ಸೆ.2 ರಿಂದ ರಾಜ್ಯ ಮಟ್ಟದ ಅಹೋರಾತ್ರಿ ಪ್ರತಿಭಟನಾ ಧರಣಿ 

ಮಣಿಕಂಠ ಜನತಾ ರಾಯಭಾರಿ
1 Min Read

*ಪರಿಷ್ಕೃತ ಕನಿಷ್ಠ ವೇತನ ಜಾರಿಗೆ ಆಗ್ರಹಿಸಿ ಪ್ರತಿಭಟನಾ ಧರಣಿ 

*ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ ನೇತೃತ್ವ 

ಚಾಮರಾಜನಗರ, ಆ.26: ರಾಜ್ಯ ಸರ್ಕಾರ ಉದ್ಯಮಿಗಳಿಗೆ ಮಣಿಯದೇ ಪರಿಷ್ಕೃತ ಕನಿಷ್ಠ ವೇತನ ಕೂಡಲೇ ಜಾರಿಗೊಳಿಸುವಂತೆ ಒತ್ತಾಯಿಸಿ ಸೆ.2 ರಿಂದ ರಾಜ್ಯಮಟ್ಟದ ಅಹೋರಾತ್ರಿ ಪ್ರತಿಭಟನಾ ಧರಣಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಎಐಯುಟಿಯುಸಿ ರಾಜ್ಯ ಉಪಾಧ್ಯಕ್ಷ ಚಂದ್ರಶೇಖರ್ ಮೇಟಿ ತಿಳಿಸಿದರು.

ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ರಾಜ್ಯ ಮಟ್ಟದ ಅಹೋರಾತ್ರಿ ಧರಣಿಯನ್ನು ಹಮ್ಮಿಕೊಳ್ಳಲಾಗಿದೆ. ದಿನಾಂಕ 22.5.2026 ರ ಪರಿಷ್ಕೃತ ಕನಿಷ್ಠ ವೇತನ ಅಧಿಸೂಚನೆಯನ್ನು ಯಾವುದೇ ವಿಳಂಬವಿಲ್ಲದೆ ತಕ್ಷಣವೇ ಜಾರಿಗೊಳಿಸಬೇಕು. ಕೇವಲ ಜಾರಿಯನ್ನು ತಡೆಯುವ ಉದ್ದೇಶದಿಂದ ರಚಿಸಲಾದ ಸಚಿವ ಸಂಪುಟ ಸಮಿತಿಯನ್ನು ತಕ್ಷಣವೇ ರದ್ದುಗೊಳಿಸಬೇಕು. ಬಾಕಿ ಇರುವ ವೇತನ ವ್ಯತ್ಯಾಸವನ್ನು ತಕ್ಷಣವೇ ಕಾರ್ಮಿಕರಿಗೆ ಪಾವತಿಸಬೇಕು ಎಂಬ ಪ್ರಮುಖ ಆಗ್ರಹಗಳೊಂದಿಗೆ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಕಾರ್ಮಿಕರ ಸುದೀರ್ಘ ಹೋರಾಟದ ಫಲವಾಗಿ ಹೊರಡಿಸಲಾದ ಪರಿಷ್ಕೃತ ಕನಿಷ್ಠ ವೇತನ ಅಧಿಸೂಚನೆಯನ್ನು ಜಾರಿಗೊಳಿಸದೆ, ಉದ್ಯಮಪತಿಗಳ ಒತ್ತಡಕ್ಕೆ ಮಣಿದು ಪುನಃ ಪರಿಶೀಲನಾ ಸಮಿತಿ ರಚಿಸಿರುವ ಸರ್ಕಾರದ ಕಾರ್ಮಿಕ ವಿರೋಧಿ ಧೋರಣೆಯನ್ನು ಎಐಯುಟಿಯುಸಿ ಕರ್ನಾಟಕ ರಾಜ್ಯ ಸಮಿತಿ ತೀವ್ರವಾಗಿ ಖಂಡಿಸುತ್ತದೆ. ಈ ತಡೆಯಾಜ್ಞೆ ಹಾಗೂ ವಿಳಂಬ ನೀತಿಯನ್ನು ವಿರೋಧಿಸಿ, ಪರಿಷ್ಕೃತ ವೇತನ ತಕ್ಷಣ ಜಾರಿಗೊಳಿಸುವಂತೆ ಒತ್ತಾಯಿಸಿ ಸೆಪ್ಟೆಂಬರ್ 2 ರಿಂದ ಫ್ರೀಡಂ ಪಾರ್ಕ್ನಲ್ಲಿ ರಾಜ್ಯ ಮಟ್ಟದ ಬೃಹತ್ ಅಹೋರಾತ್ರಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಎಲ್ಲಾ ಜಿಲ್ಲೆ ಗಳಿಂದ ಸಹಸ್ರಾರು ಕಾರ್ಮಿಕರು ಮತ್ತು ನೌಕರರು ಈ ಹೋರಾಟದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಎಐಯುಟಿಯುಸಿ ಉಪಾಧ್ಯಕ್ಷರಾದ ಉಮಾದೇವಿ, ಬಣ್ಣಾರಿ ಅಮ್ಮಾನ್ ಕಾರ್ಮಿಕರ ಸಂಘದ ಅಧ್ಯಕ್ಷ ಭೃಂಗೇಶ್, ದಡದಹಳ್ಳಿ ಕುಮಾರ್, ಸೋಮವಾರಪೇಟೆ ಕುಮಾರ್ ಹಾಜರಿದ್ದರು.

Share this Article
Leave a comment