ಬೆಂಗಳೂರು: ದೆಹಲಿಯಲ್ಲಿ ಕಾಕ್ರೋಚ್ ಜನತಾ ಪಾರ್ಟಿಯ ಪ್ರತಿಭಟನೆಯಿಂದ ರಾಜ್ಯ ಸಂಪುಟ ವಿಸ್ತರಣೆಗೂ ತೊಡಕು ಉಂಟಾಗಿದ್ದು, ಎಲ್ಲವೂ ಅಂದುಕೊಂಡಂತೆ ಆದರೆ ಜು.29 ಕ್ಕೆ ನೂತನ ಸಚಿವರ ಪದಗ್ರಹಣಕ್ಕೆ ದಿನಾಂಕ ನಿಗದಿಯಾಗುವ ಸಾಧ್ಯತೆ ಇದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸಚಿವ ಸಂಪುಟದಲ್ಲಿ ಮಂತ್ರಿ ಸ್ಥಾನ ಯಾರಿಗೆ ದೊರೆಯಲಿದೆ ಎಂಬ ಚರ್ಚೆ ಜೋರಾಗಿದೆ.
ರಾಜ್ಯ ಸರ್ಕಾರದ ಸಚಿವ ಸಂಪುಟ ವಿಸ್ತರಣೆಗಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಹರಿಪ್ರಸಾದ್ ಅವರನ್ನು ಒಳಗೊಂಡಂತೆ ಸಚಿವ ಸ್ಥಾನ ಆಕಾಂಕ್ಷಿಗಳು ದೆಹಲಿಗೆ ತೆರಳಿದ್ದರು. ಆದರೆ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಮಲ್ಲಿಕಾರ್ಜುನ ಖರ್ಗೆ ಮತ್ತು ನಾಯಕ ರಾಹುಲ್ ಗಾಂಧಿ ಅವರು ನೀಟ್ ಪ್ರತಿಭಟನೆಯಲ್ಲಿ ಬ್ಯೂಸಿಯಾದ ಹಿನ್ನೆಲೆಯಲ್ಲಿ ಸಚಿವ ಸಂಪುಟ ವಿಸ್ತರಣೆಗೆ ತೊಡಕು ಉಂಟಾಯಿತು. ದೆಹಲಿಗೆ ತೆರಳಿದ್ದ ಎಲ್ಲರೂ ಬರಿಗೈಯಲ್ಲಿ ವಾಪಸ್ ಬರುವಂತಾಯಿತು.
ಈ ವಾರದಲ್ಲಿ ಮತ್ತೊಮ್ಮೆ ಸಚಿವ ಸಂಪುಟ ವಿಸ್ತರಣೆಗಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಹರಿಪ್ರಸಾದ್ ಅವರನ್ನು ಒಳಗೊಂಡಂತೆ ಸಚಿವ ಸ್ಥಾನ ಆಕಾಂಕ್ಷಿಗಳು ದೆಹಲಿಗೆ ತೆರಳುವ ಸಾಧ್ಯತೆ ಇದ್ದು, ಈ ಬಾರಿ ಸಚಿವ ಸಂಪುಟ ಫೈನಲ್ ಆಗುವ ಸಾಧ್ಯತೆ ಇದೆ ಎಂದು ಬಲ್ಲ ಮೂಲಗಳು ತಿಳಿಸಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಜು.29 ರಂದು ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಸೋಮವಾರ ಪದಗ್ರಹಣ ಫಿಕ್ಸ್?:
ಕಾಕ್ರೋಚ್ ಹೋರಾಟದ ಸದ್ದು ಕಡಿಮೆ ಆಗಿ ಎಲ್ಲಾ ಅಂದುಕೊಂಡಂತೆ ನಡೆದರೇ, ಜು. 29 ಸೋಮವಾರ ನೂತನ ಸಚಿವರ ಪದಗ್ರಹಣ ನಡೆಯುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಶನಿವಾರ ಮತ್ತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಮತ್ತೆ ದೆಹಲಿಗೆ ತೆರಳುವ ಸಾಧ್ಯತೆಯಿದೆ ಇದ್ದು, ಭಾನುವಾರ ಹೈಕಮಾಂಡ್ ವರಿಷ್ಠರೊಂದಿಗೆ ಸಂಪುಟ ವಿಸ್ತರಣೆ ಕುರಿತು ಚರ್ಚೆ ನಡೆಸಲಿದ್ದು, ನೂತನ ಸಂಪುಟದ ಪಟ್ಟಿ ಫೈನಲ್ ಮಾಡಿಕೊಂಡೆ ಬರಲಿದ್ದಾರೆ.
