*ಎಲ್.ಟಿ.ಟಿ.ಇ, ವೀರಪ್ಪನ್ ಗ್ಯಾಂಗ್ ನಡುವೆ ಸಂಪರ್ಕ ಎಂಬ ಆರೋಪಕ್ಕೆ ಸ್ಪಷ್ಟನೆ
*ಹನೂರು ಶೂಟೌಟ್ ಪ್ರಕರಣವನ್ನು ದಿಕ್ಕು ತಪ್ಪಿಸುವ ಪ್ರಯತ್ನ ಎಂದು ಆರೋಪ
ಚಾಮರಾಜನಗರ: ಹನೂರು ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ಹೋರಾಟಗಾರರು ಎಲ್.ಟಿ.ಟಿ.ಇ, ವೀರಪ್ಪನ್ ಗ್ಯಾಂಗ್ ನಡುವೆ ಸಂಪರ್ಕ ಹೊಂದಿದ್ದಾರೆ ಎಂದು ಪ್ರಸಾರವಾಗುತ್ತಿರುವ ಸುದ್ದಿಗಳು ಸತ್ಯಕ್ಕೆ ದೂರವಾಗಿವೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಶೈಲೇಂದ್ರ ಸ್ಪಷ್ಟಪಡಿಸಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಹನೂರು ಶೂಟೌಟ್ ಪ್ರಕರಣದಲ್ಲಿ ಹೋರಾಟಗಾರರು ವೀರಪ್ಪನ್ ಗ್ಯಾಂಗ್ ನವರು ಹಾಗೂ ಎಲ್.ಟಿ.ಟಿ.ಇ ಜೊತೆಗೆ ಸಂಬಂಧ ಹೊಂದಿದ್ದಾರೆ. ದೇಶವಿರೋಧಿ ಹಾಗೂ ಸಮಾಜ ಘಾತುಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಬಿಂಬಿಸಲಾಗುತ್ತಿದ್ದು, ಇದು ಶುದ್ಧ ಸುಳ್ಳಾಗಿದೆ. ಈ ರೀತಿಯಾಗಿ ಬಿಂಬಿಸಲು ಹೊರಟಿರುವ ಹೋರಾಟಗಾರರು ಪ್ರಮಾಣಿಕರಾಗಿದ್ದು, ಯಾವುದೇ ಸಂಘಟನೆಗಳ ಜೊತೆ ಸಂಬಂಧ ಹೊಂದಿರುವುದಿಲ್ಲ. ಹಾಗೆಯೇ ಇವರ ಮೇಲೆ ಯಾವುದೇ ಪ್ರಕರಣ ಈವರೆಗೂ ದಾಖಲಾಗಿರುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.
ವೀರಪ್ಪನ್ ಸಮಾಧಿಯ ಸ್ಥಳಕ್ಕೆ ಎಲ್ಲರೂ ಭೇಟಿ ನೀಡುವಂತೆ, ಇವರು ಭೇಟಿ ನೀಡಿ ಪೋಟೋ ತೆಗೆಸಿಕೊಂಡಿದ್ದಾರೆ. ಆ ಮಾತ್ರಕ್ಕೆ ಅವರು ವೀರಪ್ಪನ್ ಜೊತೆಗೆ ಸಂಪರ್ಕ ಹೊಂದಿದ್ದಾರೆ ಎಂದು ಹೇಳುವುದು ಎಷ್ಟು ಸರಿ. ಇನ್ನೂ ಮಾರ್ಟಳ್ಳಿ ವ್ಯಾಪ್ತಿಯ ಸಮಸ್ಯೆಗಳ ಕುರಿತು ಧ್ವನಿ ಎತ್ತುವ ನಿಟ್ಟಿನಲ್ಲಿ ಟೈಗರ್ ಆಫ್ ಜಸ್ಟೀಸ್ ಎಂಬ ವಾಟ್ಸಾಪ್ ಗ್ರೂಪ್ ರಚಿಸಲಾಗಿದೆ. ಆದರೇ ಇದನ್ನು ಕೆಲವರು ಅಪಪ್ರಚಾರ ಮಾಡಿ, ಅಮಾಯಕ ಹೋರಾಟಗಾರರನ್ನು ಸಮಾಜ ಘಾತುಕ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಕೆಲವು ಮಾಧ್ಯಮಗಳು ಬಿಂಬಿಸಿರುವುದು ಅತ್ಯಂತ ಖಂಡನೀಯ ಎಂದರು.
