ಗುಂಡ್ಲುಪೇಟೆ: ತಾಲೂಕಿನ ಬಫರ್ಜೋನ್ ವ್ಯಾಪ್ತಿಯ ಬಸವಪುರ ಗ್ರಾಮದಲ್ಲಿ ಅಳವಡಿಸಲಾಗಿದ್ದ ಬೋನಿಗೆ ಎರಡು ವರ್ಷದ ಗಂಡು ಚಿರತೆ ಸೆರೆ ಸಿಕ್ಕಿದೆ.
ಬಸವಪುರ ಗ್ರಾಮದ ಸಲೀಂ ಅವರಿಗೆ ಸೇರಿದ ಜಮೀನಿನ ಸರ್ವೇ ನಂ. 4/6ರಲ್ಲಿ ಅರಣ್ಯ ಇಲಾಖೆ ಅಳವಡಿಸಿದ್ದ ಬೋನಿಗೆ ಗುರುವಾರ ಮುಂಜಾನೆ ಚಿರತೆ ಸೆರೆಯಾಗಿದೆ.
ಗ್ರಾಮದ ಸುತ್ತಮುತ್ತ ಚಿರತೆಯ ಓಡಾಟ ಕಂಡುಬಂದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಮುನ್ನೆಚ್ಚರಿಕೆ ಕ್ರಮವಾಗಿ ಬೋನು ಅಳವಡಿಸಿತ್ತು. ಇದೀಗ ಸುಮಾರು ಎರಡು ವರ್ಷದ ಗಂಡು ಚಿರತೆ ಬೋನಿಗೆ ಬಿದ್ದಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿರತೆಯನ್ನು ವೈದ್ಯಕೀಯ ತಪಾಸಣೆಯ ಬಳಿಕ ಸುರಕ್ಷಿತ ಅರಣ್ಯ ಪ್ರದೇಶಕ್ಕೆ ಬಿಡುವ ಸಾಧ್ಯತೆ ಇದೆ.