದರು.

ಗಾಳಿಪಟ ಉತ್ಸವ ಕೇವಲ ಸ್ಥಳೀಯ ಆಟವಾಗದೇ, ಗುಜರಾತಿನ ಅತಿದೊಡ್ಡ ಹಬ್ಬಗಳಲ್ಲೊಂದಾಗಿದೆ. ಇತ್ತೀಚಿನ ದಿನಗಳಲ್ಲಿ ಮಕ್ಕಳು ಮೊಬೈಲ್ ಬಳಕೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳುತ್ತಿದ್ದಾರೆ. ಇಂತಹ ಚಟುವಟಿಕೆಯುಕ್ತ ಕಾರ್ಯಕ್ರಮಗಳು ಮಕ್ಕಳನ್ನು ಮೊಬೈಲ್ ಬಳಕೆ ಕಡಿಮೆ ಮಾಡಿ ಹೆಚ್ಚು ಹೆಚ್ಚು ಓದುವ ಕಡೆ ಕರೆದೊಯ್ಯುತ್ತದೆ ಎಂದರು.

ಈ ಸಂದರ್ಭದಲ್ಲಿ ಶಾಲೆಯ ಆಡಳಿತಾಧಿಕಾರಿ ಎಂ. ನಾಗರಾಜು, ಪ್ರಾಂಶುಪಾಲರಾದ ಶಶಿಧರ ಮೂರ್ತಿ, ಮುಖ್ಯಶಿಕ್ಷಕ ಎಚ್.ಎಂ.ಮಹದೇವ, ಶಿಕ್ಷಕರಾದ ಸಿ.ಎನ್.ಸಂಪತ್ ಕುಮಾರ್, ಗೀತಾ, ಮಧುರ, ಮಂಗಳಮ್ಮ, ಸಲ್ಮಾ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

Share this Article
Leave a comment