ಬೆಂಗಳೂರು: ಕೊಳ್ಳೆಗಾಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ ಎಸಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಅಸ್ವಸ್ಥ ಯುವಕನನ್ನು ಬೆತ್ತಲೆಗೊಳಿಸಿ ಥಳಿಸಿದ ಪ್ರತಿಯೊಬ್ಬ ವ್ಯಕ್ತಿಯನ್ನೂ ಹಿಡಿದು ಪ್ರಕರಣ ದಾಖಲಿಸಬೇಕು ಎಂದು ಹೈಕೋರ್ಟ್ ಪೊಲೀಸರಿಗೆ ತಾಕೀತು ಮಾಡಿದೆ.
‘ನನ್ನ ವಿರುದ್ಧ ಯಳಂದೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಕ್ರಿಮಿನಲ್ ಪ್ರಕರಣ ರದ್ದುಪಡಿಸಬೇಕು’ ಎಂದು ಕೋರಿ ಚಾಮರಾಜನಗರ ತಾಲ್ಲೂಕಿನ ಮಸಣಾಪುರದ ಉಪ್ಪಾರ ಬೀದಿಯ ಚಂದ್ರು ಬಿನ್ ಶಿವಣ್ಣ (19) ಸಲ್ಲಿಸಿರುವ ಕ್ರಿಮಿನಲ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.
‘ಹಲ್ಲೆ ನಡೆಸಲಾದ ಘಟನೆಯ ವಿಡಿಯೋ ಇದೆ. ಅದರ ನೆರವಿನಿಂದ ಎಲ್ಲ ಹಲ್ಲೆಕೋರರನ್ನೂ ಹಿಡಿದು ಕೇಸು ದಾಖಲಿಸಬೇಕು. ಇಂತಹ ಪ್ರಕರಣದ ತನಿಖೆ ಆಮೆ ವೇಗದಲ್ಲಿ ನಡೆಯುವಂತಾಗಬಾರದು. ಈವರೆಗೂ ನಡೆದಿರುವ ತನಿಖೆಯ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿ’ ಎಂದು ಪ್ರಾಸಿಕ್ಯೂಷನ್‌ಗೆ ನಿರ್ದೇಶಿಸಿದೆ.
‘ತನಿಖೆಯ ನೆಪದಲ್ಲಿ ಆರೋಪಿಗಳ ವಿರುದ್ಧ ಯಾವುದೇ ಬಲವಂತದ ಕ್ರಮ ಜರುಗಿಸಬಾರದು ಎಂಬ ಮಧ್ಯಂತರ ಆದೇಶವು ಕೇವಲ ಅರ್ಜಿದಾರ ಚಂದ್ರುಗೆ ಮಾತ್ರ ಅನ್ವಯಿಸಲಿದೆ. ಉಳಿದ ಆರೋಪಿಗಳು ತನಿಖೆಗೆ ಸಹಕರಿಸಬೇಕು’ ಎಂದು ತಿಳಿಸಿರುವ ನ್ಯಾಯಪೀಠ ವಿಚಾರಣೆಯನ್ನು ಸೆ.2ಕ್ಕೆ ಮುಂದೂಡಿದೆ.