*ಶ್ರೀ ಮಂಟೇಸ್ವಾಮಿ ಪರಂಪರೆಯ ಕಟ್ಟಾಳಿಗೆ ಒಲಿದ ಅವಕಾಶ
*ಪರಂಪರೆಯ ಮಹತ್ವ ಕುರಿತು ಹಲವಾರು ಕೃತಿ ರಚನೆ
ಚಾಮರಾಜನಗರ: ಮೈಸೂರು ವಿಶ್ವ ವಿದ್ಯಾಲಯದ ಶ್ರೀ ಮಂಟೇಸ್ವಾಮಿ, ಶ್ರೀರಾಚಪ್ಪಾಜಿ ಮತ್ತು ಶ್ರೀ ಸಿದ್ದಪ್ಪಾಜಿ ಅಧ್ಯಯನ ಪೀಠಕ್ಕೆ ಹಿರಿಯ ಸಾಹಿತಿ ಮಹಾದೇವ ಶಂಕನಪುರ ಅವರನ್ನು ಸಂದರ್ಶಕ ಪ್ರಾಧ್ಯಾಪಕರಾಗಿ ನೇಮಕ ಮಾಡಲಾಗಿದೆ.
ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಅನುಮೋದನೆ ಮೇರೆಗೆ ಹಾಗೂ ಸಿಂಡಿಕೇಟ್ ಸಭೆಯ ನಿರ್ಣಯದಂತೆ ಮಾನಸ ಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿರುವ “ಶ್ರೀ ಮಂಟೇಸ್ವಾಮಿ, ಶ್ರೀರಾಚಪ್ಪಾಜಿ ಮತ್ತು ಶ್ರೀ ಸಿದ್ದಪ್ಪಾಜಿ ಅಧ್ಯಯನ ಸಂಸ್ಥೆಗೆ ಸಂದರ್ಶಕ ಪ್ರಾಧ್ಯಾಪಕರಾಗಿ ಹಿರಿಯ ಸಾಹಿತಿ ಹಾಗೂ ಸಂಸ್ಕೃತಿ ಚಿಂತಕ ಮಹಾದೇವ ಶಂಕನಪುರ ಅವರನ್ನು ನೇಮಕ ಮಾಡಲಾಗಿತ್ತು. ಅದರಂತೆ ಅವರು ಕರ್ತವ್ಯಕ್ಕೆ ವರದಿಯನ್ನು ಮಾಡಿಕೊಂಡಿದ್ದಾರೆ.
ಮಂಟೇಸ್ವಾಮಿ ಪರಂಪರೆಯ ಕಟ್ಟಾಳು:
ಸಂಸ್ಕೃತಿ ಚಿಂತಕ ಹಾಗೂ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ಶಂಕನಪುರ ಮಹಾದೇವ ಅವರು ಮಂಟೇಸ್ವಾಮಿ ಶರಣ ಪರಂಪರೆಯ ಉಳಿವಿಗೆ ಸಾಕಷ್ಟು ಕೃಷಿ ಮಾಡುತ್ತಿದ್ದು, ಅದರ ಪ್ರತಿಫಲವಾಗಿ ಶ್ರೀ ಮಂಟೇಸ್ವಾಮಿ ಪೀಠಕ್ಕೆ ಸಂದರ್ಶಕ ಪ್ರಾಧ್ಯಾಪಕರಾಗುವ ಅವಕಾಶ ಒದಗಿ ಬಂದಿದೆ. ಚಾಮರಾಜನಗರ ಭಾಗದ ಜಾನಪದ ದೈವ ಶ್ರೀ ಮಂಟೇಸ್ವಾಮಿ ಪರಂಪರೆಯ ಸಾಹಿತ್ಯ, ಸಂಸ್ಕೃತಿ ಹಾಗೂ ಆಚರಣೆಗಳು ಪ್ರಬಲವಾಗಿ ನೆಲೆಗೊಳ್ಳಲು ಶಂಕನಪುರ ಮಹಾದೇವ ಅವರ ಕೊಡುಗೆ ಅಪಾರವಾಗಿದೆ. ಅದರಲ್ಲೂ ಐತಿಹಾಸಿಕ ಚಿಕ್ಕಲ್ಲೂರು ಜಾತ್ರಾ ಮಹೋತ್ಸವದಲ್ಲಿ ನಡೆಯುವ ಪಂಕ್ತಿಸೇವೆಯ ಆಚರಣೆಯ ಪರವಾಗಿ ನಿರಂತರವಾಗಿ ಧ್ವನಿ ಎತ್ತುವ ಮೂಲಕ ನಮ್ಮ ಭಾಗದ ಜಾನಪದ ಪರಂಪರೆಯನ್ನು ಉಳಿಸುವ ನಿಟ್ಟಿನಲ್ಲಿ ಅವರ ಹೋರಾಟ ಅಪಾರವಾಗಿದೆ. ಈ ನಿಟ್ಟಿನಲ್ಲಿ ಮಂಟೇಸ್ವಾಮಿ ಅಧ್ಯಯನ ಪೀಠಕ್ಕೆ ಅವರು ಸಂದರ್ಶಕ ಪ್ರಾಧ್ಯಾಪಕರಾಗಿರುವುದು ಕೂಡ ಔಚಿತ್ಯಪೂರ್ಣವಾಗಿದೆ.