ಹನೂರಿನಲ್ಲಿ ಆ.15 ರಂದು ನಡೆದ ಪ್ರತಿಭಟನೆ ಸಮಯದಲ್ಲಿ ನಾವುಗಳು ಹೋಗಿ ಧಿಕ್ಕಾರ ಕೂಗುವ ಬದಲು ಎಲೆಮರೆ ಕಾಯಿಯಂತೆ ಅಲ್ಲಿನ ಶಾಸಕರ ಜೊತೆ ಸೇರಿ ಸಂಬಂಧಪಟ್ಟ ಕುಟುಂಬದವರನ್ನು ಕರೆಯಿಸಿ ಉಸ್ತುವಾರಿ ಸಚಿವರು ಬರುವಷ್ಟರಲ್ಲಿ ಮನವಿಯನ್ನು ಸಿದ್ಧಪಡಿಸಿದ್ದೇವು. ಆವತ್ತಿನ ರಾತ್ರಿ ಹನೂರು ಪೊಲೀಸ್ ಠಾಣೆಯಲ್ಲಿ ಶಾಸಕರ ಜೊತೆ ಮಾತನಾಡಿ 15 ಲಕ್ಷ ರೂ, ಪರಿಹಾರ ಕೊಡುವಂತೆ ನಾವೇ ಒತ್ತಾಯ ಮಾಡಿರುತ್ತೇವೆ. ನಮ್ಮಗಳ ಪಾತ್ರ ಏನು ಎಂಬುದು ಶಾಸಕರಿಗೆ ಪೋಲಿಸ್ ಇಲಾಖೆಗೆ ಸಂಪೂರ್ಣ ಗೊತ್ತಿರುವ ವಿಚಾರ, ಈಗಿರುವಾಗ ಕೇವಲ ಫೋಟೋ ಒಂದನ್ನು ಹಿಡಿದು ಆ ದಿನಗಳಲ್ಲಿ ನಡೆದಿರುವ ಅಹಿತಕರ ಘಟನೆಗಳಿಗೆ ಇವರ ಕೈವಾಡವಿದೆ ಎಂದು ಬಿಂಬಿಸುವುದು ಎಷ್ಟರ ಮಟ್ಟಿಗೆ ಸರಿ ಎಂಬುದನ್ನು ತಾವುಗಳೇ ಅರ್ಥಮಾಡಿಕೊಳ್ಳಬೇಕು. ಆದ್ದರಿಂದ ಮುಂದಿನ ದಿನಗಳಲ್ಲಿ ರೀತಿಯ ಅಪಪ್ರಚಾರದ ಸುದ್ದಿಗಳನ್ನು ಮಾಡದಂತೆ ಕೈಮುಗಿದು ಕೇಳಿಕೊಳ್ಳುತ್ತೇವೆ ಎಂದರು.
ವಕೀಲ ಅತಿಶಯ ಕುಮಾರ್ ಮಾತನಾಡಿ, ಸ್ಥಳೀಯವಾಗಿ ಹಲವಾರು ಸಮಸ್ಯೆಗಳು ತಾಂಡವವಾಡುತ್ತಿದ್ದು, ಈ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಟೈಗರ್ ಆಫ್ ಜಸ್ಟೀಸ್ ಎಂಬ ವಾಟ್ಸಾಪ್ ಗ್ರೂಪ್ ರಚಿಸಲಾಗಿದೆ. ಆದರೆ ಕೆಲವರು ಸ್ಥಳೀಯವಾಗಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಉದ್ದೇಶದಿಂದ ಅಮಾಯಕರನ್ನು ಕಿಡಿಗೇಡಿಗಳು ಎಂದು ಬಿಂಬಿಸಿದ್ದಾರೆ. ಇದು ಅತ್ಯಂತ ಖಂಡನೀಯ ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಅರ್ಪುತ್ ರಾಜ್, ವಸಂತ್ ಕುಮಾರ್, ಎನ್.ರಾಜು ಮೋಳೆ, ಲಾರೆನ್ಸ್, ಎಸ್.ಜಯದೀಪ್, ಡೇವಿಡ್ ಹಾಜರಿದ್ದರು.