ಡಿಸಿಎಂ ಹುದ್ದೆಗೆ ಮತ್ತೆ ಒತ್ತಡ:
ಸಂಪುಟ ವಿಸ್ತರಣೆ ಚರ್ಚೆ ನಡುವೆ ಹಠಾತ್ ಆಗಿ ಡಾ.ಜಿ.ಪರಮೇಶ್ವರ್ ಜತೆ ಮತ್ತೆರಡು ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿ ಚರ್ಚೆ ಮುನ್ನೆಲೆಗೆ ಬಂದಿದೆ. ಕಾಂಗ್ರೆಸ್ ಹೈಕಮಾಂಡ್ ಮುಂಬರುವ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಎಸ್ಟಿ ಸಮುದಾಯದ ಸತೀಶ್ ಜಾರಕಿಹೊಳಿ, ಹಾಗೂ ಲಿಂಗಾಯತ ಸಮುದಾಯದ ಒಬ್ಬರಿಗೆ ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಆದರೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮತ್ತೆರೆಡು ಡಿಸಿಎಂ ಹುದ್ದೆ ಸೃಷ್ಟಿಸುವ ನಿಟ್ಟಿನಲ್ಲಿ ಏನು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬ ತೀರ್ಮಾನದ ಮೇಲೆ ಎಲ್ಲವೂ ನಿರ್ಧಾರವಾಗಲಿದೆ.
18-19 ಶಾಸಕರು ಪ್ರಮಾಣವಚನ ಸ್ವೀಕಾರ?:
ಕಾಂಗ್ರೆಸ್ ಪಕ್ಷದ ಮೂಲಗಳ ಪ್ರಕಾರ ಸೋಮವಾರ ಅಥವಾ ಬುಧವಾರ ನಡೆಯಲಿರುವ ನೂತನ ಸಚಿವರ ಪದಗ್ರಹಣ ಸಮಾರಂಭದಲ್ಲಿ ಬಹುತೇಕ 18-19 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಯಿದೆ. ಈ ನಿಟ್ಟಿನಲ್ಲಿ ಲಕ್ಷ್ಮಣ ಸವದಿ, ಪುಟ್ಟರಂಗಶೆಟ್ಟಿ, ಸಲೀಂ ಅಹ್ಮದ್, ಎಂ.ಕೃಷ್ಣಪ್ಪ, ಚೆಲುವರಾಯಸ್ವಾಮಿ, ಎಸ್.ಎಸ್.ಮಲ್ಲಿಕಾರ್ಜುನ್, ರಘುಮೂರ್ತಿ, ರುದ್ರಪ್ಪ ಲಮಾಣಿ, ಮಧು ಬಂಗಾರಪ್ಪ, ಅಜಯ್ ಸಿಂಗ್, ಅಪಾಜಿ ನಾಡಗೌಡ/ ಯಶವಂಶ ರಾಯಗೌಡ ಪಾಟೀಲ್, ಬಸವರಾಜ ರಾಯರೆಡ್ಡಿ/ಶಿವರಾಜ ತಂಗಡಗಿ, ಶ್ರೀನಿವಾಸ ಮಾನೆ / ಸಂತೋಷ ಲಾಡ್, ಜಮೀರ್ ಅಹ್ಮದ್ / ತನ್ನೀರ್ ಸೇವ್ / ರಿಜ್ವಾನ್ ಅರ್ಷದ್, ತರೀಕೆರೆ ಶ್ರೀನಿವಾಸ್ / ಆರತಿ ಕೃಷ್ಣ, ಆನೇಕಲ್ ಶಿವಣ್ಣ/ ನರೇಂದ್ರ ಸ್ವಾಮಿ/ಎಚ್.ಸಿ.ಮಹದೇವಪ್ಪ, ಅನ್ನಪೂರ್ಣ ತುಕಾರಾಂ /ಬಿ.ನಾಗೇಂದ್ರ, ಗುಬ್ಬಿ ವಾಸು / ಶಿವಲಿಂಗೇಗೌಡ / ಶರತ್ ಬಚ್ಚೇಗೌಡ ಹಾಗೂ ದಿನೇಶ್ ಗುಂಡೂರಾವ್ ಅವರ ಹೆಸರುಗಳು ಕೇಳಿ ಬರುತ್ತಿದೆ. ಇವರಲ್ಲಿ ಯಾವ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ.