ಚಾಮರಾಜನಗರ: ತಾಲೂಕಿನ ಮಸಣಾಪುರ ಮತ್ತು ಹೊಂಗನೂರು ಗ್ರಾಮಗಳಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ, ಭಾವಚಿತ್ರಕ್ಕೆ ಅಪಮಾನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದ ಅಧ್ಯಕ್ಷರಾದ ಡಾ.ಎಲ್.ಮೂರ್ತಿ ಅವರಿಗೆ ಮನವಿ ಸಲ್ಲಿಸಲಾಯಿತು.
ನಗರದ ಪ್ರವಾಸಿ ಮಂದಿರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಮಹಾಸಭಾ ಕಾರ್ಯಾಧ್ಯಕ್ಷರಾದ ಸಿ.ಕೆ.ಮಂಜುನಾಥ್ ಅವರ ನೇತೃತ್ವದಲ್ಲಿ ಇಂದು (ಶನಿವಾರ) ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಮಹಾಸಭಾ ಕಾರ್ಯಾಧ್ಯಕ್ಷರಾದ ಸಿ.ಕೆ.ಮಂಜುನಾಥ್ ಮಾತನಾಡಿ, ಜಿಲ್ಲೆಯಲ್ಲಿ ಇತ್ತೀಚೆಗೆ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಅಪಮಾನ ಮಾಡುವುದು ಹೆಚ್ಚಾಗುತ್ತಿದೆ. ಮಸಣಾಪುರ ಮತ್ತು ಹೊಂಗನೂರು ಗ್ರಾಮಗಳಲ್ಲಿ ನಡೆದ ಕೃತ್ಯ ಅತ್ಯಂತ ಖಂಡನೀಯವಾಗಿದ್ದು, ಈ ಸಂಬಂಧ ಎಸ್ಸಿ, ಎಸ್ಟಿ ಆಯೋಗ ಸೂಕ್ತ ಕ್ರಮವನ್ನು ವಹಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲೆಯಲ್ಲಿ ದಲಿತರ ಸಂಖ್ಯೆ ಹೆಚ್ಚಾಗಿದ್ದು, ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಕಿಡಿಗೇಡಿಗಳು ಅಪಮಾನ ಮಾಡುವ ಮೂಲಕ ನಮ್ಮ ಸಮುದಾಯವನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಕೇರಳಾ ಸರ್ಕಾರ ಜಾರಿಗೆ ತಂದಿರುವ ಮಹಾತ್ಮ ಗಾಂಧಿ ಮೂರ್ತಿ ಸಂರಕ್ಷಣಾ ಕಾಯ್ದೆಯಂತೆ ರಾಜ್ಯದಲ್ಲೂ ಅಂಬೇಡ್ಕರ್ ಭಾವಚಿತ್ರ ಮತ್ತು ಪ್ರತಿಮೆ ಸಂರಕ್ಷಣಾ ಕಾಯ್ದೆಯನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಮಹಾ ಸಭಾದ ಪದಾಧಿಕಾರಿಗಳಾದ ಕಾಗಲವಾಡಿ ಶಿವಸ್ವಾಮಿ, ವಾಸು ಹೊಂಡರಬಾಳು ಹಾಜರಿದ್ದರು.