ಡಾ.ನಂಜಯ್ಯ ಹೊಂಗನೂರು ಅವರ ಕಾಳಜಿ:
ಮೈಸೂರು ವಿಶ್ವ ವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾದ ಡಾ.ನಂಜಯ್ಯ ಹೊಂಗನೂರು ಅವರ ಕಾಳಜಿ ಹಾಗೂ ಪ್ರೋತ್ಸಾಹದಿಂದ ಮಹಾದೇವ ಶಂಕನಪುರ ಅವರನ್ನು ಶ್ರೀ ಮಂಟೇಸ್ವಾಮಿ ಅಧ್ಯಯನ ಪೀಠದ ಸಂದರ್ಶಕ ಪ್ರಾಧ್ಯಾಪಕರಾಗಿ ನೇಮಕ ಮಾಡಲಾಗಿದೆ. ಡಾ.ನಂಜಯ್ಯ ಹೊಂಗನೂರು ಅವರು ಚಾಮರಾಜನಗರ ಭಾಗದ ಜಾನಪದ ಪರಂಪರೆಯ ಕುರಿತು ಆಳವಾದ ಅಧ್ಯಯನ ಮಾಡಿದ್ದು, ಮಹಾದೇವ ಶಂಕನಪುರ ಅವರ ಆಯ್ಕೆಯಲ್ಲಿ ಅದು ಗೋಚರವಾಗುತ್ತದೆ. ಅದರಲ್ಲೂ ಚಾಮರಾಜನಗರ ಭಾಗದ ಇಬ್ಬರು ಹಿರಿಯ ಚಿಂತಕರು ಮೈಸೂರು ವಿಶ್ವ ವಿದ್ಯಾಲಯದ ಪ್ರಮುಖ ಸ್ಥಾನಗಳನ್ನು ಅಲಂಕರಿಸಿರುವುದು ನಮ್ಮ ಹೆಮ್ಮೆಯಾಗಿದೆ.
ಜಾನಪದ ಸಾಹಿತ್ಯ ಕೃಷಿ:
ಮಹಾದೇವ ಶಂಕನಪುರ ಅವರು ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದು, ಜೊತೆಜೊತೆಗೆ ಜಾನಪದ ಸಾಹಿತ್ಯ ಕೃಷಿಯನ್ನು ಮಾಡಿದ್ದಾರೆ. ಮಂಟೇಸ್ವಾಮಿ, ನೀಲಗಾರ ಪರಂಪರೆಯ ಕುರಿತು “ಮಂಟೇಸ್ವಾಮಿ ಮೂವ್ಮೆಂಟ್; ಚಿಕ್ಕಲ್ಲೂರು ಜಾತ್ರೆ”, “ಮಂಟೇಸ್ವಾಮಿ”, “ಮಂಟೇಸ್ವಾಮಿ ಮೌಖಿಕ ಚರಿತ್ರೆ” ಹಾಗೂ “ಮಂಟೇಸ್ವಾಮಿ ನೀಲಗಾರ ಪಂಥ” ಎಂಬ ಸಂಶೋಧನಾ ಕೃತಿಗಳನ್ನು ರಚಿಸಿದ್ದಾರೆ. ಅದಲ್ಲದೇ ಚಿಕ್ಕಲ್ಲೂರು ಜಾತ್ರೆ, ಕಪ್ಪಡಿ ಜಾತ್ರೆ ಹಾಗೂ ನೀಲಗಾರ ಸಂಪ್ರದಾಯ ಎಂಬ ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದಾರೆ.
ಪರಂಪರೆ ಉಳಿವಿಗೆ ನಿರಂತರ ಹೋರಾಟ:
ವರ್ಷದಲ್ಲಿ ಒಂದು ಬಾರಿ ನಡೆಯುವ ಚಿಕ್ಕಲ್ಲೂರು ಶ್ರೀಸಿದ್ದಪ್ಪಾಜಿ ಜಾತ್ರೆಯಲ್ಲಿ ನಡೆಯುವ “ಪಂಕ್ತಿಸೇವೆ” ಆಚರಣೆಯನ್ನು ಪ್ರಾಣಿಬಲಿ ಹೆಸರಿನಲ್ಲಿ ಹಲವರು ನಿಲ್ಲಿಸುವ ಪ್ರಯತ್ನ ಮಾಡಿದ್ದರು. ಈ ಸಂದರ್ಭದಲ್ಲಿ 2016-2026 ರವರೆಗೆ ಸುಮಾರು 10 ವರ್ಷಗಳ ಕಾಲ ಮಂಟೇಸ್ವಾಮಿ ಪರಂಪರೆ ರಕ್ಷಣಾ ಹೋರಾಟ ಸಮಿತಿ ಸದಸ್ಯರಾಗಿ ಶಂಕನಪುರ ಮಹಾದೇವ ಅವರು ಹೋರಾಟದಲ್ಲಿ ಭಾಗಿಯಾಗಿದ್ದರು. ಇತ್ತೀಚೆಗೆ ಪಂಕ್ತಿ ಸೇವೆ ಆಚರಣೆಯನ್ನು ಹೈಕೋರ್ಟ್ ಎತ್ತಿ ಹಿಡಿದಿದ್ದು, ಹೋರಾಟಗಾರರು ಹಾಗೂ ಮಂಟೇಸ್ವಾಮಿ ಪರಂಪರೆಗೆ ಸಂದ ಜಯ ಇದಾಗಿದೆ. ಈ ಹೋರಾಟದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದ ಮಹಾದೇವ ಶಂಕನಪುರ ಅವರ ಶ್ರಮ ಅಪಾರವಾಗಿದೆ. ಈ ನಿಟ್ಟಿನಲ್ಲಿ ಅವರು ಶ್ರೀ ಮಂಟೇಸ್ವಾಮಿ ಪೀಠದ ಸಂದರ್ಶಕ ಪ್ರಾಧ್ಯಾಪಕರಾಗಿರುವುದು ಮತ್ತಷ್ಟು ಚಟುವಟಿಕೆಗೆ ಅವಕಾಶವಾಗಲಿದೆ.